ADVERTISEMENT

ಥಾಪರ್ ವಿ.ವಿ.ಗೆ `ಭಾರತ'ದ ಹಂಬಲ

ಎಂ.ಸಿ.ಮಂಜುನಾಥ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ಪಂಜಾಬ್ ರಾಜ್ಯದ ಕೇಂದ್ರ ಭಾಗ ಪಟಿಯಾಲ. ಚಿಕ್ಕದಾದರೂ ಸುಂದರ ನಗರ ಎಂಬ ಖ್ಯಾತಿ ಈ ಪಟ್ಟಣಕ್ಕಿದೆ. ಅಂತೆಯೇ ಪಟಿಯಾಲದಲ್ಲಿರುವ ಥಾಪರ್ ವಿಶ್ವವಿದ್ಯಾಲಯ ಕೂಡ ಐದು ದಶಕಗಳಿಂದ ಶಿಕ್ಷಣದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.

ಉದ್ಯಮಿ ಕರಮ್‌ಚಂದ್ ಥಾಪರ್ 1956ರಲ್ಲಿ ಸ್ಥಾಪಿಸಿದ ಥಾಪರ್ ವಿಶ್ವವಿದ್ಯಾಲಯವನ್ನು ಆಗಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಉದ್ಘಾಟಿಸಿದ್ದರು. ಹಂತಹಂತವಾಗಿ ಬೆಳೆದು ಬಂದ ವಿ.ವಿ. ಇದೀಗ ದೇಶದ ಪ್ರಮುಖ 20 ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿದೆ. ಆದರೆ, ದಕ್ಷಿಣ ಭಾರತದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿಲ್ಲ ಎಂಬ ಕೊರಗು ಆಡಳಿತ ಮಂಡಳಿಯದ್ದು.

ಪ್ರಸ್ತುತ ಕರಮ್‌ಚಂದ್ ಥಾಪರ್ ಅವರ ಮೊಮ್ಮಗ ಗೌತಮ್ ಥಾಪರ್ ಈ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸದ್ಯ 6,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ಶೇ 90ರಷ್ಟು ಪಂಜಾಬ್ ಮೂಲದ ವಿದ್ಯಾರ್ಥಿಗಳೇ ಇದ್ದಾರೆ. ದಕ್ಷಿಣ ಭಾರತದ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

`ಪಟಿಯಾಲದಲ್ಲಿ ಭಾರತವನ್ನು ಕಾಣಬೇಕು' ಎಂಬ ಆಶಯ ಗೌತಮ್ ಅವರದ್ದು. ಈ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷದಿಂದ ಶೇ 50ರಷ್ಟು ಸೀಟುಗಳನ್ನು ಪಂಜಾಬ್ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದರೆ, ಉಳಿದ ಶೇ 50ರಷ್ಟು ಸೀಟುಗಳು ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಮೀಸಲು' ಎನ್ನುತ್ತಾರೆ ಥಾಪರ್ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಕುಲದೀಪ್ ಕುಮಾರ್ ರೈನಾ.

`250 ಎಕರೆ ಜಾಗದಲ್ಲಿ ನೆಲೆಯೂರಿರುವ ಥಾಪರ್ ವಿಶ್ವವಿದ್ಯಾಲಯದ ಆವರಣದಲ್ಲಿ ಒಟ್ಟು 9 ಹಾಸ್ಟೆಲ್‌ಗಳಿವೆ. ಈ ಪೈಕಿ 4 ಹಾಸ್ಟೆಲ್‌ಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗಿದೆ. ಪ್ರತಿ ಹಾಸ್ಟೆಲ್‌ನಲ್ಲೂ ಜಿಮ್ ಕೇಂದ್ರವಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ `ವಿದ್ಯಾರ್ಥಿ ಶಿಸ್ತು ಸಮಿತಿ'ಯನ್ನು ರಚಿಸಿ ಆ ಮೂಲಕ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನೂ ಜಾರಿಗೆ ತರಲಾಗಿದೆ' ಎಂದು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಸೀಮಾ ಭಾವ ಹೇಳುತ್ತಾರೆ.

