ಪ್ಯಾರಿಸ್: ಸ್ಪೇನ್‌ನ ಯುವ ಆಟಗಾರ ಕಾರ್ಲೋಸ್ ಅಲ್ಕಾರಾಸ್ ಮತ್ತು ಟುನೀಷಿಯಾದ ಆನ್ಸ್ ಜಬೆವುರ್ ಅವರು ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಪುರುಷರ ವಿಭಾಗದಲ್ಲಿ ಅಲ್ಕಾರಾಸ್ ಮೂರು ಸ್ಥಾನಗಳ ಏರಿಕೆಯೊಂದಿಗೆ ಆರನೇ ಸ್ಥಾನ ಗಳಿಸಿದ್ದು ಜಬೆವುರ್ ಏಳನೇ ಸ್ಥಾನಕ್ಕೇರಿದ್ದಾರೆ. ಇವರಿಬ್ಬರೂ ಭಾನುವಾರ ಮುಕ್ತಾಯಗೊಂಡ ಮ್ಯಾಡ್ರಿಡ್ ಓಪನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದರು.
ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ 19 ವರ್ಷದ ಅಲ್ಕಾರಾಸ್ 6-3, 6-1ರಲ್ಲಿ ಜರ್ಮನಿಯ ಅಲೆಕ್ಸಾಂಡ್ ಜ್ವೆರೆವ್ ವಿರುದ್ಧ ಜಯ ಗಳಿಸಿದ್ದರು. ಇದು ಈ ವರ್ಷ ಅವರು ಗೆದ್ದ ನಾಲ್ಕನೇ ಪ್ರಮುಖ ಪ್ರಶಸ್ತಿಯಾಗಿದ್ದು ಈ ಮೂಲಕ ಮುಂಬರುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಭರವಸೆ ಮೂಡಿಸಿದ್ದಾರೆ.
ಮ್ಯಾಡ್ರಿಡ್ ಓಪನ್‌ನಲ್ಲಿ ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಅಲ್ಕಾರಾಸ್ ಫೈನಲ್ ಪ್ರವೇಶಿಸಿದ್ದರು. ಕೋವಿಡ್ ಲಸಿಕೆ ವಿವಾದದಿಂದಾಗಿ ಕೆಲವು ಟೂರ್ನಿಗಳಲ್ಲಿ ಆಡದೇ ಇದ್ದು ಮ್ಯಾಡ್ರಿಡ್ ಓಪನ್‌ನಲ್ಲಿ ನೀರಸ ಪ್ರದರ್ಶನ ನೀಡಿದರೂ ನೊವಾಕ್ ಜೊಕೊವಿಚ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ರಫೆಲ್ ನಡಾಲ್ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಡ್ಯಾನಿಯಲ್ ಮೆಡ್ವೆಡೆವ್ ಹರ್ನಿಯಾದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ವಾರ ನಡೆಯಲಿರುವ ಜಿನೇವಾ ಓಪನ್ ಟೂರ್ನಿಯಲ್ಲಿ ಅವರು ಆಡಲಿದ್ದಾರೆ.
ನಾರ್ವೆಯ ಕಾಸ್ಪರ್ ರೂಡ್ ಮತ್ತು ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಇಟಲಿಯ ಮಟಿಯೊ ಬೆರೆಟಿನಿ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ. ಬೆರೆಟಿನಿ ಎರಡು ಸ್ಥಾನಗಳ ಕುಸಿತದೊಂದಿಗೆ ಎಂಟನೇ ಸ್ಥಾನದಲ್ಲಿದ್ದು ರೂಡ್ ಏಳನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಇಳಿದಿದ್ದಾರೆ.
ಜಬೆವುರ್ ಜೀವನಶ್ರೇಷ್ಠ ಸಾಧನೆ
27 ವರ್ಷದ ಒನ್ಸ್ ಜಬೆವುರ್ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ ಮ್ಯಾಡ್ರಿಡ್ ಓಪನ್ ಮಹಿಳಾ ವಿಭಾಗದ ಫೈನಲ್‌ನಲ್ಲಿ ಗೆದ್ದು ಪ್ರಮುಖ ಟೂರ್ನಿಯಲ್ಲಿ ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ರ‍್ಯಾಂಕಿಂಗ್‌ನ ಪುರುಷರ ಅಥವಾ ಮಹಿಳೆಯರ ವಿಭಾಗದಲ್ಲಿ ಅಗ್ರ 10ರ ಒಳಗೆ ಸ್ಥಾನ ಗಳಿಸಿದ ಅರಬ್ ಅಥವಾ ಆಫ್ರಿಕಾದ ಮೊದಲ ಟೆನಿಸ್ ಪಟು ಆಗಿದ್ದಾರೆ ಅವರು.
ಮ್ಯಾಡ್ರಿಡ್ ಓಪನ್ ಫೈನಲ್‌ನಲ್ಲಿ ಜಬೆವುರ್‌ಗೆ ಮಣಿದ ಅಮೆರಿಕದ ಜೆಸಿಕಾ ಪೆಗುಲಾ ಮೂರು ಸ್ಥಾನಗಳ ಏರಿಕೆಯೊಂದಿಗೆ ಜೀವನಶ್ರೇಷ್ಠ 11ನೇ ಸ್ಥಾನ ಗಳಿಸಿದ್ದಾರೆ. ಬೆಲಾರಸ್‌ನ ಅರಿನಾ ಸಬಲೆಂಕಾ ನಾಲ್ಕು ಸ್ಥಾನಗಳ ಕುಸಿತದೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.