ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ಸಿಮ್ರನ್‌ಜೀತ್‌, ನಮಿತಾ

ಹಾಕಿ: ಭಾರತ ಪುರುಷರ ಬಳಗದಲ್ಲಿ ವರುಣ್, ಮಹಿಳೆಯರ ತಂಡದಲ್ಲಿ ರೀನಾಗೆ ಅವಕಾಶ

ಪಿಟಿಐ
Published 14 ಜುಲೈ 2021, 11:54 IST
Last Updated 14 ಜುಲೈ 2021, 11:54 IST
ಅಭ್ಯಾಸ ನಿರತ ಭಾರತ ಹಾಕಿ ತಂಡ -ಟ್ವಿಟರ್ ಚಿತ್ರ
ಅಭ್ಯಾಸ ನಿರತ ಭಾರತ ಹಾಕಿ ತಂಡ -ಟ್ವಿಟರ್ ಚಿತ್ರ   

ನವದೆಹಲಿ: ಡಿಫೆಂಡರ್ ವರುಣ್ ಕುಮಾರ್ ಮತ್ತು ಮಿಡ್‌ಫೀಲ್ಡರ್‌ ಸಿಮ್ರನ್‌ಜೀತ್ ಸಿಂಗ್ ಅವರನ್ನು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ಹಾಕಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಮಹಿಳಾ ತಂಡದಲ್ಲಿ ಡಿಫೆಂಡರ್ ರೀನಾ ಖೋಖಾರ್ ಮತ್ತು ಅನುಭವಿ ಮಿಡ್‌ಫೀಲ್ಡರ್ ನಮಿತಾ ಟೊಪ್ಪೊಗೆ ಸ್ಥಾನ ನೀಡಲಾಗಿದೆ.

ಕೋವಿಡ್‌ ಆತಂಕದ ನಡುವೆಯೇ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ತಂಡದ ಸದಸ್ಯರಲ್ಲಿ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಬದಲಿ ಆಟಗಾರರನ್ನು ಬಳಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತ ಪುರುಷ ಮತ್ತು ಮಹಿಳೆಯರ ತಂಡದಲ್ಲಿ ತಲಾ ಇಬ್ಬರನ್ನು ಸೇರ್ಪಡೆಗೊಳಿಸಲಾಗಿದೆ. ತಲಾ 16 ಮಂದಿಯ ತಂಡಗಳನ್ನು ಹಾಕಿ ಇಂಡಿಯಾ ಈಗಾಗಲೇ ಪ್ರಕಟಿಸಿತ್ತು.

‘ಭಾರತ ಹಾಕಿ ತಂಡದಲ್ಲಿ ಈಗ ತಲಾ 18 ಮಂದಿ ಇದ್ದಾರೆ. ಹೆಚ್ಚುವರಿಯಾಗಿ ಸೇರ್ಪಡೆಗೊಂಡ ನಾಲ್ವರನ್ನು ಪ್ರತಿಯೊಂದು ಪಂದ್ಯದ ವೇಳೆಯೂ ಆಯ್ಕೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು. ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವಿಶೇಷ ಮಾರ್ಗಸೂಚಿಗಳಲ್ಲಿ ಇದನ್ನು ಉಲ್ಲೇಖಿಲಾಗಿದೆ’ ಎಂದು ಹಾಕಿ ಇಂಡಿಯಾ ತಿಳಿಸಿದೆ.

ADVERTISEMENT

ಇಲ್ಲಿಯ ವರೆಗೆ ಒಲಿಂಪಿಕ್ಸ್‌ಗೆ ತೆರಳುವ 16 ಮಂದಿಯ ತಂಡದಲ್ಲಿ ಕಾಯ್ದಿರಿಸಿದ ಆಟಗಾರರನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಮುಖ್ಯ ತಂಡದ ಯಾರಿಗಾದರೂ ಯಾಗವಾದರೆ ಅಥವಾ ತಂಡದಿಂದ ಹೊರಬಿದ್ದರೆ ಮಾತ್ರ ಅವರನ್ನು ಕಣಕ್ಕೆ ಇಳಿಸಲು ಅವಕಾಶ ಇತ್ತು.

ವರುಣ್, ಸಿಮ್ರನ್‌ಜೀತ್ ಮತ್ತು ರೀನಾ ಇದೇ ಮೊದಲ ಬಾರಿ ಒಲಿಂಪಿಕ್ಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ನಮಿತಾ ಟೊಪ್ಪೊ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ತಂಡದಲ್ಲಿ ಇದ್ದರು. ಡ್ರ್ಯಾಗ್ ಫ್ಲಿಕ್ಕರ್ ಪರಿಣಿತ ವರುಣ್ 2016ರಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿ ಆಡಿದ್ದರು. ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್‌, ರೂಪಿಂದರ್ ಪಾಲ್ ಸಿಂಗ್ ಮತ್ತು ಅಮಿತ್ ರೋಹಿದಾಸ್ ಅವರಿಗೆ ವರುಣ್ ಬಲ ತುಂಬಲಿದ್ದಾರೆ.

ನಾಯಕ ಮನ್‌ಪ್ರೀತ್ ಸಿಂಗ್ ನೇತೃತ್ವದ ಮಿಡ್‌ಫೀಲ್ಡ್ ವಿಭಾಗ ಸಿಮ್ರನ್ ಜೀತ್ ಸಿಂಗ್ ಅವರಿಂದ ಇನ್ನಷ್ಟು ಬಲಿಷ್ಠವಾಗಲಿದೆ. ಜಲಂಧರ್‌ನ ಸುರ್‌ಹಿತ್ ಸಿಂಗ್ ಹಾಕಿ ಅಕಾಡೆಮಿಯಲ್ಲಿ ಬೆಳೆದ ಸಿಮ್ರನ್‌ಜೀತ್ ಕೂಡ 2016ರ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ತಂಡಕ್ಕೆ ಈಗಾಗಲೇ ಆಯ್ಕೆಯಾಗಿರುವ ಗುರುಜಂತ್ ಸಿಂಗ್ ಅವರು ಸಿಮ್ರನ್‌ಜೀತ್‌ ಅವರ ಸಹೋದರ ಸಂಬಂಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.