ADVERTISEMENT

ಡಬ್ಲ್ಯುಟಿಟಿ ಸ್ಟಾರ್‌ ಕಂಟೆಂಡರ್‌ ಟೂರ್ನಿ: ಭಾರತದಿಂದ 33 ಮಂದಿ ಕಣಕ್ಕೆ

ಪಿಟಿಐ
Published 3 ಫೆಬ್ರುವರಿ 2026, 15:39 IST
Last Updated 3 ಫೆಬ್ರುವರಿ 2026, 15:39 IST
ಪ್ರಿಯಾನುಜ್ ಭಟ್ಟಾಚಾರ್ಯ –ಪ್ರಜಾವಾಣಿ ಸಂಗ್ರಹ ಚಿತ್ರ
ಪ್ರಿಯಾನುಜ್ ಭಟ್ಟಾಚಾರ್ಯ –ಪ್ರಜಾವಾಣಿ ಸಂಗ್ರಹ ಚಿತ್ರ   

ಚೆನ್ನೈ: ಇದೇ 10ರಿಂದ 15ರವರೆಗೆ ಇಲ್ಲಿ ನಡೆಯಲಿರುವ ವಿಶ್ವ ಟೇಬಲ್‌ ಟೆನಿಸ್‌ (ಡಬ್ಲ್ಯುಟಿಟಿ) ಸ್ಟಾರ್‌ ಕಂಟೆಂಡರ್‌ ಟೂರ್ನಿಯಲ್ಲಿ ಭಾರತದಿಂದ ದಾಖಲೆಯ 33 ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಪ್ರಿಯಾನುಜ್ ಭಟ್ಟಾಚಾರ್ಯ ಮತ್ತು ಅನುಷಾ ಕುಟುಂಬಲೆ ಅವರು ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಪ್ರಮುಖರು. ಆತಿಥೇಯ ದೇಶದ 23 ಮಂದಿ ಮುಖ್ಯಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ. 

23 ವರ್ಷದ ಅನುಷಾ ಅವರು ವಡೋದರಾದಲ್ಲಿ ನಡೆದ 2026ರ ಡಬ್ಲ್ಯುಟಿಟಿ ಫೀಡರ್ ಸರಣಿಯ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್‌ ತಲುಪಿದ್ದರು. 17 ವರ್ಷದ ಪ್ರಿಯಾನುಜ್‌ ಅವರು 2026ರ ಡಬ್ಲ್ಯುಟಿಟಿ ಯೂತ್ ಕಂಟೆಂಡರ್‌ನ 19 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಚಾಂಪಿಯನ್ ಆಗಿದ್ದರು.

ADVERTISEMENT

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವೈಲ್ಡ್ ಕಾರ್ಡ್‌ ಪಡೆದ ಇತರ ಆಟಗಾರ್ತಿಯರಲ್ಲಿ ಸಯಾಲಿ ವಾನಿ, ಕಾವ್ಯಾ ಭಟ್ ಮತ್ತು ತನೀಶಾ ಕೋಟೆಚಾ ಸೇರಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಿಯಾನುಜ್ ಅವರೊಂದಿಗೆ ಅನಿರ್ಬನ್ ಘೋಷ್, ದಿವ್ಯಾಂಶ್ ಶ್ರೀವಾಸ್ತವ ಮತ್ತು ಫ್ರೆಂಚ್‌ನ ರೆಮಿ ಬೆಟೆಲು ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

ಎರಡನೇ ಆವೃತ್ತಿಯ ಈ ಟೂರ್ನಿಯು ಸುಮಾರು ₹ 2.70 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ. ಕಳೆದ ಋತುವಿನಲ್ಲಿ ವೃತ್ತಿಪರ ಟೇಬಲ್ ಟೆನಿಸ್‌ನಿಂದ ನಿವೃತ್ತರಾದ ದಿಗ್ಗಜ ಆಟಗಾರ ಅಚಂತಾ ಶರತ್ ಕಮಲ್ ಟೂರ್ನಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲನ್ನು ಕಳೆದ ಆವೃತ್ತಿಯ ಸೆಮಿಫೈನಲಿಸ್ಟ್ ಮತ್ತು ವಿಶ್ವದ 33ನೇ ಕ್ರಮಾಂಕದ ‌ಮಾನವ್ ಠಕ್ಕರ್ ಮುನ್ನಡೆಸಲಿದ್ದಾರೆ. ಡಬ್ಲ್ಯುಟಿಟಿ ಫೀಡರ್ ಸರಣಿಯ ಚಾಂಪಿಯನ್‌ ಮಾನುಷ್ ಶಾ ಸೇರಿದಂತೆ ಅನುಭವಿ ಜಿ. ಸತ್ಯನ್ ಮತ್ತು ಹರ್ಮೀತ್ ದೇಸಾಯಿ ಕೂಡ ಮುಖ್ಯ ಸುತ್ತಿನಲ್ಲಿದ್ದಾರೆ.

ಡಬ್ಲ್ಯುಟಿಟಿ ಫೈನಲ್ಸ್ ಅರ್ಹತಾ ಸುತ್ತಿಗೆ ಟಿಕೆಟ್‌ ಪಡೆದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಾನುಷ್ ಶಾ ಮತ್ತು ರಾಷ್ಟ್ರೀಯ ಚಾಂಪಿಯನ್ ದಿಯಾ ಚಿತಳೆ ಅವರು ಕಳೆದ ವರ್ಷ ಸಿಂಗಲ್ಸ್ ವಿಭಾಗದಲ್ಲಿ ವೈಲ್ಡ್ ಕಾರ್ಡ್ ಪಡೆದಿದ್ದರು. ಈ ಬಾರಿ ಮುಖ್ಯ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ. 

ಅನುಷಾ ಕುಟುಂಬಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.