ADVERTISEMENT

ಕುಸ್ತಿಪಟುಗಳ ಹೋರಾಟ ಮೋದಿ, ಸ್ಮೃತಿ ವಿರುದ್ಧ ಅಲ್ಲ ಎಂದ ಬಬಿತಾ: ಹಲವರ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2023, 14:26 IST
Last Updated 20 ಜನವರಿ 2023, 14:26 IST
ಬಬಿತಾ ಪೋಗಟ್‌
ಬಬಿತಾ ಪೋಗಟ್‌    

ನವದೆಹಲಿ: ಮಹಿಳಾ ಕುಸ್ತಿಪಟುಗಳ ಹೋರಾಟ ಕೇವಲ ಭಾರತೀಯ ಕುಸ್ತಿ ಫೆಡರೇಷನ್‌ ಮತ್ತು ‘ಒಬ್ಬ ವ್ಯಕ್ತಿ’ ವಿರುದ್ಧ ಮಾತ್ರ ಎಂದು ಬಿಜೆಪಿ ನಾಯಕಿ, ಕುಸ್ತಿಪಟು ಬಬಿತಾ ಪೋಗಟ್‌ ಶುಕ್ರವಾರ ಹೇಳಿದ್ದಾರೆ.

ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್‌ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಫೆಡರೇಷನ್‌ನಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಖ್ಯಾತನಾಮ ಕುಸ್ತಿಪಟುಗಳು ಬುಧವಾರದಿಂದ ಧರಣಿ ಆರಂಭಿಸಿದ್ಧಾರೆ.

ಬಬಿತಾ ಪೋಗಟ್‌ ಟ್ವೀಟ್‌

ಈ ಹೋರಾಟದ ಕುರಿತು ಶುಕ್ರವಾ ಸ್ಪಷ್ಟನೆ ನೀಡಿರುವ ಬಬಿತಾ ಪೋಗಟ್‌, ನಮ್ಮ ಹೋರಾಟ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲ್ಲ, ದೀದಿ ಸ್ಮೃತಿ ಇರಾನಿ ವಿರುದ್ಧ ಅಲ್ಲ ಮತ್ತು ಬಿಜೆಪಿ ವಿರುದ್ಧವೂ ಅಲ್ಲ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಮುಂದುವರಿದು, ಕಾಂಗ್ರೆಸ್‌ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಲಾಭಕ್ಕಾಗಿ ಕ್ರೀಡಾಪಟುಗಳ ಆಂದೋಲನದ ವಿಚಾರವಾಗಿ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಎಂದು ನಾನು ಕಾಂಗ್ರೆಸ್ ಪಕ್ಷಕ್ಕೆ ಹೇಳಲು ಬಯಸುತ್ತೇನೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ.

ಬಬಿತಾ ಟ್ವೀಟ್‌ಗೆ ಟೀಕೆ

ಪೋಗಟ್‌ ಅವರ ಈ ಟ್ವೀಟ್‌ಗೆ ತಿರುಗೇಟು ನೀಡಿರುವ ಬಿಹಾರ ಮತ್ತು ರಾಜಸ್ಥಾನದ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಉಸ್ತುವಾರಿ ಮೊಹಮದ್‌ ವಾಸೀಮ್‌, ‘ಗುಲಾಮಗಿರಿ ಬಿಡಿ. ಬಿಜೆಪಿ ಸಂಸದನ ಚೇಷ್ಟೆಯಿಂದ ಇಡೀ ದೇಶದ ಮುಂದೆ ಕುಳಿತ ನಿಮ್ಮ ಸೋದರಿಯನ್ನು ಮೊದಲು ನೋಡಿ’ ಎಂದು ಸಲಹೆ ನೀಡಿದ್ದಾರೆ.

‘ಬಬಿತಾ ಅವರೇ, ಈ ಬೂಟಾಟಿಕೆ ಬಿಟ್ಟು ಆಟಗಾರರ ಪರವಾಗಿ ನೀವು ಯಾಕೆ ನಿಲ್ಲಬಾರದು. ಫೆಡರೇಷನ್‌ನ ಮುಖ್ಯಸ್ಥರನ್ನು ನೇಮಿಸಿದ್ದು ಇದೇ ಬಿಜೆಪಿ. ಅದೇ ಪಕ್ಷದಿಂದ ಅವರು ಸಂಸದ ಕೂಡ ಆಗಿದ್ದಾರೆ. ಈ ಹೋರಾಟಗಾರರಲ್ಲಿ ನಿಮಗೆ ಸಂಬಂಧಪಡದವರು ಇರದೇ ಹೋಗಿದ್ದರೆ ನೀವು ಅವರನ್ನೆಲ್ಲ ನಾಚಿಕೆಯಿಲ್ಲದೆ ‘ತುಕ್ಡೆ ತುಕ್ಡೆ ಗ್ಯಾಂಗ್’ ಅಥವಾ ’ದೇಶದ್ರೋಹಿಗಳು’ ಎಂದು ಕರೆಯುತ್ತಿದ್ದೀರಿ’ ಎಂದು ಸಾಮಾಜಿಕ ಕಾರ್ಯಕರ್ತ ಮಾಣಿಕ್ ಗೊಯೆಲ್‌ ಎಂಬುವವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.