ADVERTISEMENT

ವಿಶ್ವ ಅಥ್ಲೆಟಿಕ್ಸ್‌ಗೆ ಪ್ರಿಯಾ, ಆರ್ಯನ್‌

ಪಿಟಿಐ
Published 5 ಜೂನ್ 2022, 19:31 IST
Last Updated 5 ಜೂನ್ 2022, 19:31 IST
ಪ್ರಿಯಾ ಮೋಹನ್
ಪ್ರಿಯಾ ಮೋಹನ್   

ನಡಿಯಾದ್, ಗುಜರಾತ್‌: ಕರ್ನಾಟಕದ ಪ್ರಿಯಾ ಮೋಹನ್‌ ಮತ್ತು ಆರ್ಯನ್‌ ಕಶ್ಯಪ್‌ ಅವರು 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡರು.

ಗುಜರಾತ್‌ನ ನಡಿಯಾದ್‌ನಲ್ಲಿ ನಡೆದ ಜೂನಿಯರ್‌ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ನ ಮಹಿಳೆಯರ 200 ಮೀ. ಓಟದಲ್ಲಿ ಪ್ರಿಯಾ 23.98 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರಲ್ಲದೆ, ವಿಶ್ವ ಅಥ್ಲೆಟಿಕ್ಸ್‌ನ ಅರ್ಹತೆಗೆ ಬೇಕಾದ ಸಮಯ ಕಂಡುಕೊಂಡರು.

ಆರ್ಯನ್‌ 400 ಮೀ. ಹರ್ಡಲ್ಸ್‌ನಲ್ಲಿ ಎರಡನೇ ಸ್ಥಾನ ಗಳಿಸಿದರು. ಆರ್ಯನ್‌ ಅಲ್ಲದೆ ಮೊದಲ ಸ್ಥಾನ ಪಡೆದ ಪಂಜಾಬ್‌ನ ಹರ್ದೀಪ್‌ ಮತ್ತು ಮೂರನೇ ಸ್ಥಾನ ಗಳಿಸಿದ ಪಶ್ಚಿಮ ಬಂಗಾಳದ ಕರ್ಣ ಬಾಗ್ ಅವರೂ ಅರ್ಹತೆ ಪಡೆದುಕೊಂಡರು.

ADVERTISEMENT

ಈ ಕೂಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಒಟ್ಟು 16 ಸ್ಪರ್ಧಿಗಳು ವಿಶ್ವ ಅಥ್ಲೆಟಿಕ್ಸ್‌ಗೆ ಅರ್ಹತೆ ಪಡೆದುಕೊಂಡರು. ಲಾಂಗ್‌ ಜಂಪ್ ಸ್ಪರ್ಧಿ ತಮಿಳುನಾಡಿನ ಸೆಲ್ವಪ್ರಭು ಅವರು 15.84 ಮೀ. ದೂರ ಜಿಗಿದು ಚಿನ್ನ ಗೆದ್ದರು.

ತಮಿಳುನಾಡಿನ ಪ್ರದೀಪ್‌ ಸೆಂಥಿಲ್‌ಕುಮಾರ್‌ 800 ಮೀ. ಓಟದಲ್ಲಿ (1ನಿ. 49.59 ಸೆ.) ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಉತ್ತರ ಪ್ರದೇಶದ ತಾನ್ಯಾ ಚೌಧರಿ ಅವರು ಹ್ಯಾಮರ್‌ ಥ್ರೋನಲ್ಲಿ (57.09 ಮೀ.), ಹರಿಯಾಣದ ಸಿಮಿ ಅವರು ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ (1ನಿ. 0.72 ಸೆ.) ಮೊದಲ ಸ್ಥಾನ ಗಳಿಸಿದರು.

ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 800 ಮೀ.ಓಟದ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಪ್ರದೀಪ್‌ ಸೆಂಥಿಲ್‌ ಕುಮಾರ್‌ (ತಮಿಳುನಾಡು), ಅರ್ಜುನ್‌, ಸೋಮಂತ್ ಚೌಹಾಣ್‌ (ಹರಿಯಾಣ) ಹಾಗೂ ಆಶಾಕಿರಣ್‌ ಬಾರ್ಲ (ಜಾರ್ಖಂಡ್), ಲಕ್ಷಿತಾ ಶಾಂಡಿಲ್ಯ (ಗುಜರಾತ್) ಮತ್ತು ಊರ್ವಶಿ (ಹರಿಯಾಣ) ಅವರು ವಿಶ್ವ ಅಥ್ಲೆಟಿಕ್ಸ್‌ಗೆ ಅರ್ಹತೆ ಗಳಿಸಿದರು.

100 ಮೀ. ಓಟ: ಧನಲಕ್ಷ್ಮಿ ಮಿಂಚು
ನವದೆಹಲಿ (ಪಿಟಿಐ):
ಭಾರತದ ಎಸ್‌.ಧನಲಕ್ಷ್ಮಿ ಅವರು ಟರ್ಕಿಯಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪ್ರಿಂಟ್‌ ಚಾಂಪಿಯನ್‌ಷಿಪ್‌ನ 100 ಮೀ. ಓಟದಲ್ಲಿ ಚಿನ್ನ ಗೆದ್ದರು.

ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 11.26 ಸೆ.ಗಳೊಂದಿಗೆ ಗುರಿಮುಟ್ಟಿ, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. 11.59 ಸೆ.ಗಳೊಂದಿಗೆ ಹಿಮಾ ದಾಸ್‌ ಎರಡನೇ ಸ್ಥಾನ ಪಡೆದರು.

ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತು ಏಷ್ಯನ್‌ ಗೇಮ್ಸ್‌ ಅರ್ಹತೆಗೆ ಭಾರತ ಅಥ್ಲೆಟಿಕ್ ಫೆಡರೇಷನ್‌ ನಿಗದಿಪಡಿಸಿದ ಸಮಯಕ್ಕಿಂತ ಉತ್ತಮ ಸಮಯವನ್ನು ಧನಲಕ್ಷ್ಮಿ ಕಂಡುಕೊಂಡರು. 200 ಮೀ. ಓಟದಲ್ಲೂ ಶ್ರೇಷ್ಠ ಸಾಧನೆ ತೋರಿದ ಧನಲಕ್ಷ್ಮಿ 23.26 ಸೆ.ಗಳೊಂದಿಗೆ ಅಗ್ರಸ್ಥಾನ ಗಳಿಸಿದರು. ಹಿಮಾ ದಾಸ್‌ (23.51 ಸೆ.) ಎರಡನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.