ADVERTISEMENT

ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನುಗೆ ಚಿನ್ನ

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕದ ಅಭಿನಯಗೆ ಹೈಜಂಪ್‌ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:24 IST
Last Updated 30 ಸೆಪ್ಟೆಂಬರ್ 2022, 16:24 IST
ಮೀರಾಬಾಯಿ ಚಾನು
ಮೀರಾಬಾಯಿ ಚಾನು   

ಗಾಂಧಿನಗರ: ಒಲಿಂ‍ಪಿಕ್‌ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರು ರಾಷ್ಟ್ರೀಯ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ನ ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ನಿರೀಕ್ಷೆಯಂತೆಯೇ ಚಿನ್ನ ಗೆದ್ದುಕೊಂಡರು.

ಮಣಿಪುರ ತಂಡವನ್ನು ಪ್ರತಿನಿಧಿಸಿದ ಚಾನು, ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಒಟ್ಟು 191 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾದರು. ಸ್ನ್ಯಾಚ್‌ನಲ್ಲಿ 84 ಕೆ.ಜಿ ಹಾಗೂ ಕ್ಲೀನ್‌– ಜರ್ಕ್‌ನಲ್ಲಿ 107 ಕೆ.ಜಿ. ಸಾಧನೆ ಮಾಡಿದರು.

187 ಭಾರ ಎತ್ತಿದ ಮಣಿಪುರದವರೇ ಆದ ಸಂಜಿತಾ ಚಾನು ಬೆಳ್ಳಿ ಗೆದ್ದರು. ಅವರು ಸ್ನ್ಯಾಚ್‌ನಲ್ಲಿ 82 ಕೆ.ಜಿ ಹಾಗೂ ಕ್ಲೀನ್‌–ಜರ್ಕ್‌ನಲ್ಲಿ 105 ಕೆ.ಜಿ ಭಾರ ಎತ್ತಿದರು. ಒಡಿಶಾದ ಸ್ನೇಹಾ ಸೊರೇನ್‌ (169 ಕೆ.ಜಿ) ಅವರು ಕಂಚು ಪಡೆದರು.

ADVERTISEMENT

ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಗೆದ್ದಿದ್ದ ಮೀರಾಬಾಯಿ ಅವರಿಗೆ ಇದು ಎರಡನೇ ರಾಷ್ಟ್ರೀಯ ಕೂಟ ಆಗಿದೆ. ಅವರು ಎರಡೂ ವಿಭಾಗಗಳಲ್ಲಿ ಮೊದಲ ಎರಡು ಪ್ರಯತ್ನಗಳಲ್ಲಿ ಮಾತ್ರ ಭಾರ ಎತ್ತಿದರು. ಮೂರನೇ ಅವಕಾಶದಲ್ಲಿ ಭಾರ ಎತ್ತಲಿಲ್ಲ. ಎಡಗೈನ ಮಣಿಕಟ್ಟಿನಲ್ಲಿ ಅಲ್ಪ ನೋವು ಇರುವುದರಿಂದ ಮೂರನೇ ಪ್ರಯತ್ನಕ್ಕೆ ಮುಂದಾಗಲಿಲ್ಲ ಎಂದು ಹೇಳಿದರು.

‘ಎನ್‌ಐಎಸ್‌ ಪಟಿಯಾಲದಲ್ಲಿ ಇತ್ತೀಚೆಗೆ ತರಬೇತಿಯ ವೇಳೆ ಮಣಿಕಟ್ಟಿಗೆ ಗಾಯಮಾಡಿಕೊಂಡಿದ್ದೆ. ಅದು ಉಲ್ಬಣಿಸದಂತೆ ಎಚ್ಚರವಹಿಸಬೇಕಿತ್ತು. ಡಿಸೆಂಬರ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಇರುವುದರಿಂದ ಆ ವೇಳೆಗೆ ಪೂರ್ಣವಾಗಿ ಚೇತರಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

ನೆಟ್‌ಬಾಲ್‌ ತಂಡಕ್ಕೆ ಕಂಚು: ಕರ್ನಾಟಕದ ಮಹಿಳಾ ನೆಟ್‌ಬಾಲ್‌ ತಂಡದವರು ಕಂಚು ಜಯಿಸಿದರು. ಮೂರನೇ ಸ್ಥಾನ ನಿರ್ಣಯಿಸಲು ಶುಕ್ರವಾರ ನಡೆದ ಕರ್ನಾಟಕ– ಬಿಹಾರ ಪಂದ್ಯ 57–57 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು. ಸಮಯಾವಕಾಶದ ಕೊರತೆಯಿಂದ ಸಂಘಟಕರು ಹೆಚ್ಚುವರಿ ಅವಧಿಯ ಆಟ ನಡೆಸದೆ, ಎರಡೂ ತಂಡಗಳನ್ನು ವಿಜಯಿ ಎಂದು ಘೋಷಿಸಿದರು.

ಹೈಜಂಪ್‌ನಲ್ಲಿ ಅಭಿನಯಗೆ ಬೆಳ್ಳಿ: ರಾಷ್ಟ್ರೀಯ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ ಮೊದಲ ದಿನವೇ ಕರ್ನಾಟಕ ಪದಕದ ಖಾತೆ ತೆರೆಯಿತು. ಶುಕ್ರವಾರ ನಡೆದ ಮಹಿಳೆಯರ ಹೈಜಂಪ್‌ನಲ್ಲಿ ಅಭಿನಯ ಎಸ್‌.ಶೆಟ್ಟಿ ಬೆಳ್ಳಿ ಪದಕ ಗೆದ್ದರು. ಅವರು 1.81 ಮೀ. ಸಾಧನೆ ಮಾಡಿದರು.

1.83 ಮೀ. ಜಿಗಿದ ಮಧ್ಯಪ್ರದೇಶದ ಸ್ವಪ್ನಾ ಬರ್ಮನ್‌ ಅವರು ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಬಾಬಿ ಅಲೋಶಿಯಸ್‌ ಅವರು 2001 ರಲ್ಲಿ ಲುಧಿಯಾನದಲ್ಲಿ ನಡೆದಿದ್ದ ಕೂಟದಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು (1.82 ಮೀ.) ಮುರಿದರು. ತಮಿಳುನಾಡಿನ ಗ್ರೇಸಿನಾ ಮೆರ್ಲಿ (1.81 ಮೀ.) ಕಂಚು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.