ADVERTISEMENT

ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ತನ್ವಿ-ಆಯುಷ್‌

ಪಿಟಿಐ
Published 29 ಜೂನ್ 2025, 6:14 IST
Last Updated 29 ಜೂನ್ 2025, 6:14 IST
<div class="paragraphs"><p> ಆಯುಷ್‌ ಶೆಟ್ಟಿ&nbsp;ಮತ್ತು ತನ್ವಿ ಶರ್ಮಾ </p></div>

ಆಯುಷ್‌ ಶೆಟ್ಟಿ ಮತ್ತು ತನ್ವಿ ಶರ್ಮಾ

   

ಅಯೋವಾ, ಅಮೆರಿಕ: ಗೆಲುವಿನ ಓಟ ಮುಂದುವರಿಸಿರುವ ಭಾರತದ ಭರವಸೆಯ ಆಟಗಾರರಾದ ಆಯುಷ್‌ ಶೆಟ್ಟಿ ಮತ್ತು ತನ್ವಿ ಶರ್ಮಾ ಅವರು ಭಾನುವಾರ ಯುಎಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ನಾಲ್ಕನೇ ಶ್ರೇಯಾಂಕದ ಆಯುಷ್‌ ಸೆಮಿಫೈನಲ್‌ನ ರೋಚಕ ಹಣಾಹಣಿಯಲ್ಲಿ 21-23, 21-15, 21-14ರಿಂದ ಅಗ್ರ ಶ್ರೇಯಾಂಕದ ಚೌ ಟಿಯೆನ್ ಚೆನ್ (ಚೀನಾ ತೈಪೆ) ವಿರುದ್ಧದ ಸವಾಲನ್ನು ಗೆದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 32ನೇ ಸ್ಥಾನದಲ್ಲಿರುವ ಆಯುಷ್‌, ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಹೋರಾಟದಲ್ಲಿ ವಿಶ್ವದ ಆರನೇ ರ‍್ಯಾಂಕ್‌ನ ಆಟಗಾರನನ್ನು ಹಿಮ್ಮೆಟ್ಟಿಸಿದರು.

ADVERTISEMENT

ಕರ್ನಾಟಕದ 20 ವರ್ಷ ವಯಸ್ಸಿನ ಆಯುಷ್ ಸೋಮವಾರ ನಡೆಯುವ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಬ್ರಿಯಾನ್ ಯಾಂಗ್ ಅವರನ್ನು ಎದುರಿಸಲಿದ್ದಾರೆ. ಕೆನಡಾದ ಬ್ರಿಯಾನ್ ಮತ್ತೊಂದು ಸೆಮಿಫೈನಲ್‌ನಲ್ಲಿ 21-10, 21-12ರಿಂದ ಚೀನಾ ತೈಪೆಯ ಲಿಯಾವೊ ಜುವೊ-ಫು ವಿರುದ್ಧ ಜಯಿಸಿದರು. 

16 ವರ್ಷ ವಯಸ್ಸಿನ ಶ್ರೇಯಾಂಕರಹಿತ ಆಟಗಾರ್ತಿ ತನ್ವಿ ಮಹಿಳೆಯರ ಸಿಂಗಲ್ಸ್‌ನ ನಾಲ್ಕರ ಘಟ್ಟದ ಹಣಾಹಣಿಯಲ್ಲಿ 21-14, 21-16ರಿಂದ ಏಳನೇ ಶ್ರೇಯಾಂಕದ ಪೊಲಿನಾ ಬುಹ್ರೋವಾ ಅವರಿಗೆ ಆಘಾತ ನೀಡಿದರು. ಭಾರತದ ಹದಿಹರೆಯದ ಆಟಗಾರ್ತಿಗೆ ವೃತ್ತಿಜೀವನದಲ್ಲಿ ಉಕ್ರೇನ್‌ನ ಬುಹ್ರೋವಾ ವಿರುದ್ಧ ಗಳಿಸಿದ ಎರಡನೇ ಗೆಲುವು ಇದಾಗಿದೆ. 

ಸೋಮವಾರ ನಡೆಯುವ ಪ್ರಶಸ್ತಿ ಸುತ್ತಿನಲ್ಲಿ ತನ್ವಿ, ಅಗ್ರ ಶ್ರೇಯಾಂಕದ ಬೀವೆನ್ ಜಾಂಗ್ (ಅಮೆರಿಕ) ವಿರುದ್ಧ ಪೈಪೋಟಿ ನಡೆಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.