ADVERTISEMENT

ಡೈಮಂಡ್‌ ಲೀಗ್‌ನ ಜ್ಯೂರಿಚ್‌ ಲೆಗ್: ನೀರಜ್ ಚೋಪ್ರಾಗೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 13:40 IST
Last Updated 1 ಸೆಪ್ಟೆಂಬರ್ 2023, 13:40 IST
<div class="paragraphs"><p>ನೀರಜ್ ಚೋಪ್ರಾ</p></div>

ನೀರಜ್ ಚೋಪ್ರಾ

   

ರಾಯಿಟರ್ಸ್ ಚಿತ್ರ

ಜ್ಯೂರಿಚ್‌: ವಿಶ್ವ ಜಾವೆಲಿನ್‌ ನೂತನ ಚಾಂಪಿಯನ್‌ ನೀರಜ್‌ ಚೋಪ್ರಾ ಅವರು ಗುರುವಾರ ನಡೆದ ಡೈಮಂಡ್‌ ಲೀಗ್‌ ಕೂಟದಲ್ಲಿ 85.71 ಮೀ. ದೂರ ಎಸೆದು ಎರಡನೇ ಸ್ಥಾನ ಪಡೆದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದ ಚೆಕ್‌ ರಿಪಬ್ಲಿಕ್‌ನ ಯಾಕುಬ್‌ ವಾದ್ಲೆಚ್‌ (85.86 ಮೀ.) ಅಗ್ರಸ್ಥಾನ ಪಡೆದರು.

ADVERTISEMENT

ಹಾಲಿ ಒಲಿಂಪಿಕ್ ಚಾಂಪಿಯನ್‌ ಸಹ ಆಗಿರುವ ನೀರಜ್, ಗುರುವಾರ ಆರು ಯತ್ನಗಳ ಪೈಕಿ ಅಂತಿಮ ಯತ್ನದಲ್ಲಿ ಈ ಸಾಧನೆ ಮಾಡಿದರು. ಅವರು ಮೂರು (2,3 ಮತ್ತು 5ನೇ) ಯತ್ನಗಳಲ್ಲಿ ಫೌಲ್‌ ಆದರು. ಉಳಿದ ಮೂರು ಯತ್ನಗಳಲ್ಲಿ ಜಾವೆಲಿನ್‌ಅನ್ನು ಕ್ರಮವಾಗಿ 80.79 ಮೀ., 85.22 ಮೀ., 85.71 ಮೀ. ದೂರಕ್ಕೆ ಎಸೆದರು.

‘ಇಲ್ಲಿನ ಪ್ರದರ್ಶನದ ಬಗ್ಗೆ ಸಂತೃಪ್ತಿ ಇದೆ. ವಿಶ್ವ ಚಾಂಪಿಯನ್‌ಷಿಪ್‌ ನಂತರ ಎಲ್ಲರಿಗೂ ಆಯಾಸ ಆಗಿತ್ತು. ಬುಡಾಪೆಸ್ಟ್‌ನಲ್ಲಿ ನಾವು 100 ಪ್ರತಿಶತ ಪ್ರಯತ್ನ ಹಾಕಿದ್ದೆವು. ಹಾಗಾಗಿ ಇಲ್ಲಿ ಆರೋಗ್ಯ ಕಾಪಾಡುವ ಕಡೆಯೂ ಲಕ್ಷ್ಯ ಕೊಡಬೇಕಾಗಿತ್ತು. ಈಗ ಯುಜೀನ್‌ (ಮುಂದಿನ ಡೈಮಂಡ್‌ ಲೀಗ್‌ ಲೆಗ್‌) ಕಡೆ ನನ್ನ ಗಮನ ಇದೆ. ಮುಂದೆ ಹಾಂಗ್‌ಝೌ ಏಷ್ಯನ್ ಗೇಮ್ಸ್‌ ಕಡೆ ಗಮನ ಕೇಂದ್ರೀಕರಿಸುವೆ’ ಎಂದು 25 ವರ್ಷದ ನೀರಜ್‌ ಹೇಳಿದರು. ಆಗಸ್ಟ್‌ 28ರಂದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಎನಿಸಿ ಇತಿಹಾಸ ಸ್ಥಾಪಿಸಿದ್ದರು.

ಗುರುವಾರಕ್ಕೆ ಮುಂಚೆ ಅವರು ಈ ಋತುವಿನಲ್ಲಿ ಒಮ್ಮೆಯೂ ಸೋತಿರಲಿಲ್ಲ. ಈಗ ಮೂರು ಕೂಟಗಳಿಂದ 23 ಪಾಯಿಂಟ್ಸ್‌ ಕಲೆಹಾಕಿರುವ ಅವರು ಮೂರನೇ ಸ್ಥಾನದೊಡನೆ ಅಮೆರಿಕದ ಯುಜೀನ್‌ ಡೈಮಂಡ್‌ ಲೀಗ್‌ ಲೆಗ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

