ADVERTISEMENT

ಟೆನಿಸ್‌: ಆಮೋದಿನಿ, ಅದಿತ್‌ಗೆ ಪ್ರಶಸ್ತಿ

14 ವರ್ಷದೊಳಗಿನವರ ಪಂದ್ಯಗಳಲ್ಲಿ ವೆಂಕಟೇಶ್‌, ಮೇಘನಾಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 14:28 IST
Last Updated 24 ಫೆಬ್ರುವರಿ 2021, 14:28 IST
ಪ್ರಶಸ್ತಿಯೊಂದಿಗೆ ಆಮೋದಿನಿ ಮತ್ತು ಅದಿತ್‌
ಪ್ರಶಸ್ತಿಯೊಂದಿಗೆ ಆಮೋದಿನಿ ಮತ್ತು ಅದಿತ್‌   

ಬೆಂಗಳೂರು: ಆರಂಭದಿಂದಲೇ ಅಮೋಘ ಆಟವಾಡಿದ ಆಮೋದಿನಿ ವಿಜಯ ನಾಯಕ್ ಇಲ್ಲಿನ ಫಾರ್ಚೂನ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಎಐಟಿಎ ಚಾಂಪಿಯನ್ಸ್ ಸೀರಿಸ್‌ನ 18 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಬಾಲಕರ ವಿಭಾಗದಲ್ಲಿ ಅದಿತ್ ಅಮರ್‌ನಾಥ್ ಚಾಂಪಿಯನ್‌ ಆದರು.

ನಗರದ ನ್ಯೂ ಹೊರೈಜನ್ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆಮೋದಿನಿ ಏಕಪಕ್ಷೀಯ ಹೋರಾಟದಲ್ಲಿ ಸಿರಿ ಪಾಟೀಲ್ ಅವರನ್ನು6-0, 6-2ರಲ್ಲಿ ಮಣಿಸಿದರು. ಕಳೆದ ವಾರ ಅವರು 16 ವರ್ಷದೊಳಗಿನವರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಬಾಲಕರ ವಿಭಾಗದಲ್ಲಿ ಐದನೇ ಶ್ರೇಯಾಂಕದ ಅದಿತ್ ಅಮರ್‌ನಾಥ್ ಮಂಗಳವಾರ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ರವಿ ನಿನಾದ್ ಎದುರು ಜಯ ಗಳಿಸಿದ್ದರು. ಫೈನಲ್‌ನಲ್ಲಿ ಮನದೀಪ್ ರೆಡ್ಡಿ ಸ್ವಲ್ಪ ಪ್ರತಿರೋಧ ಒಡ್ಡಿದರೂ ಕೊನೆಯಲ್ಲಿ ಅದಿತ್‌ 6-3, 6-1ರಲ್ಲಿ ಗೆಲುವು ಸಾಧಿಸಿದರು.

ADVERTISEMENT

ವೆಂಕಟೇಶ್‌, ಮೇಘನಾ ಸೆಮಿಫೈನಲ್‌ಗೆ

ರಾಜ್ಯ ಟೆನಿಸ್ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಇದೇ ಸರಣಿಯ 14 ವರ್ಷದೊಳಗಿನವರ ಟೂರ್ನಿಯಲ್ಲಿ ಬುಧವಾರ ವೆಂಕಟೇಶ್ ಸುಬ್ರಹ್ಮಣ್ಯ ಮತ್ತು ಮೇಘನಾಜಿ.ಡಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಶೌರ್ಯ ಭಟ್ಟಾಚಾರ್ಯ ವಿರುದ್ಧ ವೆಂಕಟೇಶ್ 6-3, 6-3ರಲ್ಲಿ ಜಯ ಗಳಿಸಿದರೆ ಮೇಘನಾ 7-5, 6-1ರಲ್ಲಿ ಜೈನಾ ಅಂಬೆರ್ ಸಲಾರ್‌ ವಿರುದ್ಧ ಗೆದ್ದರು.

ಬಾಲಕರ ವಿಭಾಗದ ಉಳಿದ ಪಂದ್ಯಗಳಲ್ಲಿ ಗಂಧರ್ವ ಕೊತ್ತಪಲ್ಲಿ 6-4, 6-0ಯಿಂದ ಶ್ರೀಕರ್ ದೋನಿ ವಿರುದ್ಧ, ಕ್ಷಿತಿಜ್ ಆರಾಧ್ಯ 7-6 (2), 6-2ರಲ್ಲಿ ರಾಜೇಶ್ ಕೌಶಿಕ್ ವಿರುದ್ಧ, ಶಿವ ಪ್ರಶಾಂತ್‌ 6-4, 6-4ರಲ್ಲಿ ವಿಷ್ಣು ಮೋಹನ್ ವಿರುದ್ಧ ಗೆದ್ದರು. ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ದಿಶಾ ಖಂಡೋಜಿ 6-1, 6-1ರಲ್ಲಿ ಶ್ರೀನಿಧಿ ಚೌಧರಿ ವಿರುದ್ಧ, ಸುಶ್ಮಿತಾ ರವಿ 6-3, 3-0ರಲ್ಲಿ ಆನ್ವಿ ಪುನಂಗಟಿ (ನಿವೃತ್ತಿ) ವಿರುದ್ಧ, ಸ್ನಿಗ್ಧ ಕಾಂತ6-2, 6-0ರಲ್ಲಿ ಸಂಸ್ಕೃತಿ ಸಂತೋಷ್ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.