
ಕೊನೆಯ ಪಂದ್ಯದಲ್ಲಿ ಗುಕೇಶ್‌ಗೆ ರೋಚಕ ಗೆಲುವು
(ಪಿಟಿಐ ಚಿತ್ರ)
ದೋಹಾ: ವಿಶ್ವ ಚಾಂಪಿಯನ್ ಅವರು ಗುರುವಾರ ದೋಹಾದಲ್ಲಿ ಆರಂಭವಾಗುವ ಫಿಡೆ ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಝ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ತೋರುವ ಮೂಲಕ ವರ್ಷವನ್ನು ಯಶಸ್ವಿಯಾಗಿ ಮುಗಿಸುವ ಅವಕಾಶ ಹೊಂದಿದ್ದಾರೆ. ಮಹಿಳಾ ವಿಭಾಗದಲ್ಲಿ ಕೋನೇರು ಹಂಪಿ ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯಲ್ಲಿದ್ದಾರೆ.
ವರ್ಷಾಂತ್ಯದ ಈ ಪ್ರಮುಖ ಟೂರ್ನಿಯಲ್ಲಿ ಪ್ರಮುಖ ಆಟಗಾರರು ಭಾಗವಹಿಸುತ್ತಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್, ಅಮೆರಿಕದ ಫ್ಯಾಬಿಯಾನೊ ಕರುವಾನ, ವೆಸ್ಲಿ ಸೊ, ರಷ್ಯಾದ ಇಯಾನ್ ನಿಪೊಮ್‌ಮನಿಷಿ, ಭಾರತದ ಪ್ರಜ್ಞಾನಂದ, ಅರ್ಜುನ್ ಇರಿಗೇಶಿ, ನಿಹಾಲ್ ಸರೀನ್ ಅವರು ಓಪನ್ ವಿಭಾಗದಲ್ಲಿ ಕಣದಲ್ಲಿರುವ ಖ್ಯಾತನಾಮರು.
2023ರಲ್ಲಿ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿದ್ದ ಡಿ.ಗುಕೇಶ್ ಈ ವರ್ಷ ಅಷ್ಟೇನೂ ಗಮನ ಸೆಳೆದಿಲ್ಲ. ಪ್ರಜ್ಞಾನಂದ ಈ ಬಾರಿ ಅತಿ ಹೆಚ್ಚು ಯಶಸ್ಸು ಪಡೆದಿದ್ದಾರೆ.
ಮುಂದಿನ ವರ್ಷ ವಿಶ್ವ ಚಾಂಪಿಯನ್‌ಷಿಪ್ ನಿಗದಿಯಾಗಿದ್ದು, ಈ ಮಹತ್ವದ ಸ್ಪರ್ಧೆಗೆ ಆತ್ಮವಿಶ್ವಾಸ ಗಳಿಸುವ ದೃಷ್ಟಿಯಿಂದ ಗುಕೇಶ್ ಅವರಿಗೆ ಇದು ಮಹತ್ವದ ಟೂರ್ನಿ. ಗೋವಾದಲ್ಲಿ ಇತ್ತೀಚಿನ ವಿಶ್ವಕಪ್‌ನಲ್ಲಿ ಬೇಗ ಹೊರಬಿದ್ದು, ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯುವ ಅವಕಾಶ ಕಳೆದುಕೊಂಡ 22 ವರ್ಷ ವಯಸ್ಸಿನ ಅರ್ಜುನ್ ಇರಿಗೇಶಿ ಅವರಿಗೂ ಇದು ಸ್ಪೂರ್ತಿ ಪಡೆದುಕೊಳ್ಳಲು ಅವಕಾಶ.
ಓಪನ್ ವಿಭಾಗದಲ್ಲಿ ಭಾರತದ 29 ಮಂದಿ ಕಣದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ವಿಶ್ವ ಕಪ್ ವಿಜೇತೆ ದಿವ್ಯಾ ದೇಶಮುಖ್ ಸೇರಿದಂತೆ 13 ಮಂದಿ ಪೈಪೋಟಿಯಲ್ಲಿದ್ದಾರೆ.
ಕಾರ್ಲ್‌ಸನ್ ಅವರು ಓಪನ್ ರ್‍ಯಾಪಿಡ್ ಮತ್ತು ಬ್ಲಿಟ್ಝ್ – ಎರಡೂ ಟೂರ್ನಿಗಳಲ್ಲಿ (2881) ಅಗ್ರ ಶ್ರೇಯಾಂಕ ಪಡೆದಿದ್ದಾರೆ.