
ನವದೆಹಲಿ: 14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ, ಏಳು ವರ್ಷದ ಚೆಸ್‌ಪಟು ವಾಕಾ ಲಕ್ಷ್ಮಿ ಪ್ರಗ್ನಿಕಾ ಸೇರಿದಂತೆ 20 ಮಕ್ಕಳಿಗೆ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಶುಕ್ರವಾರ ಪ್ರದಾನ ಮಾಡಿದರು.
ಕ್ರೀಡೆ, ಶೌರ್ಯ, ಸಾಮಾಜಿಕ ಸೇವೆ ಮತ್ತು ಪರಿಸರ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಾಗಿ ನೀಡಲಾಗುವ ಈ ಪ್ರಶಸ್ತಿಗೆ ಕರ್ನಾಟಕದ ಈಜು ಪ್ರತಿಭೆ ಧಿನಿಧಿ ದೇಸಿಂಗು ಕೂಡ ಪಾತ್ರರಾಗಿದ್ದಾರೆ.
ಬುಧವಾರ ರಾಂಚಿಯಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಬಿಹಾರ ತಂಡದ ಸೂರ್ಯವಂಶಿ 84 ಎಸೆತಗಳಲ್ಲಿ 16 ಬೌಂಡರಿ ಮತ್ತು 15 ಸಿಕ್ಸರ್‌ಗಳೊಂದಿಗೆ 190 ರನ್ ಗಳಿಸಿದ್ದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ (14 ವರ್ಷ, 272 ದಿನ) ಆಟಗಾರ ಎಂಬ ದಾಖಲೆ ಬರೆದರು. ಅವರು ಕೇವಲ 36 ಎಸೆತಗಳಲ್ಲಿ ಮೂರು ಅಂಕಿಗಳ ಗಡಿಯನ್ನು ದಾಟಿದ್ದರು. ಈ ಪಂದ್ಯದಲ್ಲಿ ಬಿಹಾರ ತಂಡವು 6 ವಿಕೆಟ್‌ಗೆ 574 ರನ್ ಗಳಿಸಿತು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ.
ವರ್ಷದ ಆರಂಭದಲ್ಲಿ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ವೈಭವ್, ಗುಜರಾತ್ ಟೈಟನ್ಸ್ ವಿರುದ್ಧ 38 ಎಸೆತಗಳಲ್ಲಿ 101 ರನ್ ಗಳಿಸಿದ್ದರು. ಅದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ವಯಸ್ಸಿನ ಬ್ಯಾಟರ್ ಎಂಬ ದಾಖಲೆ ಬರೆದರು. 35 ಎಸೆತಗಳಲ್ಲಿ ಮೂರಂಕಿ ದಾಟಿದ ಅವರು, ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗದ ಶತಕ ದಾಖಲಿಸಿದ್ದರು.
ಸೂರತ್‌ನ ಪ್ರಗ್ನಿಕಾ, ಸರ್ಬಿಯಾದಲ್ಲಿ ನಡೆದ 2025ರ ಫಿಡೆ ವಿಶ್ವ ಶಾಲಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ 7 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿಯನ್ನು ಗೆದ್ದರು. ಅಲ್ಲಿ 9 ರಲ್ಲಿ 9 ಅಂಕಗಳನ್ನು ಗಳಿಸಿ ಪಾರಮ್ಯ ಮೆರೆದಿದ್ದರು.
ಬೆಂಗಳೂರಿನ ಈಜುತಾರೆಗೆ ಪುರಸ್ಕಾರ
ಬೆಂಗಳೂರಿನ 15 ವರ್ಷದ ಧಿನಿಧಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಒಲಿಂಪಿಕ್ಸ್‌ನ ಭಾರತದ ತುಕಡಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು ಅವರಾಗಿದ್ದರು. 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಪರಿಣತಿ ಹೊಂದಿರುವ ಧಿನಿಧಿ 100 ಮೀಟರ್ ಫ್ರೀಸ್ಟೈಲ್ ಮತ್ತು 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲೂ ಸ್ಪರ್ಧಿಸುತ್ತಾರೆ. 2022ರ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಭಾರತದ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು ಅವರಾಗಿದ್ದರು.
ಸಿ.ವಿ.ರಾಮನ್ ನಗರದ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿರುವ ಧಿನಿಧಿ 2018ರಲ್ಲಿ ಹವ್ಯಾಸಕ್ಕಾಗಿ ಈಜು ಕಲಿಯಲು ಆರಂಭಿಸಿದ್ದರು. ಕ್ರಮೇಣ ಪರಿಣತಿ ಪಡೆದ ಅವರು ಸ್ಪರ್ಧಾತ್ಮಕ ಈಜಿನಲ್ಲಿ ತೊಡಗಿಸಿಕೊಂಡರು. ಅವರು ಡಾಲ್ಫಿನ್ ಅಕ್ವಾಟಿಕ್ಸ್‌ನ ಬಿ.ಎಂ. ಮಧು ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
2023ರಲ್ಲಿ 100 ಮೀ ಫ್ರೀಸ್ಟೈಲ್‌ನಲ್ಲಿ ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದರು. 200 ಮೀ ಫ್ರೀಸ್ಟೈಲ್ ಮತ್ತು 200 ಮೀ ವೈಯಕ್ತಿಕ ಮೆಡ್ಲೆಯಲ್ಲೂ ದಾಖಲೆ ನಿರ್ಮಿಸಿದ್ದರು. ಗೋವಾದಲ್ಲಿ ನಡೆದ (2023) ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದರು. ದೋಹಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಯೂ ಭಾಗವಹಿಸಿದ್ದರು. ಒಡಿಶಾದಲ್ಲಿ ನಡೆದ 78ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ 100 ಮೀ. ಮತ್ತು 200 ಮೀ.ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆಗಳೊಂದಿಗೆ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.