ADVERTISEMENT

ಡಬ್ಲ್ಯುಎಫ್‌ಐ ನಿಯಮ: ತರಬೇತಿ ಶಿಬಿರದಲ್ಲಿ ಹಾಜರಿ ಕಡ್ಡಾಯ

ಕುಸ್ತಿಪಟುಗಳಿಗೆ ಬಿಗಿ ಪಟ್ಟು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 0:09 IST
Last Updated 19 ಡಿಸೆಂಬರ್ 2025, 0:09 IST
<div class="paragraphs"><p>ಕುಸ್ತಿ</p></div>

ಕುಸ್ತಿ

   

ಸಾಂದರ್ಭಿಕ ಚಿತ್ರ

ನವದೆಹಲಿ: ಕುಸ್ತಿಪಟುಗಳು ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲದಿದ್ದರೆ ರಾಷ್ಟ್ರೀಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನಿಯಮ ರೂಪಿಸಿದೆ. 

ADVERTISEMENT

ಈಚೆಗೆ ಅಹಮದಾಬಾದಿನಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ಸಂದರ್ಭದಲ್ಲಿ ಸರ್ವಸದಸ್ಯರ ಕೌನ್ಸಿಲ್ ಸಭೆ ನಡೆಯಿತು. ಅದರಲ್ಲಿ  ಹೊಸ ನಿಯಮದ ಕುರಿತು ಚರ್ಚಿಸಿ ನಿರ್ಣಯಿಸಲಾಯಿತು. 

ಕುಸ್ತಿಪಟುಗಳು ಪ್ರತ್ಯೇಕವಾಗಿ (ಸ್ವತಂತ್ರ ಕೋಚ್) ತರಬೇತಿ ಪಡೆಯುವಂತಿಲ್ಲ. ಒಲಿಂಪಿಕ್ ಗೇಮ್ಸ್ ಕೋಟಾ ಪಡೆದ ಸ್ಪರ್ಧಿಗಳು ಒನ್‌ ಬೌಟ್ ಫೈನಲ್ ಆಯ್ಕೆ ಪ್ರಕ್ರಿಎಯಯಲ್ಲಿ ಪಾಲ್ಗೊಳ್ಳಬೇಕು ಎಂದೂ ನಿಯಮದಲ್ಲಿ ಹೇಳಲಾಗಿದೆ.  ಈ ನಿಯಯಾವಳಿಯ ಪ್ರತಿಯನ್ನು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ಕ್ಕೆ ಸಲ್ಲಿಸಲಾಗಿದೆ. 

‘ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದು ಎಲ್ಲ ಹಂತದ ಕುಸ್ತಿಪಟುಗಳಿಗೂ ಕಡ್ಡಾಯ. ಈ ಶಿಬಿರದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲು ಆ ವರ್ಷದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿರಲೇಬೇಕು. ಆಯ್ಕೆಯಾದವರು ಅಧಿಕೃತ ಶಿಬಿರದಲ್ಲಿಯೇ ತರಬೇತಿ ಪಡೆಯಬೇಕು.  ಬೇರೆ ತಾಣಗಳಲ್ಲಿ ಅಥವಾ ಪ್ರತ್ಯೇಕವಾಗಿ ತರಬೇತಿ ಪಡೆಯುವಂತಿಲ್ಲ’ ಎಂದು ನಿಯಮದಲ್ಲಿ ವಿವರಿಸಲಾಗಿದೆ. 

ಇತ್ತೀಚೆಗೆ ತಮ್ಮ ನಿವೃತ್ತಿ ನಿರ್ಧಾರವನ್ನು ಮರಳಿ ಪಡೆದು ಕಣಕ್ಕೆ ಮರಳುತ್ತಿರುವ ಒಲಿಂಪಿಯನ್ ವಿನೇಶ್ ಫೋಗಟ್ ಅವರೂ ದೇಶಿ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ತೋರಬೇಕಾಗಬಹುದು. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಅರ್ಹತಾ ಪ್ರಕ್ರಿಯೆಗಳ ಮೂಲಕವೇ ಬರಬೇಕಿದೆ. 

‘ಆಯ್ಕೆ ಟ್ರಯಲ್ಸ್‌ನಿಂದ ಯಾರಿಗೂ ವಿನಾಯಿತಿ ಕೊಡುವುದಿಲ್ಲ. ಹಳೆಯ ಸಾಧನೆಗಳನ್ನು ಮಾನದಂಡವಾಗುವುದಿಲ್ಲ. ವರ್ಷಗಳ ಹಿಂದಿನ ಸಾಧನೆಗಳನ್ನು ಪರಿಗಣಿಸಿ ಟ್ರಯಲ್ಸ್ ವಿನಾಯಿತಿ ನೀಡಬೇಕು ಎಂದು ಬಹಳಷ್ಟು ಕುಸ್ತಿಪಟುಗಳು ಕೇಳಿಕೊಂಡಿದ್ದರು. ಆದರೆ ಆಯಾ ಸಾಲಿನಲ್ಲಿ ಹೊಸದಾಗಿ ಬರುವ ಕುಸ್ತಿಪಟುಗಳು ಮತ್ತು ಹಳಬರನ್ನು ಸಮನಾಗಿ ಕಾಣುವ ಉದ್ದೇಶ ನಮ್ಮದು. ಆದ್ದರಿಂದ ಇಬ್ಬರಿಗೂ ತಮ್ಮ ಸಾಮರ್ಥ್ಯ ತೋರುವ ಅವಕಾಶ ನೀಡಿ ಅರ್ಹರನ್ನು ಆಯ್ಕೆ ಮಾಡಲಾಗುವುದು’ ಎಂದು ಡಬ್ಲ್ಯುಎಫ್‌ಐ ಅಧಿಕಾರಿ ಹೇಳಿದ್ದಾರೆ. 

ನೂತನ ನಿಯಮದಡಿಯಲ್ಲಿ ತಂಡದಲ್ಲಿ ಮೀಸಲು ಕುಸ್ತಿಪಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಮುಖ್ಯ ಸ್ಪರ್ಧಾಳು ಗಾಯಗೊಂಡರೆ ಮೀಸಲು ಕುಸ್ತಿಪಟುವನ್ನು ಕಣಕ್ಕಿಳಿಸಬಹುದು. 

ಕುಸ್ತಿಪಟುವನ್ನು ಅಶಿಸ್ತು ಅಥವಾ ಗೈರುಹಾಜರಿಯ ಆಧಾರದಲ್ಲಿ ಅಮಾನತು ಮಾಡಲು ಮುಖ್ಯ ಕೋಚ್ ಶಿಫಾರಸು ಮಾಡಬಹುದು. ತಪ್ಪಿತಸ್ಥರ ವಿರುದ್ಧ ಡಬ್ಲ್ಯುಎಫ್‌ಐ ಶಿಸ್ತುಕ್ರಮ ಕೈಗೊಳ್ಳಬಹುದು.  ಅಂತರರಾಷ್ಟ್ರೀಯ ಸ್ಪರ್ಧೆಗಳ ಸಂದರ್ಭದಲ್ಲಿ ಕುಸ್ತಿಪಟುಗಳು ನಿಗದಿಗಿಂತ ಹೆಚ್ಚಿನ ದೇಹತೂಕ ಹೊಂದಿದ್ದರೆ ಡಬ್ಲ್ಯುಎಫ್‌ಐ ಕ್ರಮ ಕೈಗೊಳ್ಳಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.