
ಟೋಕಿಯೊ: ಭಾರತದ ನೀರಜ್ ಚೋಪ್ರಾ ಅವರಿಗೆ ಸತತ ಎರಡನೇ ಬಾರಿ ವಿಶ್ವ ಚಾಂಪಿಯನ್ ಕಿರೀಟ ಧರಿಸುವ ಕನಸು ಗುರುವಾರ ಭಗ್ನವಾಯಿತು.
ಇಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ನ ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ‘ಚಾಂಪಿಯನ್’ ನೀರಜ್ ಎಂಟನೇ ಸ್ಥಾನ ಪಡೆದರು. ಭಾರತದವರೇ ಆದ ಯುವ ಅಥ್ಲೀಟ್ ಸಚಿನ್ ಯಾದವ್ ನಾಲ್ಕನೇ ಸ್ಥಾನ ಪಡೆದು ಅಲ್ಪ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು.
ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಕೆಶ್ರಾನ್ ವಾಲ್ಕಾಟ್ (88.16ಮೀ) ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಗ್ರೆನೆಡಾದ ಆ್ಯಂಡರ್ಸನ್ ಪೀಟರ್ (87.38ಮೀ) ಮತ್ತು ಕರ್ಟೀಸ್ ಥಾಂಪ್ಸನ್ (86.67ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ನೀರಜ್ ಅವರು 2021ರಲ್ಲಿ ಒಲಿಂಪಿಕ್ಸ್ ಚಿನ್ನ ಜಯಿಸಿ ಇತಿಹಾಸ ನಿರ್ಮಿಸಿದ್ದ ಕ್ರೀಡಾಂಗಣ ಇದು. ಆದರೆ ಅವರಿಗೆ ಇಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಥ್ರೋ ದಾಖಲಿಸಲು ಕೂಡ ಆಗಲಿಲ್ಲ. ಅವರಿಂದ 84.03 ಮೀ ದೂರ ಥ್ರೋ ಮಾಡಲಷ್ಟೇ ಸಾಧ್ಯವಾಯಿತು.
ಸ್ಪರ್ಧಾ ಕಣದಲ್ಲಿದ್ದ 12 ಅಥ್ಲೀಟ್‌ಗಳಿಗೆ ತಲಾ ಐದು ಥ್ರೋ ಅವಕಾಶಗಳನ್ನು ನೀಡಲಾಗಿತ್ತು. ಅದರಲ್ಲಿ ಮೊದಲ ಆರು ಸ್ಥಾನ ಪಡೆದವರಿಗೆ ಆರನೇ ಥ್ರೋ ಅವಕಾಶ ನೀಡಲಾಯಿತು. ಅಚ್ಚರಿಯೆಂದರೆ ಈ ಸುತ್ತಿಗೆ ಭಾರತದ ಯುವ ಅಥ್ಲೀಟ್ ಸಚಿನ್ ಯಾದವ್ ಅರ್ಹತೆ ಪಡೆದರು. ಅವರು ಈ ಸ್ಪರ್ಧೆಯ ಪ್ರಥಮ ಥ್ರೋನಲ್ಲಿಯೇ 86.27 ಮೀಟರ್ಸ್ ದೂರ ಥ್ರೋ ಮಾಡಿ ನಾಲ್ಕನೇ ಸ್ಥಾನ ಪಡೆದರು. ಸಚಿನ್ ಅವರು ಚೋಪ್ರಾ, ಜರ್ಮನಿಯ ತಾರೆ ಜೂಲಿಯನ್ ವೆಬರ್ (86.11ಮೀ) ಮತ್ತು ಅರ್ಷದ್ (82.75 ಮೀ) ಅವರಿಗಿಂತ ಉತ್ತಮವಾಗಿ ಥ್ರೋಗಳನ್ನು ನಿರ್ವಹಿಸಿದರು. ಹೋದ ಬಾರಿ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚೋಪ್ರಾ ಚಿನ್ನ ಮತ್ತು ನದೀಂ ಬೆಳ್ಳಿ ಜಯಿಸಿದ್ದರು.
ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿರುವ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 83.65ಮೀಟರ್ಸ್ ಥ್ರೋ ಮಾಡಿ, ಐದನೇ ಸ್ಥಾನ ಪಡೆದರು. ಎರಡನೇ ಅವಕಾಶದಲ್ಲಿ ಸುಧಾರಿತ ಪ್ರದರ್ಶನ ನೀಡಿದ ಅವರು 84.03 ಮೀ ಥ್ರೋ ಮಾಡಿದರು. ಆದರೆ ಮೂರನೇ ಅವಕಾಶದಲ್ಲಿ ಫೌಲ್ ಮಾಡಿದರು. ಇದರಿಂದಾಗಿ ಎಂಟನೇ ಸ್ಥಾನಕ್ಕೆ ಕುಸಿದರು. ನಂತರದ ಭಾಗದುದ್ದಕ್ಕೂ ಅವರು ಇದೇ ಸ್ಥಾನದಲ್ಲಿ ಮುಂದುವರಿದರು.
ಅವರ ನಾಲ್ಕನೇ ಥ್ರೋ 82.86ಮೀ ದೂರ ಎಸೆದರು. ಕೇನ್ಯಾದ ಜೂಲಿಯಸ್ ಯೆಗೊ ಅವರು 85.54 ಮೀ ದೂರ ಥ್ರೋ ಮಾಡಿದರು. ಐದನೇ ಅವಕಾಶದಲ್ಲಿ ನೀರಜ್ ಅವರು ಫೌಲ್ ಆಗುವುದರೊಂದಿಗೆ ನಿರಾಶೆಯಲ್ಲಿ ಮುಳುಗಿದರು. ತಮ್ಮ ಸೊಂಟದ ಬೆಲ್ಟ್ ತೆಗೆದರು. ಅದರಿಂದ ಮುಖ ಮುಚ್ಚಿಕೊಂಡರು.
ಸ್ಥಿರ ಪ್ರದರ್ಶನಕ್ಕೆ ಹೆಸರಾಗಿರುವ ಚೋಪ್ರಾ ಅವರು ಇಲ್ಲಿ 85 ಮೀ ಹಂತವನ್ನೂ ದಾಟಲಿಲ್ಲ. ಹೋದ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನಲ್ಲಿ ಅವರು ಚಿನ್ನ ಗೆದ್ದಿದ್ದರು. ಆ ಸ್ಪರ್ಧೆಯಲ್ಲಿ ಅವರು 82.27 ಮೀ ಥ್ರೋ ಮಾಡಿದ್ದು ಇಲ್ಲಿಯವರಿಗಿನ ಕನಿಷ್ಠ ದಾಖಲೆಯಾಗಿತ್ತು.
ಮೇ ತಿಂಗಳಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀ ದೂರ ಸಾಧನೆಯನ್ನು ಚೋಪ್ರಾ ಮಾಡಿದ್ದರು.
ಅಭ್ಯಾಸದ ವೇಳೆ ಆದ ಗಾಯ: ಚೋಪ್ರಾ
ವಿಶ್ವ ಚಾಂಪಿಯನ್‌ಷಿಪ್‌ಗೂ ಮುನ್ನವೇ ತಮಗೆ ಬೆನ್ನು ನೋವಿನ ಸಮಸ್ಯೆ ಇರುವುದರ ಕುರಿತು ನೀರಜ್ ಚೋಪ್ರಾ ಅವರು ಸ್ಪಷ್ಟಪಡಿಸಿದ್ದಾರೆ.
