
ನವದೆಹಲಿ: ಭಾರತದ ಕುಸ್ತಿಪಟು ಹಾಗೂ ಶಾಸಕಿ ವಿನೇಶ್ ಫೋಗಟ್ ಅವರು ನಿವೃತ್ತಿ ನಿರ್ಧಾರದಿಂದ ಹೊರಬರುತ್ತಿರುವುದಾಗಿ ಘೋಷಿಸಿದ್ದಾರೆ. ಮಾತ್ರವಲ್ಲ, 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಆಡುವ ಗುರಿ ಹೊಂದಿರುವುದಾಗಿಯು ಶುಕ್ರವಾರ ತಿಳಿಸಿದ್ದಾರೆ.
31 ವರ್ಷದ ವಿನೇಶ್ ಫೋಗಟ್, ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ 50 ಕೆ.ಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ, ಅವರು ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕ ಇದ್ದಿದ್ದರಿಂದ ಫೈನಲ್‌ನಲ್ಲಿ ಅನರ್ಹಗೊಂಡರು. ಇದರಿಂದಾಗಿ ಅವರಿಗೆ ಒಲಿಂಪಿಕ್ ಪದಕ ಕೈತಪ್ಪಿತ್ತು.
ಈ ನಿರ್ಧಾರದ ಬಳಿಕ ಅವರು, ಜಂಟಿ ಬೆಳ್ಳಿ ಪದಕ ನೀಡುವಂತೆ ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CAS) ಮೇಲ್ಮನವಿ ಸಲ್ಲಿಸಿದ್ದರು. ಆದರೆ ತೀರ್ಪು ಬದಲಾಗಲಿಲ್ಲ. ಈ ಘಟನೆಯ ಬಳಿಕ ಫೋಗಟ್ ಅವರು ರಾಜಕೀಯ ಪ್ರವೇಶಿಸಿ, ಹರಿಯಾಣದ ಜುಲಾನ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ.
ತಮ್ಮ ಕುಸ್ತಿ ವೃತ್ತಿಜೀವನದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಫೋಗಟ್, ‘ಪ್ಯಾರಿಸ್ ಒಲಿಂಪಿಕ್ ನಿಮ್ಮ ಕೊನೆಯ ಹೋರಾಟವೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಬಹಳ ಸಮಯದಿಂದ ನನ್ನ ಬಳಿ ಉತ್ತರವಿರಲಿಲ್ಲ. ಆದರೆ, ನಾನು ಒತ್ತಡದಿಂದಾಗಿ ಕುಸ್ತಿ ಅಂಕಣದಿಂದ ಹಿಂದೆ ಸರಿಯಬೇಕಾಯಿತು. ನಿರೀಕ್ಷೆಗಳಿಂದ ಮತ್ತು ಮಹತ್ವಾಕಾಂಕ್ಷೆಗಳಿಂದಲೂ ದೂರ ಸರಿಯುವ ಪರಿಸ್ಥಿತಿ ಎದುರಾಯಿತು. ಆದರೆ, ಈಗ ನಾನು ಎಲ್ಲಾ ನೋವಿನಿಂದ ಹೊರಬಂದು ಉಸಿರಾಡಲು ಪ್ರಾರಂಭಿಸಿದ್ದೇನೆ’ ಎಂದಿದ್ದಾರೆ.
‘ನನ್ನ ಪ್ರಯಾಣದ ಭಾರವನ್ನು ಅರ್ಥಮಾಡಿಕೊಳ್ಳಲು ನಾನು ಸಮಯ ತೆಗೆದುಕೊಂಡೆ. ಏಳು–ಬೀಳುಗಳು ಹಾಗೂ ಜಗತ್ತು ನೋಡಿರದ ನನ್ನ ಹೋರಾಟದ ಮೂಲಕ ಸತ್ಯವನ್ನು ಕಂಡುಕೊಂಡೆ. ನಾನು ಈಗಲೂ ಈ ಕ್ರೀಡೆಯನ್ನು ಪ್ರೀತಿಸುತ್ತೇನೆ. ಮುಂದೆಯೂ ಸ್ಪರ್ಧಿಸಲು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ಆ ಮೌನದಲ್ಲಿಯೂ ನನ್ನೊಳಗಿನ ಕಿಚ್ಚು ಎಂದಿಗೂ ನನ್ನನ್ನು ಹಿಂದೆ ಉಳಿಯಲು ಬಿಡಲಿಲ್ಲ ಎಂಬುದನ್ನು ನಾನು ಮರೆತಿದ್ದೆ. ಅದು ದಣಿವು ಮತ್ತು ಶಬ್ದದಲ್ಲಿ ಹೂತು ಹೋಗಿತ್ತು. ಆದರೆ, ಶಿಸ್ತು, ದಿನಚರಿ ಮತ್ತು ಹೋರಾಟದ ಮನೋಭಾವನೆ ನನ್ನ ಜೀವನದ ಭಾಗವಾಗಿ ಉಳಿದಿದೆ. ನಾನು ಬೇಡವೆಂದರೂ ನನ್ನ ಜೀವನದ ಒಂದು ಭಾಗವು ಮ್ಯಾಟ್ ಮೇಲೆ ಇರಲಿದೆ’ ಎಂದಿದ್ದಾರೆ.
ವಿನೇಶ್ ಅವರು 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದ ಕಡೆಗಿನ ತಮ್ಮ ಪ್ರಯಾಣವನ್ನು ಹೊಸ ಉತ್ಸಾಹ ಮತ್ತು ಮಗನೊಂದಿಗೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ.
‘ನನಗೆ ಭಯವಿಲ್ಲ, ತಲೆಬಾಗುವುದೂ ಇಲ್ಲ. 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೆಜ್ಜೆ ಇಡುತ್ತಿದ್ದೇನೆ. ಈ ಬಾರಿ ನಾನು ಒಬ್ಬಂಟಿಯಾಗಿ ನಡೆಯುತ್ತಿಲ್ಲ. ನನ್ನ ಮಗ ಕೂಡ ನನ್ನ ಜೊತೆಗಿದ್ದಾನೆ. ಅವನೇ ನನ್ನ ದೊಡ್ಡ ಪ್ರೇರಣೆ, ಅವನು LA ಒಲಿಂಪಿಕ್ಸ್‌ನ ದಾರಿಯಲ್ಲಿ ನನ್ನ ಪುಟ್ಟ ಚಿಯರ್ ಲೀಡರ್’ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.