ತೈಪಿ: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಪಟುಗಳು, ತೈಪಿ ಓಪನ್ ಸೂಪರ್ 300 ಟೂರ್ನಿಯಲ್ಲಿ ಮಂಗಳವಾರ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದರು. ಈ ವಿಭಾಗದಿಂದ ಒಬ್ಬರೂ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯಲಾಗಲಿಲ್ಲ.
ಮನರಾಜ್ ಸಿಂಗ್, ರಘು ಮರಿಸ್ವಾಮಿ ಮತ್ತು ಮಾನಸಿ ಸಿಂಗ್ ಅವರು ಕ್ವಾಲಿಫೈರ್ಸ್‌ನ ಮೊದಲ ಸುತ್ತಿನಲ್ಲಿ ಗೆದ್ದು ಭರವಸೆ ಮೂಡಿಸಿದರೂ, ಎರಡನೇ ಸುತ್ತಿನಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಸೋಲನುಭವಿಸಿದರು.
ಮನರಾಜ್ 21–9, 19–21, 20–22ರಲ್ಲಿ ಮಲೇಷ್ಯಾದ ತಾನ್ ಜಿಯಾ ಜೀ ಅವರಿಗೆ ಮಣಿದರು. ರಘು ಅವರು 16–21, 17–21ರಲ್ಲಿ ನೇರ ಸೆಟ್‌ಗಳಿಂದ ಇಂಡೊನೇಷ್ಯಾದ ಮೊಹ್ ಝಾಕಿ ಉಬೇದುಲ್ಲಾ ಎದುರು ಸೋಲನುಭವಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಮಾನಸಿ ಅವರು ಥಾಯ್ಲೆಂಡ್‌ನ ಪಿಚಮೊನ್ ಒಪಟ್ನಿಪುತ್ ಅವರಿಗೆ ಸಾಟಿಯಾಗದೇ 17–21, 10–21ರಲ್ಲಿ ಸೋಲನುಭವಿಸಿದರು.
ಇದಕ್ಕೆ ಮೊದಲು ರಘು, ಮನ್‌ರಾಜ್ ಮತ್ತು ಮಾನಸಿಮೊದಲ ಪಂದ್ಯಗಳಲ್ಲಿ ಮೂರು ಗೇಮ್‌ಗಳ ಹೋರಾಟದಲ್ಲಿ ಜಯಗಳಿಸಿದ್ದರು.
ಪುರುಷರ ಸಿಂಗಲ್ಸ್‌ನ ಇತರ ಕ್ವಾಲಿಫೈರ್ ಪಂದ್ಯಗಳಲ್ಲಿ ಆರ್ಯಮನ್ ಟಂಡನ್ 27–25, 10–21, 8–21 ರಲ್ಲಿ ಮಲೇಷ್ಯಾದ ಕೊಕ್ ಜಿಂಗ್ ಹಾಂಗ್ ಅವರಿಗೆ ಮಣಿದರೆ, ಮಿಥುನ್ ಮಂಜುನಾಥ್ 21–17, 19–21, 9–21ರಲ್ಲಿ ತಾನ್ ಜಿಯಾ ಝೀ ಎದುರು ಸೋಲನುಭವಿಸಿದ್ದರು.
ಮಹಿಳಾ ಸಿಂಗಲ್ಸ್‌ನಲ್ಲಿ ಇಶಾರಾಣಿ ಬರೂವ, ಇರಾ ಶರ್ಮಾ ಮತ್ತು ಶ್ರೇಯಾ ಲೇಲೆ ಅವರೂ ಅರ್ಹತಾ ವಿಭಾಗದ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.