‘ಈ ಸ್ಪರ್ಧೆಗೆ ಬರುವ ಮುನ್ನ ಝೆಕ್ ಗಣರಾಜ್ಯದಲ್ಲಿ ಅಭ್ಯಾಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿಯೇ ಬೆನ್ನುನೋವು ಕಾಡಿತ್ತು. ಅದಕ್ಕಾಗಿ ಕಳೆದ ಎರಡು ವಾರಗಳಿಂದ ನಾನು ತರಬೇತಿಯಲ್ಲಿ ಪಾಲ್ಗೊಂಡಿಲ್ಲ. ಕೇವಲ ಗಾಯದ ಆರೈಕೆಯಲ್ಲಿದ್ದೇನೆ. ನನ್ನ ತಂಡಕ್ಕೆ ಇದು ಗೊತ್ತಿದೆ. ಎಎಫ್‌ಐಗೂ ತಿಳಿಸಿದ್ದೇವೆ’ ಎಂದು ನೀರಜ್ ‘ಎನ್‌ಎನ್‌ಐಎಸ್’ಗೆ ತಿಳಿಸಿದೆ.
‘ನನಗೆ ಇಲ್ಲಿ ಕಣಕ್ಕಿಳಿಯಲು ಸಾಧ್ಯವೋ ಇಲ್ಲವೋ ಎಂಬುದೇ ಗೊತ್ತಿರಲಿಲ್ಲ. ಬಹಳಷ್ಟು ಯೋಚನೆ, ಯೋಜನೆ ನಂತರ ಸ್ಪರ್ಧೆಗೆ ಇಳಿಯುವುದು ಎಂದು ನಿರ್ಧರಿಸಿದೆವು. ತರಬೇತಿಯಲ್ಲಿ ಹೆಚ್ಚು ಭಾಗವಹಿಸಲಿಲ್ಲ. ನನಗೇ ಪೂರ್ಣ ಸೌಖ್ಯವೆನಿಸುತ್ತಿರಲಿಲ್ಲ’ ಎಂದರು
‘ಸೆಪ್ಟೆಂಬರ್ 4 ರಂದು ಬೆನ್ನುನೋವು ಆರಂಭವಾಯಿತು. ಅದಕ್ಕೆ ಕಾರಣವಾಗುವ ಘಟನೆಯೊಂದು ಆ ದಿನ ನಡೆಯಿತು. ಅವತ್ತು ನಾನು ಶಾಟ್‌ಪಟ್ ಥ್ರೋ ಮಾಡುತ್ತಿದ್ದೆ. ಲೋಹದ ಗುಂಡನ್ನು ಒಂದು ಬಾರಿ ಮುಂದೆ ಮತ್ತೊಂದು ಸಲ ಹಿಂದೆ ಎಸೆಯುವ ಅಭ್ಯಾಸವದು. ನಾನು ಮುಂದೆ ಎಸೆಯಲು ಬಾಗಿದಾಗ ಬೆನ್ನಿನ ಎಡಬದಿಯಲ್ಲಿ ಇದ್ದಕ್ಕಿದ್ದಂತೆ ಸೆಳೆತ ಉಂಟಾಯಿತು. ಅದರಿಂದಾಗಿ ಓಡಾಡಲು ಆಗಲಿಲ್ಲ’ ಎಂದು ವಿವರಿಸಿದರು.
‘ಎಂಆರ್‌ಐ ಸ್ಕ್ಯಾನಿಂಗ್ ನಂತರ ಡಿಸ್ಕ್‌ನಲ್ಲಿ ಸಮಸ್ಯೆ ಕಂಡುಬಂದಿತು. ಇಲ್ಲಿಗೆ (ಟೋಕಿಯೊ) ಸೆ. 6ರಂದು ಬಂದೆವು. ಪ್ರತಿದಿನವೂ ಯಂತ್ರದ ಸಹಾಯದಿಂದ ಚಿಕಿತ್ಸೆ ನಡೆಯುತ್ತಿದೆ. ಥ್ರೋ ಮಾಡುವ ಪ್ರಯತ್ನಗಳ ಪರೀಕ್ಷೆ ಮಾಡಿದ ನಂತರವಷ್ಟೇ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಲಾಯಿತು’ ಎಂದು ನೀರಜ್ ಹೇಳಿದರು.