ವಿ.ವಿ.ಯಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಆಚರಿಸುವ `ಅರಣ್ಯ' ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶೇಷ ಹಬ್ಬವಾಗಿದೆ. ಈ ಸಂಭ್ರಮಾಚರಣೆಗೆ ದೇಶದ ವಿವಿಧ ವಿ.ವಿ.ಗಳ ವಿದ್ಯಾರ್ಥಿಗಳು, ಕಲಾವಿದರು ಸಾಕ್ಷಿಯಾಗುತ್ತಾರೆ. ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ವಿನ್ಯಾಸ, ಆಧುನಿಕತೆ ಸೇರಿದಂತೆ ಹಲವು ವಿಷಯಗಳ ಕುರಿತಾದ ನಿಯತಕಾಲಿಕಗಳು ಪ್ರತಿ ವರ್ಷ ವಿದ್ಯಾರ್ಥಿಗಳ ಕೈಯಿಂದ ಮೂಡಿಬರುತ್ತಿವೆ. ಕಳೆದ ವರ್ಷದಿಂದ `ಹಸಿರು ರಕ್ಷಿಸಿ' ಎಂಬ ವಿನೂತನ ಯೋಜನೆಯನ್ನು ಆರಂಭಿಸಲಾಗಿದ್ದು, ಇದರ ಅನ್ವಯ ಕ್ಯಾಂಪಸ್‌ನಲ್ಲಿ ಬೈಕ್‌ಗಳು ಓಡಾಡುವಂತಿಲ್ಲ. ಹೀಗಾಗಿ ಸೈಕಲ್ ರಿಕ್ಷಾಗಳು ಆವರಣದಲ್ಲಿ ಕಾಣಸಿಗುತ್ತವೆ.

ರನ್ನಿಂಗ್ ಟ್ರ್ಯಾಕ್, ಈಜುಕೊಳ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳು ಅಂತರ ರಾಷ್ಟ್ರೀಯ ಮಟ್ಟದ ಮೈದಾನಗಳಂತೆ ಗೋಚರಿಸುತ್ತವೆ. ಜತೆಗೆ, ಧ್ಯಾನ-ವ್ಯಾಯಾಮ ಮಾಡುವವರಿಗಾಗಿಯೇ ಮೆಡಿಟೇಷನ್ ಪಾರ್ಕ್ ಇದೆ. ಹಾಸ್ಟೆಲ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆವರಣದಲ್ಲೇ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲಾಗಿದ್ದು, ಥಾಪರ್ ವಿಶ್ವವಿದ್ಯಾಲಯ ಇಡೀ ಪಟಿಯಾಲ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಿದೆ.

ಜೈವಿಕ ತಂತ್ರಜ್ಞಾನ ಮತ್ತು ಪರಿಸರ ವಿಜ್ಞಾನ, ಕೆಮಿಕಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಜೂನ್ ಮೊದಲ ವಾರದಿಂದ ಪ್ರವೇಶ ಆರಂಭವಾಗಲಿದ್ದು, ಆಸಕ್ತ ವಿದ್ಯಾರ್ಥಿಗಳು WWW.THAPAR.EDU  ವೆಬ್‌ಸೈಟ್‌ನಲ್ಲಿ ಅರ್ಜಿ ಪಡೆಯಬಹುದು.

ವಿದ್ಯಾರ್ಥಿಗಳು `ಥಾಪರ್ ವಿಶ್ವವಿದ್ಯಾನಿಲಯ, ಪಟಿಯಾಲ' ಎಂಬ ಹೆಸರಿನಲ್ಲಿ ಅರ್ಜಿಯಲ್ಲಿ ತಿಳಿಸಿರುವಷ್ಟು ಮೊತ್ತದ ಡಿ.ಡಿ. ತೆಗೆಯಬೇಕು. ಬಳಿಕ ಡಿ.ಡಿ. ಪ್ರತಿಯನ್ನು `ಆಡಳಿತ ವಿಭಾಗ, ಥಾಪರ್ ವಿಶ್ವವಿದ್ಯಾನಿಲಯ, ಪಟಿಯಾಲ - 147 004' ವಿಳಾಸಕ್ಕೆ ಕಳುಹಿಸಬೇಕು. ವಿ.ವಿ.ಯಲ್ಲೇ ಕೌನ್ಸೆಲಿಂಗ್ ನಡೆಯಲಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪಡೆದ ಅರ್ಜಿಯಲ್ಲಿ ಸೂಕ್ತ ವಿವರ ದಾಖಲಿಸಿಕೊಂಡು ಬರುವಂತೆ ಆಡಳಿತ ಮಂಡಳಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.