ಮೆಲ್ಬೋರ್ನ್:ಈ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್ ಟೂರ್ನಮೆಂಟ್ ಆಸ್ಟ್ರೇಲಿಯನ್ ಓಪನ್ ಸಲುವಾಗಿ ಆಟಗಾರರು, ಕೋಚ್‌ಗಳನ್ನು ಲಾಸ್ ಏಂಜಲೀಸ್ಮತ್ತು ಅಬುಧಾಬಿಯಿಂದ ಮೆಲ್ಬೋರ್ನ್‌ಗೆ ಕರೆದೊಯ್ದ ಎರಡು ವಿಮಾನಗಳಲ್ಲಿದ್ದ ಮೂವರಿಗೆ ಕೋವಿಡ್–19 ದೃಢಪಟ್ಟಿದೆ. ಹೀಗಾಗಿ 47 ಆಟಗಾರರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಫೆಬ್ರುವರಿ 8ರಿಂದ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆರಂಭವಾಗಿರುವ ಟೂರ್ನಿಗೆ 1200 ಆಟಗಾರರು, ತರಬೇತುದಾರರು ಹಾಗೂ ಸಿಬ್ಬಂದಿಯನ್ನು ಕರೆತರುವ ಸಲುವಾಗಿ 15 ಚಾರ್ಟರ್ ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಲಾಸ್ ಏಂಜಲೀಸ್‌ನಿಂದ ಬಂದ ವಿಮಾನದ ಒಬ್ಬ ಸಿಬ್ಬಂದಿ ಹಾಗೂ ಟೂರ್ನಮೆಂಟ್‌ಗಾಗಿ ಕೆಲಸ ಮಾಡುತ್ತಿರುವ ಒಬ್ಬರಿಗೆ ಸೋಂಕು ತಗುಲಿದೆ, ಹೀಗಾಗಿ ಈ ವಿಮಾನದಲ್ಲಿ ಪ್ರಯಾಣಿಸಿದ 24 ಆಟಗಾರರು ಮೆಲ್ಬೋರ್ನ್‌ನಲ್ಲಿ ಉಳಿದುಕೊಂಡಿರುವ ಹೋಟೆಲ್‌ಗಳಲ್ಲೇ ಪ್ರತ್ಯೇಕವಾಸಕ್ಕೆ ಒಳಪಡಲಿದ್ದಾರೆ.ಅಬುಧಾಬಿಯಿಂದ ಬಂದ ಇನ್ನೊಂದು ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಅದರಲ್ಲಿದ್ದ 23 ಆಟಗಾರರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಪ್ರತ್ಯೇಕವಾಸದಲ್ಲಿರುವ ಆಟಗಾರರು ವೈದ್ಯಾಧಿಕಾರಿಗಳಿಂದ ಅನುಮತಿ ಸಿಗದೆ 14 ದಿನಗಳವರೆಗೆ ಹೋಟೆಲ್‌ನಿಂದ ಹೊರಗೆ ಬರುವಂತಿಲ್ಲ. ಉಳಿದ ಆಟಗಾರರಿಗೆ 14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆಯಾದರೂ, ಕಠಿಣ ಷರತ್ತುಗಳ ಅಡಿಯಲ್ಲಿ ಮತ್ತು ಪ್ರತಿದಿನ 5 ಗಂಟೆ ಮೇಲ್ವಿಚಾರಣೆಯೊಂದಿಗೆ ತರಬೇತಿ ಪಡೆಯಲು ಅನುಮತಿಸಲಾಗಿದೆ.
‘ವಿಮಾನ ಸಿಬ್ಬಂದಿ ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸಲಿರುವ ಆಟಗಾರನಲ್ಲದ ವ್ಯಕ್ತಿಯೊಬ್ಬರಿಗೆ ಕೋವಿಡ್–19 ದೃಢಪಟ್ಟಿದ್ದು, ಹೀಗಾಗಿಅವರನ್ನು ವೈದ್ಯಕೀಯ ಹೋಟೆಲ್‌ಗೆ ದಾಖಲಿಸಲಾಗಿದೆ. ಆ ವಿಮಾನದಲ್ಲಿದ್ದ ಉಳಿದ 66 ಪ್ರಯಾಣಿಕರೂ ಸೋಂಕಿತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆಂದು ನಿರ್ಧರಿಸಲಾಗಿದೆ. ಯಾವುದೇ ಆಟಗಾರರು, ಸಹಾಯಕ ಸಿಬ್ಬಂದಿ ಕ್ವಾರಂಟೈನ್ ನಿಯಮ ಮೀರಿ ತರಬೇತಿಗೆ ಹಾಜರಾಗುವಂತಿಲ್ಲ. ಉಳಿದ ವಿಮಾನ ಸಿಬ್ಬಂದಿಗೆ ನೆಗೆಟಿವ್ ವರದಿ ಬಂದಿದ್ದು, ತಮ್ಮ ವಿಶ್ರಾಂತಿ ಸ್ಥಳಗಳಿಗೆ ತೆರಳಲು ಅನುಮತಿಸಲಾಗಿದೆ’ ಎಂದು ವಿಕ್ಟೋರಿಯಾ ರಾಜ್ಯದ ಆರೋಗ್ಯ ಇಲಾಖೆ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.