ADVERTISEMENT

ವಿಶ್ವಕಪ್‌ ಚೆಸ್‌| ಯಾಕುಬುಯೇವ್‌ಗೆ ಜಯ: ಡ್ರಾ ಆಟದಲ್ಲಿ ಅರ್ಜುನ್‌, ವೀ ಯಿ

ಪಿಟಿಐ
Published 17 ನವೆಂಬರ್ 2025, 15:46 IST
Last Updated 17 ನವೆಂಬರ್ 2025, 15:46 IST
<div class="paragraphs"><p>ಆಟದ ಆರಂಭದಲ್ಲಿ ಹಸ್ತಲಾಘವ ಮಾಡಿದ ವೀ ಯಿ (ಚೀನಾ) ಮತ್ತು ಅರ್ಜುನ್ ಇರಿಗೇಶಿ </p></div>

ಆಟದ ಆರಂಭದಲ್ಲಿ ಹಸ್ತಲಾಘವ ಮಾಡಿದ ವೀ ಯಿ (ಚೀನಾ) ಮತ್ತು ಅರ್ಜುನ್ ಇರಿಗೇಶಿ

   

ಫಿಡೆ ವೆಬ್‌ಸೈಟ್‌ ಚಿತ್ರ

ಪಣಜಿ: ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯುವ ಯತ್ನದಲ್ಲಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಇರಿಗೇಶಿ, ವಿಶ್ವಕಪ್ ಚೆಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ವೀ ಯಿ ವಿರುದ್ಧ ಮೊದಲ ಕ್ಲಾಸಿಕಲ್ ಆಟವನ್ನು ಡ್ರಾ ಮಾಡಿಕೊಂಡರು. ದಿನದ ನಾಲ್ಕು ಮುಖಾಮುಖಿಗಳಲ್ಲಿ ಮೂರು ಡ್ರಾ ಆದವು.

ADVERTISEMENT

ಉಜ್ಬೇಕಿಸ್ತಾನದ ನದಿರ್ಬೆಕ್ ಯಾಕುಬುಯೇವ್ ಅವರು ಮೊದಲ ಕ್ಲಾಸಿಕಲ್ ಆಟದಲ್ಲಿ ಜರ್ಮನಿಯ  ಅಲೆಕ್ಸಾಂಡರ್ ಡೊನ್ಚೆಂಕೊ ಅವರನ್ನು ಸೋಲಿಸಿ 1–0 ಮುನ್ನಡೆ ಪಡೆದರು. ಡೊನ್ಚೆಂಕೊ ಈ ಟೂರ್ನಿಯಲ್ಲಿ ಅಮೋಘವಾಗಿ ಆಡಿ ಗಮನಸೆಳೆದಿದ್ದು, ಎಂಟರ ಘಟ್ಟದ ಮೊದಲ ಆಟದಲ್ಲಿ 44 ನಡೆಗಳಲ್ಲಿ ಸೋಲು ಕಂಡರು. ಮಂಗಳವಾರ ಎರಡನೇ ಆಟ ಡ್ರಾ ಆದರೂ ಉಜ್ಬೇಕ್ ಆಟಗಾರ ಸೆಮಿಫೈನಲ್ ತಲುಪಬಹುದು.

ಬಿಳಿ ಕಾಯಿಗಳಲ್ಲಿ ಆಡಿದ ಚೀನಾ ಆಟಗಾರ ಎದುರು ಅರ್ಜುನ್‌ 31 ನಡೆಗಳಲ್ಲಿ (59 ನಿಮಿಷಗಳಲ್ಲಿ) ಡ್ರಾ ಮಾಡಿಕೊಂಡು ಹಸ್ತಲಾಘವದೊಡನೆ ನಿರ್ಗಮಿಸಿದರು. ಮಹತ್ವದ ಘಟ್ಟವಾದ ಕಾರಣ ಉಭಯ ಆಟಗಾರರು ಯಾವುದೇ ಸಾಹಸಕ್ಕೆ  (ರಿಸ್ಕ್‌) ಕೈಹಾಕಲಿಲ್ಲ. ಅರ್ಜುನ್ ನಿಖರತೆ ಶೇ 99.5 ಇದ್ದರೆ, ವೀ ಯಿ ಅವರೂ ಕರಾರುವಾಕ್‌ (ಶೇ 99) ಆಡಿದರು.

ಉಜ್ಬೇಕಿಸ್ತಾನದ ಇನ್ನೊಬ್ಬ ಆಟಗಾರ ಜಾವೊಖಿರ್ ಸಿಂದರೋವ್ ಇನ್ನೊಂದು ಮುಖಾಮುಖಿಯಲ್ಲಿ ಮೆಕ್ಸಿಕೊದ ಹೊಸೆ ಎಡ್ವಾರ್ಡೊ ಮಾರ್ಟಿನೆಝ್‌ ಅಲ್ಕಂತಾರ ಜೊತೆ ಡ್ರಾ ಮಾಡಿಕೊಂಡರು. ಅಮೆರಿಕದ ಸ್ಯಾಮ್ ಶಂಕ್ಲಾಂಡ್ ಮತ್ತು ರಷ್ಯಾದ ಆ್ಯಂಡ್ರಿ ಇಸಿಪೆಂಕೊ ನಡುವಣ ಮೊದಲ ಆಟವೂ ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.