ADVERTISEMENT

‘ಪವಾಡ’ ಮಾಡಿದ ಫೆಡರರ್

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: 15ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸ್ವಿಟ್ಜರ್ಲೆಂಡ್‌ನ ಆಟಗಾರ

ಏಜೆನ್ಸೀಸ್
Published 28 ಜನವರಿ 2020, 19:30 IST
Last Updated 28 ಜನವರಿ 2020, 19:30 IST
ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ
ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ   

ಮೆಲ್ಬರ್ನ್‌ : ನಾಲ್ಕು ಮಕ್ಕಳ ತಂದೆ ರೋಜರ್ ಫೆಡರರ್‌, ಮೆಲ್ಬರ್ನ್‌ ಪಾರ್ಕ್‌ನಲ್ಲಿ ಮಂಗಳವಾರ ‘ಪವಾಡ’ ಮಾಡಿದರು.

ಹಲವು ನಾಟಕೀಯ ತಿರುವುಗಳೊಂದಿಗೆ ಸಾಗಿದ ಕ್ವಾರ್ಟರ್‌ ಫೈನಲ್‌ನಲ್ಲಿ ಏಳು ‘ಮ್ಯಾಚ್‌ ಪಾಯಿಂಟ್ಸ್‌’ ಉಳಿಸಿಕೊಂಡ 38 ವರ್ಷ ವಯಸ್ಸಿನ ಆಟಗಾರ, ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಟೂರ್ನಿಯಲ್ಲಿ 43 ವರ್ಷಗಳ ನಂತರ ನಾಲ್ಕರ ಘಟ್ಟ ಪ್ರವೇಶಿಸಿದ ಅತೀ ಹಿರಿಯ ಆಟಗಾರ ಎಂಬ ಹಿರಿಮೆಗೂ ಭಾಜನರಾದರು.

3 ಗಂಟೆ 31 ನಿಮಿಷ ನಡೆದ ಪೈಪೋಟಿಯಲ್ಲಿ 6–3, 2–6, 2–6, 7–6, 6–3ರಲ್ಲಿ ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗ್ರೆನ್‌ ಅವರನ್ನು ಮಣಿಸಿದ ಫೆಡರರ್‌, ರಾಡ್‌ ಲೇವರ್‌ ಅರೇನಾದಲ್ಲಿ ಕಿಕ್ಕಿರಿದು ಸೇರಿದ್ದ ಟೆನಿಸ್‌ ಪ್ರಿಯರನ್ನು, ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.

ADVERTISEMENT

ಎರಡು ದಶಕಗಳಿಂದ ಆಸ್ಟ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳುತ್ತಿರುವ ಫೆಡರರ್‌, ರ‍್ಯಾಂಕಿಂಗ್‌ನಲ್ಲಿ 100ಕ್ಕಿಂತ ಕೆಳಗಿನ ಸ್ಥಾನ ಹೊಂದಿರುವ ಆಟಗಾರರ ವಿರುದ್ಧ ಒಮ್ಮೆಯೂ ಸೋತಿಲ್ಲ. ಅವರ ಈ ದಾಖಲೆ, ಮಂಗಳವಾರ ಪತನವಾಗುವ ಆತಂಕ ಎದುರಾಗಿತ್ತು.

ಗ್ರ್ಯಾನ್‌ಸ್ಲಾಮ್‌ನಲ್ಲಿ 20 ಪ್ರಶಸ್ತಿಗಳನ್ನು ಜಯಿಸಿದ ದಾಖಲೆ ಹೊಂದಿರುವ ಫೆಡರರ್‌, ಸ್ಯಾಂಡ್‌ಗ್ರೆನ್‌ ಎದುರಿನ ಹಣಾಹಣಿಯ ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದರು. ಎರಡನೇ ಸೆಟ್‌ನ ಆರಂಭದಲ್ಲೇ ಎದುರಾಳಿಯ ಸರ್ವ್‌ ಮುರಿದ 28 ವರ್ಷ ವಯಸ್ಸಿನ ಸ್ಯಾಂಡ್‌ಗ್ರೆನ್‌ 2–0 ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದ ಫೆಡರರ್, ಸೆಟ್‌ ಕೈಚೆಲ್ಲಿದರು.

