
ಟೊರಾಂಟೊ: ಹಿಂದಿನ ಪಂದ್ಯದ ಸೋಲಿನ ನಂತರ ಅಮೋಘ ಪುನರಾಗಮನ ಮಾಡಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ಭಾನುವಾರ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ 9ನೇ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಹಿಕಾರು ನಕಾಮುರಾ ಅವರನ್ನು ಸೋಲಿಸಿದರು.
ಭಾರತದ ಆಟಗಾರರ ವ್ಯವಹಾರವಾಗಿದ್ದ ಪಂದ್ಯದಲ್ಲಿ ಡಿ.ಗುಕೇಶ್ ಅವರು ಆರ್.ಪ್ರಜ್ಞಾನಂದ ಅವರ ಜೊತೆ ಪಾಯಿಂಟ್ ಹಂಚಿಕೊಂಡರು. ಇದೂ ಸೇರಿ ಓಪನ್ ವಿಭಾಗದ ಇತರ ಪಂದ್ಯಗಳು ನಿರ್ಣಾಯಕ ಫಲಿತಾಂಶ ಪಡೆಯಲಿಲ್ಲ.
ಫ್ರಾನ್ಸ್‌ನ ಇಯಾನ್ ನೆಪೊಮ್‌ನಿಯಾಚಿ ತೊಂದರೆಯಲ್ಲಿದ್ದರೂ, ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಎದುರು ಪಾಯಿಂಟ್ ಹಂಚಿಒಳ್ಳುವಲ್ಲಿ ಯಶಸ್ವಿ ಆದರು. ಅಜರ್‌ಬೈಜಾನ್‌ನ ನಿಜತ್ ಅಬಸೋವ್ ಬಿಳಿ ಕಾಯಿಗಳಲ್ಲಿ ಆಡಿ, ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಜೊತೆ ‘ಡ್ರಾ’ ಮಾಡಿಕೊಂಡರು.
ಇನ್ನೂ ಐದು ಸುತ್ತು, ಎರಡು ವಿಶ್ರಾಂತಿ ದಿನಗಳು ಉಳಿದಿದ್ದು, ನೆಪೊಮ್ ಮತ್ತು ಗುಕೇಶ್ ತಲಾ ಐದೂವರೆ ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಪ್ರಜ್ಞಾನಂದ (5) ಮೂರನೇ ಸ್ಥಾನದಲ್ಲಿದ್ದಾರೆ. ನಕಾಮುರಾ, ವಿದಿತ್ ಗುಜರಾತಿ, ಕರುವಾನಾ (ತಲಾ 4.5) ನಂತರದ ಸ್ಥಾನಗಳಲ್ಲಿದ್ದಾರೆ. ಅಲಿರೇಝಾ (3.5) ಮತ್ತು ಅಬಸೋವ್ (3) ಕೊನೆಯ ಎರಡು ಸ್ಥಾನಗಳಲ್ಲಿದ್ದಾರೆ.
ಮಹಿಳಾ ವಿಭಾಗದಲ್ಲಿ ಆರ್.ವೈಶಾಲಿ ಅವರು ಮತ್ತೊಂದು ಸೋಲು ಅನುಭವಿಸಿದರು. ಈ ಬಾರಿ ಚೀನಾದ ಝೊಂಗ್ವಿ ತಾನ್ ಅವರ ಕೈಲಿ. 21 ನಡೆಗಳಲ್ಲಿ ಸಾಧಿಸಿದ ಈ ಗೆಲುವಿನೊಡನೆ ಝೊಂಗ್ವಿ ಅವರು 9 ಪಂದ್ಯಗಳಿಂದ 6 ಪಾಯಿಂಟ್ಸ್ ಸಂಗ್ರಹಿಸಿ ಒಂಟಿಯಾಗಿ ಅಗ್ರಸ್ಥಾನದಲ್ಲಿ ನೆಲೆಸಿದರು.
ಈ ವಿಭಾಗದ ಇತರ ಮೂರು ಪಂದ್ಯಗಳಲ್ಲಿ ಜಯಾಪಜಯ ನಿರ್ಧಾರವಾಗಲಿಲ್ಲ. ಕೋನೇರು ಹಂಪಿ, ರಷ್ಯಾದ ಕ್ಯಾಥರಿನಾ ಲಾಗ್ನೊ ಜೊತೆ ‘ಡ್ರಾ’ ಮಾಡಿಕೊಂಡರು. ಎಂಟನೇ ಸುತ್ತಿನ ನಂತರ ಅಗ್ರಸ್ಥಾನದಲ್ಲಿದ್ದ ಟಿಂಗ್ಜಿ ಲೀ ಅವರು ನುರ್ಗ್ಯುಲ್ ಸಲಿಮೋವಾ (ಬಲ್ಗೇರಿಯಾ) ಜೊತೆ ‘ಡ್ರಾ’ ಮಾಡಿಕೊಂಡರು.
ದಿನದ ಮತ್ತೊಂದು ಪಂದ್ಯದಲ್ಲಿ ಅನ್ನಾ ಮುಝಿಚುಕ್ (ಉಕ್ರೇನ್), ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಜೊತೆ ಪಾಯಿಂಟ್ ಹಂಚಿಕೊಂಡರು.
ಗೊರ್ಯಾಚ್ಕಿನಾ (5.5) ಮತ್ತು ಲಾಗ್ನೊ (ತಲಾ 5.5) ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.