ADVERTISEMENT

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌: ಅವಳಿ ‘ವೀರ’ ಸಹೋದರರ ಕಮಾಲ್

ವಿಜಯವೀರ್, ಉದಯವೀರ್‌ಗೆ ಪದಕ; ಪಂಜಾಬ್‌ ಪಾರಮ್ಯ

ಪಿಟಿಐ
Published 21 ನವೆಂಬರ್ 2021, 11:21 IST
Last Updated 21 ನವೆಂಬರ್ 2021, 11:21 IST
ವಿಜಯ್‌ವೀರ್ ಸಿದ್ದು –ಎಎಫ್‌ಪಿ ಚಿತ್ರ
ವಿಜಯ್‌ವೀರ್ ಸಿದ್ದು –ಎಎಫ್‌ಪಿ ಚಿತ್ರ   

ನವದೆಹಲಿ: ಅವಳಿ ಸಹೋದರರಾದ ವಿಜಯವೀರ್ ಮತ್ತು ಉದಯವೀರ್ ಸಿದ್ದು ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನ 25 ಮೀಟರ್ಸ್ ಪಿಸ್ತೂಲ್ ಜೂನಿಯರ್‌ ವಿಭಾಗದಲ್ಲಿ ಮೊದಲ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

ವಿಜಯವೀರ್‌ 587 ಸ್ಕೋರು ಗಳಿಸಿ ಚಿನ್ನಕ್ಕೆ ಮುತ್ತಿಕ್ಕಿದರೆ ಉದಯವೀರ್ ಒಂದು ಪಾಯಿಂಟ್‌ನಿಂದ ಹಿಂದೆ ಉಳಿದು ಬೆಳ್ಳಿ ಪದಕ ಗೆದ್ದುಕೊಂಡರು. ಹರಿಯಾಣದ ಶಿವ ನರ್ವಾಲ್ 582 ಸ್ಕೋರು ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು. ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಪಂಜಾಬ್‌ ಅಗ್ರಸ್ಥಾನದಲ್ಲಿದೆ.

25 ಮೀಟರ್ಸ್ ಪಿಸ್ತೂಲ್ ತಂಡ ವಿಭಾಗದಲ್ಲೂ ಚಿನ್ನದ ಪದಕ ಪಂಜಾಬ್ ಪಾಲಾಯಿತು. ರಾಜ್‌ ಕನ್ವರ್ ಸಿಂಗ್ ಸಂಧು, ಫತೇಜೀತ್ ಸಿಂಗ್‌ ಮತ್ತು ಅಮನ್‌ಪ್ರೀತ್‌ ಸಿಂಗ್ ಚಿನ್ನದ ಪದಕ ಗಳಿಸಿಕೊಟ್ಟರು. ಇವರು ಕ್ರಮವಾಗಿ 577, 571 ಮತ್ತು 569 ಸ್ಕೋರು ಕಲೆ ಹಾಕಿದರು. ಪಂಜಾಬ್‌ ಒಟ್ಟಾರೆ 1717 ಸ್ಕೋರು ಗಳಿಸಿದರೆ1715ರೊಂದಿಗೆ ಹರಿಯಾಣ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡಿತು. ಕಂಚಿನ ಪಕದ ದೆಹಲಿ ಪಾಲಾಯಿತು.

ADVERTISEMENT

ಸಿವಿಲಿಯನ್ ಜೂನಿಯರ್ ಪುರುಷರ 25 ಮೀಟರ್ಸ್ ಪಿಸ್ತೂಲ್ ಜೂನಿಯರ್‌ ವಿಭಾಗದಲ್ಲಿ ಹರಿಯಾಣದ ಅಭಿಮನ್ಯು ಯಾದವ್‌, ಸಮೀರ್ ಮತ್ತು ಜತಿನ್ ಅವರನ್ನು ಒಳಗೊಂಡ ತಂಡ1714-1704ರಲ್ಲಿ ಪಂಜಾಬ್ ವಿರುದ್ಧ ಜಯ ಗಳಿಸಿತು. ಜಗ್‌ವಿಜಯ್‌ ಶೆಖಾನ್‌, ಫತೇಜೀತ್ ಮತ್ತು ಅಮನ್‌ಪ್ರೀತ್ ಅವರು ಪಂಜಾಬ್ ಪ್ರತಿನಿಧಿಸಿದ್ದರು. ಕಂಚಿನ ಪದಕ ಮಧ್ಯಪ್ರದೇಶದ ಪಾಲಾಯಿತು.

ಜೂನಿಯರ್ ಪುರುಷರ ವೈಯಕ್ತಿಕ ಪಿಸ್ತೂಲು ವಿಭಾಗದಲ್ಲಿ ಉದಿತ್ ಜೋಶಿ 575 ಪಾಯಿಂಟ್ ಗಳಿಸಿ ಚಿನ್ನ ಗೆದ್ದುಕೊಂಡರು. ಇದು ಮಧ್ಯಪ್ರದೇಶಕ್ಕೆ ಲಭಿಸಿದ ದಿನದ ಮೊದಲ ಚಿನ್ನ ಆಗಿತ್ತು. ಅಭಿಮನ್ಯು ಯಾದವ್ ಬೆಳ್ಳಿ ಗಳಿಸಿದರೆ ತಮಿಳುನಾಡಿನ ಮಹೇಶ್‌ ಪಶುಪತಿ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.