ADVERTISEMENT

ಪ್ರಧಾನಿ ಮೋದಿ ಭೇಟಿಯಾದ ವಿಶ್ವ ಚಾಂಪಿಯನ್ ಗುಕೇಶ್; ಚೆಸ್‌ ಫಲಕ ಉಡುಗೊರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2024, 14:12 IST
Last Updated 28 ಡಿಸೆಂಬರ್ 2024, 14:12 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಡಿ.ಗುಕೇಶ್‌&nbsp;</p></div>

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಡಿ.ಗುಕೇಶ್‌ 

   

ಎಕ್ಸ್‌ ಚಿತ್ರ

ನವದೆಹಲಿ: ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಅವರು ಇಂದು (ಶನಿವಾರ) ಕುಟುಂಬ ಸಮೇತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ADVERTISEMENT

ಗುಕೇಶ್‌ ಭೇಟಿಯಾಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

‘ಚೆಸ್ ಚಾಂಪಿಯನ್ ಮತ್ತು ಭಾರತದ ಹೆಮ್ಮೆಯ ಗುಕೇಶ್ ಅವರೊಂದಿಗೆ ಉತ್ತಮ ಮಾತುಕತೆ ನಡೆಸಲಾಯಿತು. ಗುಕೇಶ್‌ ಎಂದ ತಕ್ಷಣ ನನಗೆ ಮನಸ್ಸಿಗೆ ಹೊಳೆಯುವುದು ಅವರ ಧೃಢ ನಿಶ್ಚಯ ಮತ್ತು ಸಮರ್ಪಣೆ. ಅವರ ಆತ್ಮವಿಶ್ವಾಸ ನಿಜಕ್ಕೂ ಸ್ಫೂರ್ತಿದಾಯಕ. ಕೆಲವು ವರ್ಷಗಳ ಹಿಂದೆ ಅತ್ಯಂತ ಕಿರಿಯ ವಯಸ್ಸಿನ ಚೆಸ್‌ ಚಾಂಪಿಯನ್‌ ಆಗಬೇಕೆಂಬ ಕನಸಿನ ಮಾತುಗಳನ್ನಾಡಿದ ವಿಡಿಯೊ ನೋಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇಂದು ಅವರ ಸ್ವ ಪ್ರಯತ್ನಗಳಿಂದ ಅದು ನಿಜವಾಗಿದೆ’ ಎಂದು ಪ್ರಧಾನಿ ಮೋದಿ ಅವರು ಗುಕೇಶ್‌ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

‘ಆತ್ಮವಿಶ್ವಾಸದ ಜೊತೆಗೆ ಗುಕೇಶ್‌ ಶಾಂತತೆ ಮತ್ತು ನಮ್ರತೆಯನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಕ್ರೀಡಾಪಟುವಿನ ಯಶಸ್ಸಿನಲ್ಲಿ ಅವರ ಹೆತ್ತವರು ಪ್ರಮುಖ ಪಾತ್ರ ವಹಿಸುತ್ತಾರೆ. ಗುಕೇಶ್‌ ಅವರನ್ನು ಬೆಂಬಲಿಸಿದ್ದಕ್ಕಾಗಿ ಆತನ ಪೋಷಕರನ್ನು ಅಭಿನಂದಿಸಿದೆ. ಗುಕೇಶ್‌ ಪೋಷಕರ ಸಮರ್ಪಣೆಯು ಕ್ರೀಡೆಯನ್ನು ವೃತಿಯಾಗಿ ಮುಂದುವರಿಸಬೇಕೆಂದು ಕನಸು ಕಾಣುವ ಯುವ ಆಕಾಂಕ್ಷಿಗಳ ಅಸಂಖ್ಯಾತ ಪೋಷಕರಿಗೆ ಸ್ಫೂರ್ತಿ ನೀಡುತ್ತದೆ’ ಎಂದು ಮೋದಿ ಹೇಳಿದ್ದಾರೆ.

ಗುಕೇಶ್‌ ಅವರು ಗೆದ್ದ ಆಟದ ಮೂಲ ಚದುರಂಗದ ಫಲಕವನ್ನು ಸ್ವೀಕರಿಸಿದ್ದಕ್ಕಾಗಿ ನಾನು ಸಂತೋಷ ಪಡುತ್ತೇನೆ. ಗುಕೇಶ್‌ ಮತ್ತು ಡಿಂಗ್ ಲಿರೇನ್ ಇಬ್ಬರೂ ಸಹಿ ಮಾಡಿರುವ ಚದುರಂಗ ಫಲಕವು ಒಂದು ಸ್ಮರಣಿಕೆಯಾಗಿದೆ ಎಂದು ಮೋದಿ ತಿಳಿಸಿದ್ದಾರೆ.

18 ವರ್ಷದ ಗುಕೇಶ್ ಅವರು ಈಚೆಗೆ ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೇನ್ ವಿರುದ್ಧ ಗೆದ್ದು ದಾಖಲೆ ಬರೆದಿದ್ದರು.

ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. ಹಾಗೆಯೇ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಬಳಿಕ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಎರಡನೇ ಭಾರತೀಯ ಎನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.