ಮೂರನೇ ಸೆಟ್‌ನ ಮೊದಲ ಗೇಮ್‌ನಲ್ಲೇ ಸ್ವಿಟ್ಜರ್ಲೆಂಡ್‌ನ ಆಟಗಾರ ಸರ್ವ್‌ ಕಳೆದುಕೊಂಡಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೌನ ಮನೆಮಾಡಿತು. ನಂತರದ ಮೂರು ಗೇಮ್‌ಗಳಲ್ಲೂ ಪ್ರಾಬಲ್ಯ ಮೆರೆದ ಸ್ಯಾಂಡ್‌ಗ್ರೆನ್‌ ಮುನ್ನಡೆ ಹೆಚ್ಚಿಸಿಕೊಂಡರು. ‘ಶಾಂತ ಮೂರ್ತಿ’ ಎಂದೇ ಖ್ಯಾತರಾಗಿರುವ ಫೆಡರರ್‌, ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡರು. ಹತಾಶೆಯಿಂದ ರೆಫರಿ ಜೊತೆ ವಾಗ್ವಾದಕ್ಕೂ ಇಳಿದರು. ಬಳಿಕ ‘ತೊಡೆ ಸಂಧು’ ನೋವಿನ ನೆಪ ಹೇಳಿ ‘ಮೆಡಿಕಲ್‌ ಟೈಮ್‌ ಔಟ್‌’ ತೆಗೆದುಕೊಂಡರು.

ಒಂಬತ್ತು ನಿಮಿಷಗಳ ಬಳಿಕ ಅಂಗಳಕ್ಕೆ ಮರಳಿದ ಅವರು 15 ಬಾರಿ ಸ್ವಯಂಕೃತ ತಪ್ಪುಗಳನ್ನು ಮಾಡಿ ಸೆಟ್‌ ಸೋತರು.

2–1 ಮುನ್ನಡೆಯೊಂದಿಗೆ ನಾಲ್ಕನೇ ಸೆಟ್‌ನಲ್ಲಿ ಕಣಕ್ಕಿಳಿದಿದ್ದ ಸ್ಯಾಂಡ್‌ಗ್ರೆನ್‌, ಅಮೋಘ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅಮೆರಿಕದ ಆಟಗಾರ 5–4ರಿಂದ ಮುಂದಿದ್ದರಿಂದ ಫೆಡರರ್‌ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಈ ವೇಳೆ ಸ್ವಿಟ್ಜರ್ಲೆಂಡ್‌ನ ಆಟಗಾರ ‘ಮೂರು ಮ್ಯಾಚ್‌’ ಪಾಯಿಂಟ್ಸ್‌ ಉಳಿಸಿಕೊಂಡರು.

‘ಟೈ ಬ್ರೇಕರ್‌’ನಲ್ಲೂ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ಉಭಯ ಆಟಗಾರರು ಅಂಗಳ ಬದಲಿಸುವಾಗ ಹಿಂದಿನಿಂದ ಓಡಿಬಂದ ‘ಬಾಲ್‌ ಕಿಡ್‌’ ಸ್ಯಾಂಡ್‌ಗ್ರೆನ್‌ ಅವರ ಕಾಲಿಗೆ ಡಿಕ್ಕಿ ಹೊಡೆದಳು. ಇದರಿಂದ ಅಮೆರಿಕದ ಆಟಗಾರ ಗಾಯಗೊಂಡಂತೆ ಕಂಡರು. ಕ್ಷಣ ಕ್ಷಣಕ್ಕೂ ರೋಚಕತೆ ಕಾಯ್ದುಕೊಂಡು ಸಾಗಿದ ‘ಟೈ ಬ್ರೇಕರ್‌’ನಲ್ಲಿ ಫೆಡರರ್‌ 4–8ರಿಂದ ಹಿಂದಿದ್ದರು. ಈ ಹಂತದಲ್ಲಿ ನಾಲ್ಕು ‘ಮ್ಯಾಚ್‌ ಪಾಯಿಂಟ್ಸ್‌’ ಉಳಿಸಿಕೊಂಡ ಅವರು ‘ಪವಾಡ ಸದೃಶ’ ರೀತಿಯಲ್ಲಿ ಸೆಟ್‌ ಗೆದ್ದರು. ಐದನೇ ಸೆಟ್‌ನಲ್ಲೂ ಅಮೋಘ ಆಟ ಆಡಿ, 100ನೇ ಶ್ರೇಯಾಂಕದ ಆಟಗಾರ ಸ್ಯಾಂಡ್‌ಗ್ರೆನ್‌ ಸವಾಲು ಮೀರಿದರು.

ಸೆಮಿಫೈನಲ್‌ನಲ್ಲಿ ಫೆಡರರ್‌ ಮತ್ತು ನೊವಾಕ್‌ ಜೊಕೊವಿಚ್‌ ಮುಖಾಮುಖಿಯಾಗಲಿದ್ದಾರೆ.

ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಸರ್ಬಿಯಾದ ಜೊಕೊವಿಚ್‌ 6–4, 6–3, 7–6ರಲ್ಲಿ ಕೆನಡಾದ ಮಿಲೊಸ್‌ ರಾನಿಕ್‌ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.