ADVERTISEMENT

ನಿವೃತ್ತಿ ಘೋಷಿಸಿದ ಟೇಬಲ್ ಟೆನಿಸ್ ದಂತಕಥೆ ಅಚಂತ ಶರತ್ ಕಮಲ್

ಐದು ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ್ದ ಟೇಬಲ್‌ ಟೆನಿಸ್ ದಂತಕಥೆ

ಪಿಟಿಐ
Published 5 ಮಾರ್ಚ್ 2025, 10:38 IST
Last Updated 5 ಮಾರ್ಚ್ 2025, 10:38 IST
<div class="paragraphs"><p>ಅಚಂತ ಶರತ್ ಕಮಲ್</p></div>

ಅಚಂತ ಶರತ್ ಕಮಲ್

   

ಚೆನ್ನೈ: ಭಾರತದ ಟೇಬಲ್ ಟೆನಿಸ್ ದಂತಕಥೆ ಅಚಂತ ಶರತ್ ಕಮಲ್ ಅವರು ಎರಡು ದಶಕಗಳ ವೃತ್ತಿ ಜೀವನಕ್ಕೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

ಚೆನ್ನೈಯಲ್ಲಿ ಇದೇ ತಿಂಗಳ 25 ರಿಂದ 30ರವರೆಗೆ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ ಟೂರ್ನಿಯು ತಮ್ಮ ವೃತ್ತಿ ಜೀವನದ ಕೊನೆಯ ಸ್ಪರ್ಧೆಯಾಗಿರಲಿದೆ ಎಂದು 42 ವರ್ಷ ವಯಸ್ಸಿನ ಶರತ್ ತಿಳಿಸಿದ್ದಾರೆ.

ADVERTISEMENT

‘ಚೆನ್ನೈಯಲ್ಲಿ ನಾನು ಮೊದಲ ಅಂತರರಾಷ್ಟ್ರೀಯ ಟೂರ್ನಿ ಆಡಿದ್ದೇನೆ. ಈಗ ನನ್ನ ಕೊನೆಯ ಅಂತರರಾಷ್ಟ್ರೀಯ ಟೂರ್ನಿಯನ್ನು ಚೆನ್ನೈನಲ್ಲಿಯೇ ಆಡಲಿದ್ದೇನೆ. ಒಬ್ಬ ವೃತ್ತಿಪರ ಕ್ರೀಡಾಪಟುವಾಗಿ ಇದು ನನ್ನ ಕೊನೆಯ ಟೂರ್ನಿಯಾಗಿರಲಿದೆ’ ಎಂದು ಹೇಳಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಏಳು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದಿರುವ ಅವರು ಏಷ್ಯನ್ ಗೇಮ್ಸ್‌ನಲ್ಲಿ ಎರಡು ಕಂಚು ಮತ್ತು ಏಷ್ಯನ್‌ ಚಾಂಪಿಯನ್‌ಪಿಷ್‌ನಲ್ಲಿ ನಾಲ್ಕು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

2004ರಿಂದ ಐದು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶರತ್, ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದರು.‌

‘ನನ್ನ ಬೀರುವಿನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಪದಕಗಳಿವೆ. ಆದರೆ ಒಲಿಂಪಿಕ್ಸ್ ಪದಕಗಳಿಲ್ಲ. ಕಿರಿಯ ಪ್ರತಿಭೆಗಳ ಮೂಲಕ ನನ್ನ ಕನಸನ್ನು ಜೀವಂತವಾಗಿಡುವೆ’ ಎಂದು ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ (ಐಟಿಟಿಎಫ್) ರ‍್ಯಾಂಕಿಂಗ್‌ ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿರುವ ಅವರು, ಈಗಲೂ ಭಾರತದ ಅಗ್ರಮಾನ್ಯ ಆಟಗಾರ ಎಂಬ ಹಿರಿಮೆಯನ್ನು ಹೊಂದಿದ್ದಾರೆ.

ಟೇಬಲ್ ಟೆನಿಸ್‌ಗೆ ವಿದಾಯಕ್ಕೆ ಸಂಬಂಧಿಸಿದಂತೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶರತ್ ಕಮಲ್, ಸುದೀರ್ಘ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಶರತ್ ಅವರು ಪ್ರಸ್ತುತ ಭಾರತ ಒಲಿಂಪಿಕ್ ಸಂಸ್ಥೆಯ ಕ್ರೀಡಾಪಟುಗಳ ಆಯೋಗದ ಉಪಾಧ್ಯಕ್ಷರಾಗಿದ್ದಾರೆ.

ಶರತ್‌ ಕಮಲ್‌ ಹೆಜ್ಜೆಗುರುತು

ಊರು: ಚೆನ್ನೈ

ವಯಸ್ಸು: 42 ವರ್ಷ

ಗರಿಷ್ಠ ವಿಶ್ವ ರ‍್ಯಾಂಕಿಂಗ್‌: 30 (2019)

ಪ್ರಸ್ತುತ ರ‍್ಯಾಂಕಿಂಗ್‌: 42

* ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಆರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚು

* ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಕಂಚು

* ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಕಂಚಿನ ಪದಕ

* ದಾಖಲೆಯ 10 ಬಾರಿ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌

* 2004ರ ಅಥೆನ್ಸ್‌, 2008ರ ಬೀಜಿಂಗ್‌, 2016ರ ರಿಯೊ, 2020 ಟೋಕಿಯೊ, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗಿ

* 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, 2022ರಲ್ಲಿ ಖೇಲ್‌ ರತ್ನ ಪ್ರಶಸ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.