2 ವಾರಗಳಿಂದ ನೀರಜ್‌ಗೆ ಬೆನ್ನುನೋವು
ನವದೆಹಲಿ: ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಕಳೆದೆರಡು ವಾರಗಳಿಂದ ಬೆನ್ನುನೋವು ಕಾಡುತ್ತಿದೆ. ಅದೇ ಕಾರಣದಿಂದ ಅವರಿಗೆ ಗುರುವಾರ ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಹಿನ್ನಡೆಯಾಗಿರುವ ಸಾಧ್ಯತೆ ಇದೆ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಮೂಲಗಳು ತಿಳಿಸಿವೆ.
‘ಚೋಪ್ರಾ ಅವರಿಗೆ ಕಳೆದ ಒಂದೆರಡು ವಾರಗಳಿಂದ ಬೆನ್ನುನೋವಿನ ಸಮಸ್ಯೆ ಇದೆ. ಅವರು ನಮಗೆ ಈ ಕುರಿತು ಮೊದಲೇ ತಿಳಿಸಿದ್ದಾರೆ. ಬೆನ್ನು ನೋವಿನಿಂದಾಗಿ ಅವರ ಕಾರ್ಯಕ್ಷಮತೆ ಕುಂಠಿತವಾಗಿರುವ ಸಾಧ್ಯತೆ ಇದೆ. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಸಹಜ ಪ್ರಕ್ರಿಯೆ. ಜಾವೆಲಿನ್ ಥ್ರೋ ಅಂತಹ ಸ್ಪರ್ಧೆಯಲ್ಲಿ ಎಲ್ಲ ದಿನವೂ ಒಂದೇ ಆಗಿರುವುದಿಲ್ಲ. ಸ್ಪರ್ಧೆಯ ದಿನದ ಪ್ರದರ್ಶನ ಹೇಗಿರುತ್ತದೆ ಎಂದು ಮೊದಲೇ ಊಹಿಸಲಾಗದು. ಚೆನ್ನಾಗಿಯೂ ಆಗಬಹುದು ಅಥವಾ ಕಳಪೆಯೂ ಆಗಬಹುದು. ಇದು ಯಾರಿಗಾದರೂ ಆಗಬಹುದು’ ಎಂದು ಹೇಳಿದೆ.
‘ಚೋಪ್ರಾ ಅವರು ಫೆಡರೇಷನ್‌ಗೆ ಬೆನ್ನುನೋವಿನ ಸಮಸ್ಯೆ ಕುರಿತು ಈ ಮೊದಲೇ ತಿಳಿಸಿದ್ದರು. ವಿಶ್ವ ಅಥ್ಲೆಟಿಕ್ಸ್‌ಗೂ ಮುನ್ನ ಜೆಕ್ ಗಣರಾಜ್ಯದಲ್ಲಿ ಅವರು ತಾಲೀಮು ನಡೆಸುವಾಗ ಬೆನ್ನುನೋವು ಕಾಡಿತ್ತು. ಸದ್ಯದ ಕೋಚ್ ಯಾನ್ ಝೆಲೆಂಜಿ ಅವರ ಮಾರ್ಗದರ್ಶನದಲ್ಲಿ ಅವರು ಅಭ್ಯಾಸ ಮಾಡಿದ್ದರು’ ಎಂದು ತಿಳಿಸಿದೆ.
‘ಸಚಿನ್ ಯಾದವ್ ಅವರ ಸಾಧನೆಯು ಭಾರತದಲ್ಲಿ ಜಾವೆಲಿನ್ ಥ್ರೋ ವಿಭಾಗದ ಶಕ್ತಿಯನ್ನು ತೋರಿಸಿದೆ’ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.