ADVERTISEMENT

Tokyo Olympics| ವಿಕಾಸ್‌ಗೆ ಒಕಜಾವ ‘ಪಂಚ್‌’: ಸ್ಥಳೀಯ ಕ್ರೀಡಾಪಟು ಎದುರು ಸೋಲು

ಸ್ಥಳೀಯ ಕ್ರೀಡಾಪಟುವಿಗೆ ಮಣಿದ ಭಾರತದ ಬಾಕ್ಸರ್: ಸ್ಪರ್ಧೆಯಿಂದ ಹೊರಗೆ

ಪಿಟಿಐ
Published 24 ಜುಲೈ 2021, 18:27 IST
Last Updated 24 ಜುಲೈ 2021, 18:27 IST
ಸ್ಪರ್ಧೆಯ ನಡುವೆ ಗಾಯಗೊಂಡು ವಿಕಾಸ್ ಕಣ್ಣಿನ ಬದಿಯಿಂದ ರಕ್ತ ಚಿಮ್ಮಿತು –ಎಎಫ್‌ಪಿ ಚಿತ್ರ
ಸ್ಪರ್ಧೆಯ ನಡುವೆ ಗಾಯಗೊಂಡು ವಿಕಾಸ್ ಕಣ್ಣಿನ ಬದಿಯಿಂದ ರಕ್ತ ಚಿಮ್ಮಿತು –ಎಎಫ್‌ಪಿ ಚಿತ್ರ   

ಟೋಕಿಯೊ: ಪದಕದ ಭರವಸೆ ಮೂಡಿಸಿದ್ದ ಭಾರತದ ವಿಕಾಸ್ ಕೃಷನ್ ಅವರು ಒಲಿಂಪಿಕ್ಸ್ ಬಾಕ್ಸಿಂಗ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಸ್ಥಳೀಯ ಬಾಕ್ಸರ್ ಸೆವೊನ್ರೆಟ್ಸ್‌ ಕ್ವಿನ್ಸಿ ಮೆನ್ಸಾ ಒಕಜಾವ ಎದುರು ಶನಿವಾರ ನಡೆದ 69 ಕೆಜಿ ವಿಭಾಗದ ಹಣಾಹಣಿಯಲ್ಲಿ ವಿಕಾಸ್ 0–5 ಅಂತರದಿಂದ ಸೋತರು.

ಭಾರತದಿಂದ ಒಂಬತ್ತು ಬಾಕ್ಸರ್‌ಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದು ಇದು ಮೊದಲ ಬೌಟ್ ಆಗಿತ್ತು. ಜಿದ್ದಾಜಿದ್ದಿಯ ಸ್ಪರ್ಧೆಯ ನಡುವೆ 29 ವರ್ಷದ ವಿಕಾಸ್ ಅವರ ಎಡಗಣ್ಣಿನ ಅಂಚಿನಲ್ಲಿ ಗಾಯವಾಗಿ ರಕ್ತ ಚಿಮ್ಮಿತು. ಅವರು ಭುಜದ ನೋವಿನಿಂದ ಬಳಲುತ್ತಿದ್ದರು ಎಂದು ತಂಡದ ಮೂಲಗಳು ತಿಳಿಸಿವೆ.

2019ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಒಕಜಾವ ಅದೇ ವರ್ಷ ನಡೆದಿದ್ದ ವಿಶ್ವ ಚಾಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್ ತಲುಪಿದ್ದರು. ಶನಿವಾರದ ಬೌಟ್‌ನಲ್ಲಿಆರಂಭದಿಂದ ಅಂತ್ಯದ ವರೆಗೂ ಆಧಿಪತ್ಯ ಸ್ಥಾಪಿಸಿದ ಒಕಜಾವ ತುದಿಗಾಲಲ್ಲಿ ಕುಣಿಯುವ ನೃತ್ಯಪಟುವಿನಂತೆ ರಿಂಗ್‌ನಲ್ಲಿ ಒಡಾಡಿದರು.

ADVERTISEMENT

ಪ್ರೀ ಕ್ವಾರ್ಟರ್ ಫೈನಲ್‌ ಹಂತದ ಬೌಟ್‌ನಲ್ಲಿ ಅವರು ಮೂರನೇ ಶ್ರೇಯಾಂಕಿತ, ಕ್ಯೂಬಾದ ರೊನೀಲ್ ಇಗ್ಲೇಸಿಯಸ್ ಎದುರು ಸೆಣಸುವರು. ಇಗ್ಲೇಸಿಯಸ್ 2012ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದು ಒಂದು ಬಾರಿ ವಿಶ್ವ ಚಾಂಪಿಯನ್ ಕೂಡ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.