ಟೋಕಿಯೊ: ಭಾರತದ ರೇಸ್‌ವಾಕ್‌ರಗಳು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಶನಿವಾರ 35 ಕಿ.ಮೀ. ರೇಸ್‌ವಾಕ್ ಸ್ಪರ್ಧೆಯಲ್ಲಿ ನಿರಾಸೆ ಅನುಭವಿಸಿದರು. ಸಂದೀಪ್ ಕುಮಾರ್ ಅವರು ಪುರುಷರ ವಿಭಾಗದಲ್ಲಿ 23ನೇ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕಾ 24ನೇ ಸ್ಥಾನ ಗಳಿಸಲಷ್ಟೇ ಶಕ್ತರಾದರು.
ಕಣದಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ರಾಮ್ ಬಾಬೂ ಅವರನ್ನು ನಾಲ್ಕನೇ ರೆಡ್‌ಕಾರ್ಡ್ ಪಡೆದ ಕಾರಣ ಅನರ್ಹಗೊಳಿಸಲಾಯಿತು. ಅಷ್ಟರಲ್ಲಿ ಅವರು 24 ಕಿ.ಮೀ. ಕ್ರಮಿಸಿದ್ದರು. ಹಾಲಿ ರಾಷ್ಟ್ರೀಯ ಚಾಂಪಿಯನ್ (2ಗಂ.29 ನಿ. 56ಸೆ.) ಆಗಿರುವ ಅವರು ಎರಡು ವರ್ಷಗಳ ಹಿಂದೆ ಬುಡಾಪೆಸ್ಟ್ ಕೂಟದಲ್ಲಿ 27ನೇ ಸ್ಥಾನ ಪಡೆದಿದ್ದರು. ಇದೇ ತಪ್ಪಿಗೆ ರಾಮ್ ಸೇರಿದಂತೆ ಆರು ಮಂದಿ ಅನರ್ಹರಾದರು.
ಸೆಕೆ ತೀವ್ರವಾಗಿದ್ದು ಕಣದಲ್ಲಿದ್ದ 50 ಮಂದಿಯಲ್ಲಿ 34 ಮಂದಿ ಸ್ಪರ್ಧೆ ಪೂರೈಸಿದರು.
39 ವರ್ಷ ವಯಸ್ಸಿನ ಸಂದೀಪ್ 2 ಗಂ. 39 ನಿ 15 ಸೆ.ಗಳಲ್ಲಿ ದೂರ ಪೂರೈಸಿದರು. ಆದರೆ ಇದು ಅವರ ಉತ್ತಮ ಸಾಧನೆಯೇನೂ (2:35:06) ಅಲ್ಲ.
29 ವರ್ಷ ವಯಸ್ಸಿನ ಪ್ರಿಯಾಂಕಾ ಅವರು 46 ಸ್ಪರ್ಧಿಗಳು ಕಣದಲ್ಲಿದ್ದ ಮಹಿಳೆಯರ ವಿಭಾಗದಲ್ಲಿ 3ಗಂ.05ನಿ. 58 ಸೆ.ಗಳಲ್ಲಿ ಸ್ಪರ್ಧೆಯನ್ನು ಪೂರೈಸಿದರು. ಒಬ್ಬರಷ್ಟೇ ನಾಲ್ಕು ರೆಡ್ ಕಾರ್ಡ್ ಪಡೆದು ಅನರ್ಹರಾದರು. ಈ ಹಿಂದೆ ರಾಷ್ಟ್ರೀಯ ದಾಖಲೆ ಸ್ಥಾಪಿಸುವ ವೇಳೆ ಅವರು 2ಗಂ.56 ನಿ. 34 ಸೆ. ತೆಗೆದುಕೊಂಡಿದ್ದರು.
ಮಹಿಳೆಯರ 1,500 ಮೀ. ಓಟದ ಸ್ಪರ್ಧೆಯ ಎರಡನೇ ಹೀಟ್‌ನಲ್ಲಿ ಪೂಜಾ 11ನೇ ಸ್ಥಾನ ಗಳಿಸಿ ನಿರಾಶೆ ಅನುಭವಿಸಿದರು. 14 ಮಂದಿ ಆ ರೇಸ್‌ನಲ್ಲಿದ್ದರು. ಪೂಜಾ 4ನಿ.13.75 ಸೆ. ತೆಗೆದುಕೊಂಡರು. ಅವರ ವೈಯಕ್ತಿಕ ಶ್ರೇಷ್ಠ ಅವಧಿ– 4ನಿ.09.52 ಸೆ.
ಪೂಜಾ 800 ಮೀ. ಓಟದಲ್ಲಿಯೂ ಭಾಗವಹಿಸಲಿದ್ದಾರೆ. ಈ ಸ್ಪರ್ಧೆ ಸೆ. 18ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.