ADVERTISEMENT

ವಿನೇಶಾ, ರೀತಿಕಾ, ಅಂಶುಗೆ ಒಲಿಂಪಿಕ್ಸ್ ಟಿಕೆಟ್

ಏಷ್ಯನ್ ಒಲಿಂಪಿಕ್ಸ್‌ ಕ್ವಾಲಿಫೈಯರ್‌: ಭಾರತ ಉತ್ತಮ ಪ್ರದರ್ಶನ

ಪಿಟಿಐ
Published 20 ಏಪ್ರಿಲ್ 2024, 17:02 IST
Last Updated 20 ಏಪ್ರಿಲ್ 2024, 17:02 IST
ವಿನೇಶಾ ಫೋಗಾಟ್
ವಿನೇಶಾ ಫೋಗಾಟ್   

ಬಿಷ್ಕೆಕ್‌ (ಕಿರ್ಗಿಸ್ತಾನ) (ಪಿಟಿಐ); ಭಾರತದ ಕುಸ್ತಿಪಟು ವಿನೇಶಾ ಫೋಗಾಟ್ ಅವರು ಶನಿವಾರ ನಡೆದ ಏಷ್ಯನ್ ಒಲಿಂಪಿಕ್‌ ಕ್ವಾಲಿಫೈಯರ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿ‌ಕ್ಸ್‌ಗೆ ಅರ್ಹತೆ ಪಡೆದರು. 

ಅಲ್ಲದೇ ಅಂಶು ಮಲಿಕ್ (57 ಕೆ.ಜಿ) ಮತ್ತು 23 ವರ್ಷದೊಳಗಿನ ವಿಶ್ವ ಚಾಂಪಿಯನ್ ರಿತಿಕಾ ಹೂಡಾ (76 ಕೆ.ಜಿ) ಅವರು ಅತ್ಯುತ್ತಮ ಪ್ರದರ್ಶನದೊಂದಿಗೆ ಪಂದ್ಯಾವಳಿಯ ಫೈನಲ್‌ ತಲುಪಿ ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಿದರು. ಪ್ಯಾರಿಸ್ ಕ್ರೀಡಾಕೂಟಕ್ಕೆ ಭಾರತ ನಾಲ್ಕು ಕೋಟಾ ಸ್ಥಾನಗಳನ್ನು ಪಡೆದುಕೊಂಡಿದೆ.  

ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನ 53 ಕೆ.ಜಿ ತೂಕ ವಿಭಾಗದಲ್ಲಿ ಅಂತಿಮ್ ಪಂಘಲ್ ಕಂಚಿನ ಪದಕ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.  

ADVERTISEMENT

ಮಾನಸಿ ಅಹ್ಲಾವತ್ (62 ಕೆಜಿ) ಸಹ ನಾಲ್ಕರ ಘಟ್ಟ ಪ್ರವೇಶಿಸಿದ್ದು, ಕೇವಲ ಒಂದು ಪಂದ್ಯ ಗೆಲ್ಲಬೇಕಾಗಿದೆ.

ನಿಶಾ ದಹಿಯಾ (68 ಕೆಜಿ) ಸೆಮಿಫೈನಲ್ ತಲುಪಲು ವಿಫಲರಾದ ಭಾರತದ ಏಕೈಕ ಮಹಿಳಾ ಕುಸ್ತಿಪಟು ಎನಿಸಿದರು.

ಟೋಕಿಯೊ ಕ್ರೀಡಾಕೂಟದಲ್ಲಿ ಭಾರತವು ಸೀಮಾ ಬಿಸ್ಲಾ (50 ಕೆಜಿ), ವಿನೇಶಾ (53 ಕೆಜಿ), ಅಂಶು (57 ಕೆಜಿ) ಮತ್ತು ಸೋನಮ್ ಮಲಿಕ್ (62 ಕೆಜಿ)  ಅವರನ್ನು ಒಳಗೊಂಡ ಏಳು ಸದಸ್ಯರ ತಂಡವನ್ನು ಕಣಕ್ಕಿಳಿಸಿತ್ತು.

