ADVERTISEMENT

ಪ್ರೊ ಕಬಡ್ಡಿ ಲೀಗ್‌: ಯು ಮುಂಬಾ ಎದುರು ಸೋತ ಬೆಂಗಳೂರು ಬುಲ್ಸ್‌

ಪವನ್ ಶೆರಾವತ್ ಮತ್ತೆ ಸೂಪರ್ ಟನ್‌ ಸಾಧನೆ; ಅಭಿಷೇಕ್ ಮಿಂಚು

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 15:50 IST
Last Updated 26 ಜನವರಿ 2022, 15:50 IST
ಬೆಂಗಳೂರು ಬುಲ್ಸ್ ರೇಡರ್‌ ಯು ಮುಂಬಾ ಆವರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು –ಟ್ವಿಟರ್ ಚಿತ್ರ
ಬೆಂಗಳೂರು ಬುಲ್ಸ್ ರೇಡರ್‌ ಯು ಮುಂಬಾ ಆವರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು –ಟ್ವಿಟರ್ ಚಿತ್ರ   

ಬೆಂಗಳೂರು: ರೇಡರ್, ನಾಯಕ ಪವನ್ ಶೆರಾವತ್ ಮತ್ತೊಮ್ಮೆ ಮಿಂಚಿನ ಆಟದ ಮೂಲಕ ‘ಸೂಪರ್ ಟೆನ್’ ಸಾಧನೆ ಮಾಡಿದರು. ರೇಡರ್ ಭರತ್ ಮತ್ತು ಡಿಫೆಂಡರ್ ಸೌರೌಭ್ ನಂದಾಲ್ ಅವರಿಂದ ಶೆರಾವತ್‌ಗೆ ಉತ್ತಮ ಬೆಂಬಲವೂ ಲಭಿಸಿತು. ಆದರೆ ಯು ಮುಂಬಾದ ಸಂಘಟಿತ ಹೋರಾಟದ ಎದುರು ಬೆಂಗಳೂರು ಬುಲ್ಸ್ ಸಪ್ಪೆಯಾಯಿತು.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್‌ನ ಬುಧವಾರದ ಪಂದ್ಯದಲ್ಲಿ ಯು ಮುಂಬಾ 45–34ರಲ್ಲಿ ಬುಲ್ಸ್ ವಿರುದ್ಧ ಜಯ ಗಳಿಸಿತು. ಡಿಫೆಂಡರ್‌ ಫಜಲ್ ಅತ್ರಾಚಲಿ ನೇತೃತ್ವದ ಮುಂಬಾ ತಂಡ ಆರಂಭದಿಂದಲೇ ಟ್ಯಾಕ್ಲಿಂಗ್‌ನಲ್ಲಿ ಪಾಯಿಂಟ್‌ಗಳನ್ನು ಗಳಿಸುತ್ತ ಸಾಗಿತು. ಅತ್ತ ಪವನ್ ಶೆರಾವತ್ ಭರ್ಜರಿ ರೇಡ್ ಮೂಲಕ ಪಾಯಿಂಟ್‌ಗಳನ್ನು ತಂದುಕೊಟ್ಟರು.

ಮೊದಲಾರ್ಧದ ಮುಕ್ತಾಯದ ವೇಳೆ ಯು ಮುಂಬಾ ಎರಡು ಪಾಯಿಂಟ್‌ಗಳ ಮುನ್ನಡೆ (22–20) ಗಳಿಸಿತ್ತು. ಎರಡೂ ತಂಡಗಳು ರೇಡಿಂಗ್‌ನಲ್ಲಿ ತಲಾ 13 ಪಾಯಿಂಟ್‌ ಕಲೆ ಹಾಕಿದರೆ ಮುಂಬಾ ಟ್ಯಾಕ್ಲಿಂಗ್‌ನಲ್ಲಿ 7 ಪಾಯಿಂಟ್ ಗಳಿಸಿತು. ದ್ವಿತೀಯಾರ್ಧದಲ್ಲಿ ಮುಂಬಾ ಆಲ್‌ರೌಂಡ್ ಆಟವಾಡಿತು. ಅಭಿಷೇಕ್ ಸಿಂಗ್ ರೇಡಿಂಗ್‌ನಲ್ಲೂ ರಾಹುಲ್ ಸೇತ್‌ಪಾಲ್ ಟ್ಯಾಕ್ಲಿಂಗ್‌ನಲ್ಲೂ ಸಾಧನೆ ಮಾಡಿದರು. ಅಭಿಷೇಕ್‌ 11 ಟಚ್ ಪಾಯಿಂಟ್‌ ಗಳಿಸಿದರೆ ರಾಹುಲ್ 8 ಪಾಯಿಂಟ್ ಗಳಿಸಿದರು. ರೇಡರ್ ಅಜಿತ್ ಕೂಡ 8 ಪಾಯಿಂಟ್ ಕಲೆ ಹಾಕಿದರು.

ADVERTISEMENT

ಬುಲ್ಸ್‌ಗಾಗಿ ಪವನ್ 11 ಟಚ್ ಪಾಯಿಂಟ್ ಸೇರಿದಂತೆ ಒಟ್ಟು 14 ಪಾಯಿಂಟ್ ಗಳಿಸಿದರು. ಭರತ್ 7 ಮತ್ತು ಸೌರಭ್ ನಂದಾಲ್ 4 ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.