
ನವದೆಹಲಿ: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕುಸ್ತಿಪಟು ರೀತಿಕಾ ಹೂಡಾ ಅವರನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (ಟಾಪ್ಸ್) ಯಿಂದ ಅನರ್ಹಗೊಳಿಸಲಾಗಿದೆ. ಆರ್ಚರಿ ಕ್ರೀಡಾಪಟುಗಳಾದ ಪರಣೀತ್ ಕೌರ್ ಮತ್ತು ಅಭಿಷೇಕ್ ವರ್ಮಾ ಅವರಿಗೆ ಬಡ್ತಿ ಲಭಿಸಿದೆ. ಡೆಕಾಥ್ಲಾನ್ ಅಥ್ಲೀಟ್ ತೇಜಸ್ವಿನ್ ಶಂಕರ್ ಕೂಡ ಸ್ಥಾನ ಗಳಿಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವಾಲಯವು ಬಿಡುಗಡೆ ಮಾಡಿರುವ ಟಾಪ್ಸ್ ಪಟ್ಟಿಯಲ್ಲಿ ಈ ಸಲ 118 ಅಥ್ಲೀಟ್‌ಗಳು ಅವಕಾಶ ಪಡೆದಿದ್ದಾರೆ. ಅದರಲ್ಲಿ ಸಾಮಾನ್ಯ ವರ್ಗದ 57 ಮತ್ತು 61 ಪ್ಯಾರಾ ಅಥ್ಲೀಟ್‌ಗಳಿದ್ದಾರೆ. 2024ರಲ್ಲಿ ಪ್ಯಾರಿಸ್ ಒಲಿಂಪಿಕ್ ಕೂಡ ಮುಗಿದಿತ್ತು. ಅದರಿಂದಾಗಿ 179 ಅಥ್ಲೀಟ್‌ಗಳಿದ್ದ ಪಟ್ಟಿಯನ್ನು ಹೋದ ವರ್ಷ 94ಕ್ಕೆ ಇಳಿಸಲಾಗಿತ್ತು. ಈ ವರ್ಷ ಹೆಚ್ಚು ಅಥ್ಲೀಟ್‌ಗಳಿಗೆ ಅವಕಾಶಲಭಿಸಿದೆ.
ಆದರೆ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್ ಪದಕ ಗಳಿದಿರುವ ರೀತಿಕಾ ಅವರು ಹೋದ ವರ್ಷ ಫೆಬ್ರುವರಿಯಲ್ಲಿ ಪ್ರಕಟವಾಗಿದ್ದ ಪಟ್ಟಿಯಲ್ಲಿ ಇದ್ದರು. ಆದರೆ ಕಳೆದ ಜುಲೈನಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ನಡೆದಿದ್ದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದರು.
‘ಈ ಬಾರಿಯ ಪಟ್ಟಿಯಿಂದ ಅವರನ್ನು ಅನರ್ಹಗೊಳಿಸಲಾಗಿದೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮೂಲಗಳು ತಿಳಿಸಿವೆ.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಚಿನ್ನದ ಪದಕವಿಜೇತ ಅಥ್ಲೀಟ್ ಸಿಮ್ರನ್ ಮತ್ತು ಅವರ ಕೋಚ್ ಉಮರ್ ಸೈಫಿ ಅವರು ಹೋದ ಅಕ್ಟೋಬರ್‌ನಲ್ಲಿ ಡೋಪ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಅವರು ಪಟ್ಟಿಯಲ್ಲಿದ್ದಾರೆ.
‘ಅವರ (ಸಿಮ್ರನ್) ಪ್ರಕರಣದ ಕುರಿತು ಮುಂದಿನ ಮಿಷನ್ ಒಲಿಂಪಿಕ್ಸ್ ಸೆಲ್ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಸಿಮ್ರನ್ ಅವರು ದೃಷ್ಟಿದೋಷವುಳ್ಳ ಅಥ್ಲೀಟ್ ಆಗಿದ್ದಾರೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 200 ಮೀ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಕಂಪೌಂಡ್ ಆರ್ಚರಿ ವಿಭಾಗದ ಎಂಟು ಜನರಿಗೆ ಈ ಪಟ್ಟಿಯಲ್ಲಿ ಅವಕಾಶ ಪಡೆದಿದೆ. ಪರಣೀತ್, ಅಭಿಷೇಕ್ ಮತ್ತು ಜ್ಯೋತಿ ಸುರೇಖಾ ಅವರು ಇದರಲ್ಲಿದ್ದಾರೆ. ರಿಕರ್ವ್ ತಾರೆಗಳಾಗದ ದೀಪಿಕಾ ಕುಮಾರಿ, ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ಇದ್ದಾರೆ. ಅವರಲ್ಲದೇ ಕಂಪೌಡ್ ವಿಭಾಗದಲ್ಲಿ ಅದಿತಿ ಗೋಪಿಚಂದ್ ಸ್ವಾಮಿ, ಒಜಸ್ ಪ್ರವೀಣ ಡಿಯೊಟೇಲ್, ಪ್ರಿಯಾಂಶು ಪ್ರಥಮೇಶ್, ಸಮಾಧಾನ್ ಜಾವಕರ್ ಮತ್ತು ರಿಷಭ್ ಯಾದವ್ ಇದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ತಾರೆ, ಒಲಿಂಪಿಯನ್ ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಜಾವೆಲಿನ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಸಚಿನ್ ಯಾದವ್ ಅವರು ಪಟ್ಟಿಯಲ್ಲಿದ್ದಾರೆ. ಟ್ರ್ಯಾಕ್–ಫೀಲ್ಡ್ ವಿಭಾಗದಲ್ಲಿ ಸ್ಟೀಪಲ್ ಚೇಸರ್ ಅವಿನಾಶ್ ಸಬಳೆ, ಲಾಂಗ್ ಜಂಪ್ ಅಥ್ಲೀಟ್ ಎಸ್. ಶ್ರೀಶಂಕರ್ ಹಾಗೂ ಹೊಸದಾಗಿ ಸರ್ವೇಶ್ ಕುಶಾರೆ (ಏಷ್ಯನ್ ಚಾಂಪಿಯನ್‌ಷಿಪ್ ಹೈಜಂಪ್ ಬೆಳ್ಳಿ ವಿಜೇತ) ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಡೆವಲಮೆಂಟಲ್ ಗ್ರೂಪ್‌ನಲ್ಲಿ ಅನಿಮೇಶ್ ಕುಜೂರ್ (200 ಮೀ ಓಟ), ರಿಲೇ ಓಟಗಾರರಾದ ಟಿ.ಕೆ. ವಿಶಾಲ್, ಜೈ ಕುಮಾರ್, ರಾಜೇಶ್ ರಮೇಶ್, ಅಮೋಜ್ ಜೇಕಬ್, ಮೊಹಮ್ಮದ್ ಅಜ್ಮಲ್ ವಿ ಮತ್ತು ಸಂತೋಷ್ ಕುಮಾರ್ ಅವರನ್ನು ಸೇರ್ಪಡೆ ಮಾಡಲಾಗಿದೆ. ಟೇಬಲ್ ಟೆನಿಸ್ ಕ್ರಿಖಡೆ ಉದಯೋನ್ಮುಖರಾದ ಮಾನುಷ್ ಶಾ, ಮಾನವ್ ಠಕ್ಕರ್ ಮತ್ತು ದಿಯಾ ಚಿತಳೆ ಅವರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.