ಪುರುಷರ ವಿಭಾಗದಲ್ಲಿ ಭಾರತದ ಯಾರೂ ಕೋಟಾ ಗಳಿಸಲು ಯಶಸ್ವಿಯಾಗಿಲ್ಲ. ಈ ಅರ್ಹತಾ ಟೂರ್ನಿಯ ಬಳಿಕ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅಂತಿಮ ಅವಕಾಶವಾಗಿ ಟರ್ಕಿಯಲ್ಲಿ ಮುಂದಿನ ತಿಂಗಳು ವಿಶ್ವ ಕ್ವಾಲಿಫೈರ್ಸ್‌ ನಡೆಯಲಿದೆ.

ಕೋಟಾ ವಿಜೇತರಿಗೆ ಭಾರತ ಪ್ರತಿನಿಧಿಸಲು ಡಬ್ಲ್ಯುಎಫ್‌ಐ ಅವಕಾಶ ನೀಡುತ್ತದೆಯೇ ಅಥವಾ ರಾಷ್ಟ್ರೀಯ ಕುಸ್ತಿ ತಂಡ ಆಯ್ಕೆ ಮಾಡಲು ಅಂತಿಮ ಆಯ್ಕೆ ಟ್ರಯಲ್ ನಡೆಸುತ್ತದೆಯೇ ಎಂಬ ಕುತೂಹಲವಿದೆ.

29 ವರ್ಷದ ವಿನೇಶಾ ಮೂರನೇ ಬಾರಿಗೆ ಒಲಿಂಪಿಕ್ಸ್‌ ಕೋಟಾ ಪಡೆದುಕೊಂಡಿದ್ದಾರೆ. ಈ ಹಿಂದೆ ರಿಯೋ (2016) ಮತ್ತು ಟೋಕಿಯೊ ಒಲಿಂಪಿಕ್ಸ್ (2020) ಪ್ರತಿನಿಧಿಸಿದ್ದರು. 

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ  ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿನೇಶಾ, ಪ್ರಬಲ ಪ್ರದರ್ಶನ ನೀಡಿ ಎದುರಾಳಿಗಳನ್ನು ಸೋಲಿಸಿದರು.

ಆರಂಭಿಕ ಪಂದ್ಯದಲ್ಲಿ ವಿನೇಶಾ ತನ್ನ ಪ್ರತಿಸ್ಪರ್ಧಿ ಕೊರಿಯಾದ ಮಿರಾನ್ ಚಿಯೋನ್ ಅವರನ್ನು ನಿರಾಯಾಸವಾಗಿ ಸೋಲಿಸಿದರು. ಈ ಸೆಣಸಾಟ ಕೇವಲ 1 ನಿಮಿಷ 30 ಸೆಕೆಂಡುಗಳಲ್ಲಿ ಕೊನೆಗೊಂಡಿತು.  

ಎರಡನೇ ಪಂದ್ಯದಲ್ಲಿ ಕಾಂಬೋಡಿಯಾದ ಸ್ಮನಾಂಗ್ ಡಿಟ್ ಅವರನ್ನು ಮಣಿಸಲು ತೆಗೆದುಕೊಂಡಿದ್ದು ಕೇವಲ 67 ಸೆಕೆಂಡಗುಳನ್ನಷ್ಟೇ.

ಸೆಮಿಫೈನಲ್‌ನಲ್ಲಿ 19 ವರ್ಷದ ಕಜಕಿಸ್ತಾನದ ಕುಸ್ತಿಪಟು ಲಾರಾ ಗಾನಿಕಿಜಿ ಅವರಿಂದ ಸ್ವಲ್ಪ ಪ್ರತಿರೋಧ ಎದುರಿಸಿದರು. ಆದರೆ, ಅವರು ಪ್ರತಿಸ್ಪರ್ಧಿ ಬಳಸಿದ ದಾಳಿ ವಿಫಲಗೊಳಿಸಲು ತಮ್ಮ ಪಟ್ಟುಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದರು.  

ಅಂಶು ಮಲಿಕ್ –ಟ್ವಿಟರ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.