ADVERTISEMENT

ಮಂಪರು ಪರೀಕ್ಷೆಗೆ ನಾವೂ ಸಿದ್ಧ: ಬಜರಂಗ್

​ಪ್ರಜಾವಾಣಿ ವಾರ್ತೆ
Published 23 ಮೇ 2023, 0:03 IST
Last Updated 23 ಮೇ 2023, 0:03 IST
   

ನವದೆಹಲಿ: ಮಂಪರು ಪರೀಕ್ಷೆ ಒಳಗಾಗಲು ತಾವೂ ಸಿದ್ಧ ಎಂದು ಹೇಳುವ ಮೂಲಕ ಒಲಿಂಪಿಕ್‌ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಅವರು, ಭಾರತ ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಹಾಕಿರುವ ಸವಾಲನ್ನು ಸ್ವೀಕರಿಸಿದ್ದಾರೆ.

‘ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆಂಬ ಆರೋಪಕ್ಕೆ ಸಂಬಂಧಿಸಿದಂತೆ ನಾನು ಮಂಪರು ಪರೀಕ್ಷೆ, ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಾಫ್‌ ಟೆಸ್ಟ್‌) ಎದುರಿಸಲು ಸಿದ್ಧ. ಆದರೆ ವಿನೇಶಾ ಫೋಗಟ್‌ ಮತ್ತು ಬಜರಂಗ್ ಪೂನಿಯಾ ಅವರೂ ಪರೀಕ್ಷೆ ಎದುರಿಸಬೇಕು ಎಂಬುದು ನನ್ನ ಷರತ್ತು’ ಎಂದು ಬ್ರಿಜ್‌ಭೂಷಣ್ ಭಾನುವಾರ ಹಿಂದಿಯಲ್ಲಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದರು.

‘ನಾವೂ ಮಂಪರು ಪರೀಕ್ಷೆಗೆ ಸಿದ್ಧ. ಆದರೆ ಅವರು (ಬ್ರಿಜ್‌ ಭೂಷಣ್) ಈ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ರಾಷ್ಟ್ರೀಯ ವಾಹಿನಿಯ ನೇರಪ್ರಸಾರದಲ್ಲಿ ಎದುರಿಸಬೇಕು ಎಂಬುದು ನಮ್ಮ ಒತ್ತಾಯ’ ಎಂದು ಬಜರಂಗ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಏನು ಪ್ರಶ್ನೆ ಕೇಳಲಾಗುತ್ತದೆ ಎಂಬುದನ್ನು ನಾವು ನೋಡಬಯಸುತ್ತೇವೆ. ನಾನು ಮತ್ತು ವಿನೇಶಾ ಅವರೂ ಮಂಪರು ಪರೀಕ್ಷೆ ಎದುರಿಸಬೇಕೆಂದು ಅವರು ಕೇಳಿದ್ದಾರೆ. ನಾವಿಬ್ಬರೇ ಏಕೆ?, ಅವರ ವಿರುದ್ಧ ದೂರು ಸಲ್ಲಿಸಿದ ಎಲ್ಲ ಮಹಿಳಾ ಕುಸ್ತಿಪಟುಗಳೂ ಪರೀಕ್ಷೆಗೆ ಒಳಗಾಗಲಿ’ ಎಂದು ಜಂತರ್ ಮಂಥರ್‌ನ ಧರಣಿ ಸ್ಥಳದಿಂದ ಬಜರಂಗ್ ಹೇಳಿದ್ದಾರೆ. ಈ ವೇಳೆ ಅಂತರರಾಷ್ಟ್ರೀಯ ಪೈಲ್ವಾನರಾದ ಸಾಕ್ಷಿ ಮಲಿಕ್, ವಿನೇಶಾ ಫೋಗಟ್‌ ಇದ್ದರು.

‘ನಾವು ಯಾವ ರೀತಿಯ ಶೋಷಣೆ ಮತ್ತು ಅನ್ಯಾಯ ಎದುರಿಸಿದೆವು ಎಂದು ಇಡೀ ದೇಶಕ್ಕೆ ಗೊತ್ತಾಬೇಕು’ ಎಂದು ವಿನೇಶಾ ಹೇಳಿದರು.

‘ಕೆಲವು ಮಾಧ್ಯಮಗಳು ಬ್ರಿಜ್‌ಭೂಷಣ್ ಅವರ ಹೇಳಿಕೆ ವೈಭವೀಕರಿಸುತ್ತಿವೆ. ಅವರೇನೂ ಸ್ಟಾರ್‌ ಅಲ್ಲ. ಲೈಂಗಿಕ ಪೀಡನೆಯ ಆರೋಪಿ. ಆ ದೃಷ್ಟಿಯಿಂದ ಅವರನ್ನು ನೋಡಿ’ ಎಂದು ಬಜರಂಗ್ ಮತ್ತು ವಿನೇಶ ಮನವಿ ಮಾಡಿದರು.

ಪ್ರತಿಭಟನೆಗೆ ಒಂದು ತಿಂಗಳು ತುಂಬುತ್ತಿರುವ ಕಾರಣ ಧರಣಿನಿರತ ಕುಸ್ತಿಪಟುಗಳು ಮಂಗಳವಾರ (ಮೇ 23) ಜಂತರ್‌ಮಂತರ್‌ನಿಂದ ಇಂಡಿಯಾ ಗೇಟ್‌ವರೆಗೆ ಮೊಂಬತ್ತಿ ಹಿಡಿದು ಮೆರವಣಿಗೆ ನಡೆಲಿದ್ದಾರೆ ಎಂದು ಸಾಕ್ಷಿ ಮಲಿಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.