ADVERTISEMENT

ಅಮೆರಿಕ ಓಪನ್‌ ಟೆನಿಸ್‌: ನಾಲ್ಕನೇ ಸುತ್ತಿಗೆ ಫೆಡರರ್‌, ಜೊಕೊವಿಚ್‌

ಸೆರೆನಾ ಮುನ್ನಡೆ

ಏಜೆನ್ಸೀಸ್
Published 31 ಆಗಸ್ಟ್ 2019, 20:00 IST
Last Updated 31 ಆಗಸ್ಟ್ 2019, 20:00 IST
ನೊವಾಕ್‌ ಜೊಕೊವಿಚ್‌ ಚೆಂಡು ಹಿಂದಿರುಗಿಸಿದ ಪರಿ–ಎಪಿ/ಪಿಟಿಐ ಚಿತ್ರ
ನೊವಾಕ್‌ ಜೊಕೊವಿಚ್‌ ಚೆಂಡು ಹಿಂದಿರುಗಿಸಿದ ಪರಿ–ಎಪಿ/ಪಿಟಿಐ ಚಿತ್ರ   

ನ್ಯೂಯಾರ್ಕ್‌: ಅಗ್ರಶ್ರೇಯಾಂಕದ ಆಟಗಾರ ಹಾಗೂ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಹಾಗೂ ರೋಜರ್‌ ಫೆಡರರ್‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ಮೂರನೇ ಸುತ್ತಿನ ಸಿಂಗಲ್ಸ್ ಪಂದ್ಯಗಳಲ್ಲಿ ಅವರು ಎದುರಾಳಿಗಳನ್ನು ಮಣಿಸಿದರು.

ಹೋದ ಐದು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ನಾಲ್ಕರಲ್ಲಿ ಚಾಂಪಿಯನ್‌ ಆಗಿರುವ ಜೊಕೊವಿಚ್‌ ಎರಡನೇ ಸುತ್ತಿನ ಪಂದ್ಯಗಳಲ್ಲಿ ಭುಜದ ನೋವಿನಿಂದ ಬಳಲಿದ್ದರು. ಆದರೆಅರ್ಥರ್‌ ಆ್ಯಷೆ ಅಂಗಣದಲ್ಲಿ ನಡೆದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಅಮೆರಿಕದ ಡೆನಿಸ್‌ ಕುಡ್ಲಾ ವಿರುದ್ಧ ಅವರು 6–3, 6–4, 6–2 ಸೆಟ್‌ಗಳಲ್ಲಿ ಪಾರಮ್ಯ ಮೆರೆದರು.

ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಅವರು ಬ್ರಿಟನ್‌ನ ಡ್ಯಾನ್‌ ಇವಾನ್ಸ್ ವಿರುದ್ಧ 6–2, 6–2, 6–1ರಿಂದ ಗೆದ್ದರು. 80 ನಿಮಿಷಗಳಲ್ಲಿ ಹಣಾಹಣಿ ಮುಗಿಯಿತು.

ADVERTISEMENT

ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಇತರ ಪಂದ್ಯಗಳಲ್ಲಿ ಸ್ಟ್ಯಾನಿಸ್ಲಾವ್‌ ವಾವ್ರಿಂಕಾ ಅವರು ಪಾಲೊ ಲೊರೆಂಜಿ ವಿರುದ್ಧ 6–4, 7–6, 7–6ರಿಂದ, ಡೇವಿಡ್‌ ಗಫಿನ್‌ ಅವರು ಪ್ಯಾಬ್ಲೊ ಕ್ಯಾರೆನೊ ಬಸ್ಟಾ ವಿರುದ್ಧ 7–6, 7–6, 7–5ರಿಂದ ಜಯ ಕಂಡರು.

ಏಳನೇ ಶ್ರೇಯಾಂಕದ ಜಪಾನ್‌ ಆಟಗಾರ ಕಿ ನಿಶಿಕೋರಿಗೆ ಆಘಾತ ಎದುರಾಯಿತು. ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನಾವರ್‌ ಎದುರು 2–6, 4–6, 6–2, 3–6ರಿಂದ ಮುಗ್ಗರಿಸಿದರು.

ಸೆರೆನಾಗೆ ಜಯ: 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಹುಡುಕಾಟದಲ್ಲಿರುವ ಅಮೆರಿಕಾದ ಸೆರೆನಾ ವಿಲಿಯಮ್ಸ್, ಮಹಿಳಾ ಸಿಂಗಲ್ಸ್ ನಾಲ್ಕನೇ ಸುತ್ತು ಪ್ರವೇಶಿಸಿದರು. ಜೆಕ್‌ ಆಟಗಾರ್ತಿ ಕರೋಲಿನಾ ಮುಚೊವಾ ವಿರುದ್ಧ 6–3, 6–2ರಿಂದ ಅವರು ಗೆದ್ದರು. ಶುಕ್ರವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಇತರ ಪಂದ್ಯಗಳಲ್ಲಿ ಎಲಿನಾ ಸ್ವಿಟೋಲಿನಾ ಅವರು ಡಯಾನಾ ಯೆಸ್ತರ್‌ಮಸ್ಕಾ ವಿರುದ್ಧ 6–2, 6–0ರಿಂದ,ಕರೋಲಿನಾ ಪ್ಲಿಸ್ಕೊವಾ ಅವರು ಒನ್ಸ್ ಜೆಬಿವುರ್‌ ಮೇಲೆ 6–1, 4–6, 6–4ರಿಂದ ಗೆದ್ದು ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟರು.

ಡಬಲ್ಸ್‌ನಲ್ಲಿ ಭಾರತಕ್ಕೆ ಮಿಶ್ರ ಫಲ
ಟೂರ್ನಿಯಲ್ಲಿ ಭಾರತಕ್ಕೆ ಶುಕ್ರವಾರ ಮಿಶ್ರಫಲ ಸಿಕ್ಕಿತು. ರೋಹನ್‌ ಬೋಪಣ್ಣ ಜೋಡಿ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಕಾಲಿಟ್ಟರು.

ಅನುಭವಿ ಆಟಗಾರ ಲಿಯಾಂಡರ್‌ ಜೋಡಿಯು ಮೊದಲ ಸುತ್ತಿನಲ್ಲೇ ನಿರ್ಗಮಿಸಿತು.

ಬೋಪಣ್ಣ ಹಾಗೂ ಶಪೊವಲೊವ್‌ ಅವರು ಫ್ರೆಂಚ್‌ನ ಪಿಯರ್‌ ಹ್ಯುಗ್ಸ್ ಹರ್ಬರ್ಟ್‌– ನಿಕೋಲಸ್‌ ಮಹುಟ್‌ ವಿರುದ್ಧ 6–3, 6–1 ಸೆಟ್‌ಗಳಿಂದ ಜಯಿಸಿದರು.

ಪೇಸ್‌ ಹಾಗೂ ಗಿಲೆರ್ಮೊ ಅವರು ಸರ್ಬಿಯಾದ ಮಿಯೊಮಿರ್‌ ಕೆಸ್ಮನೊವಿಕ್‌ ಹಾಗೂ ನಾರ್ವೆಯ ಕ್ಯಾಸ್ಪರ್‌ ರೂಡ್‌ ವಿರುದ್ಧ 5–7, 2–6ರಿಂದ ಮುಗ್ಗರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.