ಜುಲೈ 21ರಂದು ನಡೆದ ಡೈಮಂಡ್‌ ಲೀಗ್‌ ಕೂಟದ ಮೊನಾಕೊ ಲೆಗ್‌ನಲ್ಲಿ ಗಾಯಾಳಾಗಿ ಭಾಗವಹಿಸದ ಕಾರಣ ಅವರು ಮೂರನೇ ಸ್ಥಾನಕ್ಕೆ ಸರಿದರು. ಡೈಮಂಡ್‌ ಲೀಗ್‌ನ ಎಲ್ಲ ಲೆಗ್‌ಗಳಲ್ಲಿ ಭಾಗವಹಿಸಿರುವ ಯಾಕೂಬ್ ವಾದ್ಲೆಚ್‌ (29 ಪಾಯಿಂಟ್ಸ್‌) ಮತ್ತು ಜರ್ಮನಿಯ ಜೂಲಿಯನ್ ವೆಬರ್ (25 ಪಾಯಿಂಟ್ಸ್‌) ಮೊದಲ ಎರಡು ಸ್ಥಾನ ಪಡೆದಿದ್ದಾರೆ. ಚೋಪ್ರಾ ಹೋದ ವರ್ಷ ಡೈಮಂಡ್‌ ಲೀಗ್‌ ಪ್ರಶಸ್ತಿ ಪಡೆದಿದ್ದರು.

ಈ ವರ್ಷ ಭಾರತದ ಸೂಪರ್‌ಸ್ಟಾರ್‌ ಅಥ್ಲೀಟ್‌, ದೋಹಾದಲ್ಲಿ (ಮೇ 5) ಮತ್ತು ಲುಸಾನ್‌ನಲ್ಲಿ (ಜೂನ್‌ 30) ವಿಜೇತರಾಗಿದ್ದಾರೆ. ಇದರ ಜೊತೆಗೆ ಬುಡಾಪೆಸ್ಟ್‌ನಲ್ಲಿ ಚಾರಿತ್ರಿಕ ಚಿನ್ನ ಗೆದ್ದಿದ್ದಾರೆ.

ಚೋಪ್ರಾ ಅವರು ಬಹುಮಾನವಾಗಿ ₹4.96 ಲಕ್ಷ ($6000) ಪಡೆದರೆ, ಚೆಕ್‌ ರಿಪಬ್ಲಿಕ್‌ನ ವಾದ್ಲೆಚ್‌ ಅವರು ₹9.92 ಲಕ್ಷ ನಗದು ಬಹುಮಾನ ಜೇಬಿಗಿಳಿಸಿದರು.

ಡೈಮಂಡ್‌ ಲೀಗ್‌ನ ಲೆಗ್‌ಗಳಲ್ಲಿ ಬೇರೆ ಬೇರೆ ನಗದು ಬಹುಮಾನಗಳು ಇರುತ್ತವೆ. ಯುಜೀನ್‌ ಲೆಗ್‌ನಲ್ಲಿ ವಿಜೇತ ಸ್ಪರ್ಧಿ ಸುಮಾರು ₹25 ಲಕ್ಷ  ಮತ್ತು ರನ್ನರ್‌ ಆದ ಸ್ಪರ್ಧಿ 9.92 ಲಕ್ಷ ಹಾಗೂ ಮೂರನೇ ಸ್ಥಾನ ಪಡೆದ ಸ್ಪರ್ಧಿ ₹5.78 ಲಕ್ಷ ಜೇಬಿಗೆ ಇಳಿಸಲಿದ್ದಾರೆ.

ಶ್ರೀಶಂಕರ್‌ಗೆ 5ನೇ ಸ್ಥಾನ: ಪುರುಷರ ಲಾಂಗ್‌ಜಂಪ್‌ನಲ್ಲಿ ಭಾರತದ ಮುರಳಿ ಶ್ರೀಶಂಕರ್‌ ಐದನೇ ಸ್ಥಾನ ಪಡೆದರು. ಅವರು ಮೊದಲ ಸುತ್ತಿನಲ್ಲಿ 7.99 ಮೀ. ಜಿಗಿದಿದ್ದು ಅದೇ ಉತ್ತಮ ಯತ್ನವಾಯಿತು. ಅವರು ಒಟ್ಟಾರೆ ಮೂರನೇ ಸ್ಥಾನದೊಡನೆ (14 ಪಾಯಿಂಟ್ಸ್‌) ಡೈಮಂಡ್‌ ಲೀಗ್‌ ಫೈನಲ್‌ಗೆ ಅರ್ಹತೆ ಪಡೆದರು.

ಮೊದಲ ಸುತ್ತಿನ ನಂತರ ಲೀಡ್‌ನಲ್ಲಿದ್ದ ಶ್ರೀಶಂಕರ್‌ ಅವರಿಗೆ ನಂತರದ ಯತ್ನಗಳಲ್ಲಿ ತಮ್ಮ ಸಾಧನೆಯನ್ನು ಸುಧಾರಿಸಲು ಸಾಧ್ಯವಾಗಲಿಲ್ಲ. ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ ಮಿಲ್ಟಿಯಾಡಿಸ್ ತೆಟೊಂಗ್ಲು (ಗ್ರೀಸ್‌) ಅವರು ಆರನೇ ಮತ್ತು ಅಂತಿಮ ಯತ್ನದಲ್ಲಿ 8.20 ಮೀ. ಜಿಗಿದು ಸ್ವರ್ಣ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.