
ಭುವನೇಶ್ವರ: ವಿಶ್ವ ಬೀಚ್ ವಾಲಿಬಾಲ್ ಟೂರ್ನಿಯು ಇಲ್ಲಿನ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ವಿಶ್ವವಿದ್ಯಾಲಯದಲ್ಲಿ ಬುಧವಾರ ಆರಂಭವಾಗಲಿದೆ.
ವಿಶ್ವದ 52 ದೇಶಗಳ 82 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಒಲಿಂಪಿಕ್ ಚಿನ್ನದ ಪದಕ ವಿಜೇತರು ಸೇರಿ 306 ಆಟಗಾರರು ಕಣಕ್ಕಿಳಿಯಲಿದ್ದಾರೆ. ಭಾರತದ ವಿಶ್ವವಿದ್ಯಾಲಯವೊಂದು ಈ ಟೂರ್ನಿಯನ್ನು ಆಯೋಜಿಸುತ್ತಿರುವುದು ಇದೇ ಮೊದಲು ಎಂದು ಕೆಐಐಟಿ ಸಂಸ್ಥಾಪಕ ಅಚ್ಯುತ ಸಮಂತ ತಿಳಿಸಿದರು.
ಅರ್ಹತಾ ಸುತ್ತಿನ ನಂತರ ಗುಂಪು ಹಂತ ಒಳಗೊಂಡ ಮುಖ್ಯ ಡ್ರಾ ಇರುತ್ತದೆ. ಅಗ್ರ ತಂಡಗಳು 16ರ ಸುತ್ತಿನಲ್ಲಿ ಆಡಲಿವೆ. ಫೈನಲ್ ಪಂದ್ಯ ಮಾರ್ಚ್ 8ರಂದು ನಡೆಯಲಿದೆ ಎಂದು ಅವರು ಹೇಳಿದರು.
ಸಕಲ ಸಿದ್ಧತೆ: ಪಂದ್ಯಗಳು ಕೆಐಐಟಿ ಕ್ಯಾಂಪಸ್‌ನ ದ್ಯುತಿ ಚಂದ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಬೀಚ್ ವಾಲಿಬಾಲ್ ಅಂಕಣಗಳನ್ನು ನಿರ್ಮಿಸಲಾಗಿದೆ ಎಂದು ಸಮಂತ ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.