ಗುವಾಹಟಿ: ಭಾರತದ ಅಗ್ರ ಆಟಗಾರ್ತಿಯರಾದ ತನ್ವಿ ಶರ್ಮಾ, ಉನ್ನತಿ ಹೂಡಾ ಅವರು ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ಗಳಲ್ಲಿ ಬುಧವಾರ ನೇರ ಆಟಗಳಿಂದ ಜಯಗಳಿಸಿ ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ರಕ್ಷಿತಾಶ್ರೀ ರಾಮರಾಜ್ ಗೆಲ್ಲುವ ಮೊದಲು ಆತಂಕದ ಕ್ಷಣಗಳನ್ನು ಕಾಣಬೇಕಾಯಿತು.
ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ತನ್ವಿ 15–12, 15–7 ರಿಂದ ಇಂಡೊನೇಷ್ಯಾದ ಒಯಿ ವಿನಾರ್ಟೊ ಅವರನ್ನು ಸೋಲಿಸಿದರು. ಎಂಟನೇ ಶ್ರೇಯಾಂಕದ ಉನ್ನತಿ 15–8, 15–5 ರಿಂದ ಅಮೆರಿಕದ ಅಲೈಸ್ ವಾಂಗ್ ಅವರನ್ನು ಹಿಮ್ಮೆಟ್ಟಿಸಲು ಕಷ್ಟಪಡಲಿಲ್ಲ. ಆದರೆ ಹತ್ತನೇ ಶ್ರೇಯಾಂಕದ ರಕ್ಷಿತಾ 11–15, 15–5, 15–8 ರಿಂದ ಸಿಂಗಪುರದ ಆಲಿಯಾ ಝಕಾರಿಯಾ ವಿರುದ್ಧ ಗೆಲ್ಲುವ ಮೊದಲು ಆತಂಕದ ಕ್ಷಣಗಳನ್ನು ಕಾಣಬೇಕಾಯಿತು.
‘ವಿನಾರ್ಟೊ ವಿರುದ್ಧ ನಾನು ಆರಂಭದಲ್ಲಿ ಉತ್ತಮವಾಗಿ ಆಡಿ 9–4, 9–5 ಮುನ್ನಡೆ ಪಡೆದಿದ್ದೆ. ಇದಕ್ಕಿದ್ದ ಹಾಗೆ ತಪ್ಪುಗಳನ್ನು ಮಾಡತೊಡಗಿದೆ. ರ‍್ಯಾಲಿಗಳನ್ನು ಆಡುವಂತೆ ಕೋಚ್ ಸಲಹೆ ನೀಡಿದರು. ನಂತರ ನಾನು ಸರಾಗವಾಗಿ ಆಡಿದೆ’ ಎಂದು ವಿಶ್ವದ ಅಗ್ರಮಾನ್ಯ ಜೂನಿಯರ್ ಆಟಗಾರ್ತಿ ತನ್ವಿ ಪಂದ್ಯದ ನಂತರ ಹೇಳಿದರು.
ತನ್ವಿ 16ರ ಸುತ್ತಿನ ಪಂದ್ಯದಲ್ಲಿ ಚೀನಾದ ಲಿ ಯುವಾನ್ ಸುನ್ ಅವರನ್ನು ಎದುರಿಸಲಿದ್ದಾರೆ. ಲಿ ಇನ್ನೊಂದು ಪಂದ್ಯದಲ್ಲಿ ಒಂಬತ್ತನೇ ಶ್ರೇಯಾಂಕದ ಲಿಯಾವೊ ಜುಯಿ ಚಿ ಅವರಿಗೆ ಆಘಾತ ನೀಡಿದರು.
ರಕ್ಷಿತಾಶ್ರೀ ಮುಂದಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ರನಿತ್ಮಾ ಲಿಯಾನಗೆ ಅವರನ್ನು ಎದುರಿಸಲಿದ್ದಾರೆ. ಲಂಕಾದ ರನಿತ್ಮಾ 15–9, 15–12 ರಿಂದ ಮಲೇಷ್ಯಾದ ಲೆರ್ ಕ್ವಿ ಇಂಗ್ ಅವರನ್ನು ಸೋಲಿಸಿದರು.
ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಜ್ಞಾನ ದತ್ತು ಟಿ.ಟಿ. ಅವರು ಭಾರತದ ಪದಕದ ಭರವಸೆಯಾಗಿ ಉಳಿದಿದ್ದಾರೆ. ಅವರು 32ರ ಸುತ್ತಿನಲ್ಲಿ ಸ್ವದೇಶದ ಆಟಗಾರ, 15ನೇ ಶ್ರೇಯಾಂಕದ ಸೂರ್ಯಾಕ್ಷ್ ರಾವತ್ ಅವರನ್ನು 11–15, 15–6, 15–11 ರಿಂದ ಸೋಲಿಸಿದರು.
11ನೇ ಶ್ರೇಯಾಂಕದ ರೌನಕ್ ಚೌಹಾನ್ 11–15, 12–15 ರಲ್ಲಿ ಲಿ ಝಿ ಹಾಂಗ್ ಅವರಿಗೆ ಮಣಿದರು.
ಮಿಶ್ರ ಡಬಲ್ಸ್‌ನಲ್ಲಿ 14ನೇ ಶ್ರೇಯಾಂಕದ ಭವ್ಯಾ ಛಾಬ್ರಾ ಮತ್ತು ವಿಶಾಖ ಟೊಪ್ಪೊ ಸಹ 16ರ ಸುತ್ತನ್ನು ಪ್ರವೇಶಿಸಿದರು. ಈ ಜೋಡಿ ಡೆನ್ಮಾರ್ಕ್‌ನ ಅಸ್ಕೆ ರೊಮೆರ್– ಜಾಸ್ಮಿನ್ ವಿಲಿಸ್ ಅವರನ್ನು 15–13, 15–11 ರಿಂದ ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.