ADVERTISEMENT

ಎಟಿಪಿ ರ‍್ಯಾಂಕಿಂಗ್‌: ಅಗ್ರ 10ರಲ್ಲಿ ಬೆರೆಟ್ಟಿನಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 19:18 IST
Last Updated 28 ಅಕ್ಟೋಬರ್ 2019, 19:18 IST
ಮ್ಯಾಟ್ಟೆಯೊ ಬೆರೆಟ್ಟಿನಿ–ರಾಯಿಟರ್ಸ್ ಚಿತ್ರ
ಮ್ಯಾಟ್ಟೆಯೊ ಬೆರೆಟ್ಟಿನಿ–ರಾಯಿಟರ್ಸ್ ಚಿತ್ರ   

ಪ್ಯಾರಿಸ್‌ (ಎಎಫ್‌ಪಿ): ಇಟಲಿಯ ಮ್ಯಾಟ್ಟೆಯೊ ಬೆರೆಟ್ಟಿನಿ ಅವರು ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಅಗ್ರ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಪ್ರಕಟವಾದ ವಿಶ್ವ ಕ್ರಮಾಂಕದಲ್ಲಿ ಅವರಿಗೆ ಒಂಬತ್ತನೇ ಸ್ಥಾನ ಲಭಿಸಿದೆ.

ಹೋದ ವಾರ ವಿಯೆನ್ನಾ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದ 23 ವರ್ಷದ ಬೆರೆಟ್ಟಿನಿ, ಡೊಮಿನಿಕ್‌ ಥೀಮ್‌ ಎದುರು ಮುಗ್ಗರಿಸಿದ್ದರು. ಕಳೆದ ವರ್ಷ 53ನೇ ರ‍್ಯಾಂಕಿಂಗ್‌ನಲ್ಲಿದ್ದ ಅವರು ಈಗ ಗಮನಾರ್ಹ ಏರಿಕೆ ಕಂಡಿದ್ದಾರೆ. ಬುಡಾಪೆಸ್ಟ್‌ ಹಾಗೂ ಸ್ಟುಟ್‌ಗಾರ್ಟ್‌ ಓಪನ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಪಟ್ಟ ಧರಿಸಿದ್ದ ಇಟಲಿಯ ಆಟಗಾರ ಅಮೆರಿಕ ಓಪನ್‌ನಲ್ಲಿ ಸೆಮಿಫೈನಲ್‌ವರೆಗೂ ಕಾಲಿಟ್ಟಿದ್ದರು. ಆದರೆ ರಫೆಲ್‌ ನಡಾಲ್‌ ಎದುರು ನಿರಾಸೆ ಕಂಡಿದ್ದರು.

ಈ ವಾರ ನಡೆಯುವ ಆರಂಭವಾಗುವ ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಬೆರೆಟ್ಟಿನಿ ಫೈನಲ್‌ ತಲುಪಿದರೆ, ವರ್ಷಾಂತ್ಯದಲ್ಲಿ ನಡೆಯುವ ಎಟಿಪಿ ಫೈನಲ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ.

ADVERTISEMENT

ರಷ್ಯಾದ ಕರೆನ್‌ ಕಚನೊವ್‌ ಅವರು ಒಂದು ಸ್ಥಾನ ಜಿಗಿತ ಕಂಡು ಎಂಟನೇ ಸ್ಥಾನದಲ್ಲಿದ್ದಾರೆ. ಜಪಾನ್‌ನ ಕಿ ನಿಶಿಕೋರಿ ಅಗ್ರ 10ರ ಪಟ್ಟಿಯಿಂದ ಹೊರಬಿದ್ದಿದ್ದು, ಸದ್ಯ 11ನೇ ಸ್ಥಾನದಲ್ಲಿದ್ದಾರೆ. ಸರ್ಬಿಯದ ನೊವಾಕ್‌ ಜೊಕೊವಿಚ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.