ADVERTISEMENT

Australian Open 2023: ಬೋಪಣ್ಣ-ಸಾನಿಯಾ ಜೋಡಿ ರನ್ನರ್-ಅಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2023, 11:50 IST
Last Updated 27 ಜನವರಿ 2023, 11:50 IST
ಸಾನಿಯಾ ಮಿರ್ಜಾ - ರೋಹನ್ ಬೋಪಣ್ಣ
ಸಾನಿಯಾ ಮಿರ್ಜಾ - ರೋಹನ್ ಬೋಪಣ್ಣ   

ಮೆಲ್ಬರ್ನ್‌: ಭಾರತದ ಅನುಭವಿ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಪಯಣ ರನ್ನರ್ಸ್‌ಅಪ್ ಸ್ಥಾನದೊಂದಿಗೆ ಕೊನೆಗೊಂಡಿದೆ. ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಗೆಳೆಯ ರೋಹನ್ ಬೋಪಣ್ಣ ಅವರೊಂದಿಗೆ ಕಣಕ್ಕಿಳಿದಿದ್ದ ಅವರು ಪ್ರಶಸ್ತಿ ಸುತ್ತಿನಲ್ಲಿ ಎಡವಿದರು.

ರಾಡ್‌ ಲೇವರ್ ಅರೆನಾದಲ್ಲಿ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಸಾನಿಯಾ–ಬೋಪಣ್ಣ 6-7(2) 2-6ರಿಂದ ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಮತ್ತು ರಫೆಲ್‌ ಮಟವೊಸ್‌ ವಿರುದ್ಧ ಸೋಲನುಭವಿಸಿದರು.

ಇಲ್ಲಿ ಶ್ರೇಯಾಂಕರಹಿತರಾಗಿದ್ದ ಭಾರತದ ಜೋಡಿ ಹೋರಾಟ ತೋರಿದರೂ ಗೆಲುವು ಒಲಿಸಿಕೊಳ್ಳಲಾಗಲಿಲ್ಲ.

ADVERTISEMENT

‘ಇಲ್ಲಿ ನಾನು ಅತ್ತರೆ ಅದು ಆನಂದಬಾಷ್ಪ ಮಾತ್ರ. ನಾನು ಇನ್ನಷ್ಟು ಟೂರ್ನಿಗಳಲ್ಲಿ ಆಡುತ್ತೇನೆ. ಆದರೆ ನನ್ನ ವೃತ್ತಿಪರ ಪಯಣ ಆರಂಭವಾಗಿದ್ದು ಮೆಲ್ಬರ್ನ್‌ನಲ್ಲಿ‘ ಎಂದು ಭಾವುಕರಾಗಿದ್ದ ಸಾನಿಯಾ ಕಣ್ಣೀರು ತಡೆಹಿಡಿಯುವ ಪ್ರಯತ್ನ ಮಾಡಿದರು.

‘ಮಿಶ್ರ ಡಬಲ್ಸ್ ಮಾದರಿಯಲ್ಲಿ ರೋಹನ್ ನನ್ನ ಮೊದಲ ಜೊತೆಗಾರ. ಆಗ ನನಗೆ ಕೇವಲ 14 ವರ್ಷ. ಆ ವೇಳೆ ನಾವು ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆದ್ದಿದ್ದೆವು. ಆತ ನನಗೆ ಅತ್ಯುತ್ತಮ ಗೆಳೆಯ. ವೃತ್ತಿಜೀವನ ಕೊನೆಗೊಳ್ಳುವ ಈ ಸಂದರ್ಭದಲ್ಲಿ ಶ್ರೇಷ್ಠ ಜೊತೆಗಾರರಲ್ಲಿ ಒಬ್ಬ‘ ಎಂದು ಸಾನಿಯಾ ನುಡಿದರು.

36 ವರ್ಷದ ಸಾನಿಯಾ ಅವರು ಮಿಶ್ರ ಡಬಲ್ಸ್‌ನಲ್ಲಿ ಮೂರು ಸೇರಿದಂತೆ ಆರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

‘ನನ್ನ ಮಗುವಿನ ಸಮ್ಮುಖದಲ್ಲಿ ಗ್ರ್ಯಾನ್‌ಸ್ಲಾಮ್ ಫೈನಲ್‌ವೊಂದರಲ್ಲಿ ಆಡುತ್ತೇನೆ ಎಂದು ಯೋಚಿಸಿರಲಿಲ್ಲ. ನಾಲ್ಕು ವರ್ಷದ ಮಗ ಇಜಾನ್‌, ನನ್ನ ಪೋಷಕರು, ರೋಹನ್ ಪತ್ನಿ, ನನ್ನ ತರಬೇತುದಾರರು, ಆಸ್ಟ್ರೇಲಿಯಾದಲ್ಲಿರುವ ನನ್ನ ಕುಟುಂಬಸ್ಥರು ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದು ನಿಜವಾಗಿಯೂ ವಿಶೇಷ ಕ್ಷಣ‘ ಎಂದು ಸಾನಿಯಾ ಹೇಳಿದರು.

ಪಂದ್ಯದ ಆರಂಭದಲ್ಲೇ ಸಾನಿಯಾ– ಬೋಪಣ್ಣ ಹಿನ್ನಡೆ ಅನುಭವಿಸಿದರು. ಮೊದಲ ಸೆಟ್‌ನಲ್ಲಿ ಎದುರಾಳಿಗಳು ಇವರಿಬ್ಬರ ಸರ್ವ್ ಬ್ರೇಕ್ ಮಾಡಿ 2–0 ಮೇಲುಗೈ ಪಡೆದರು. ಬಳಿಕ ತಿರುಗೇಟು ನೀಡಿದ ಭಾರತದ ಆಟಗಾರರು ಸತತ ಮೂರು ಗೇಮ್‌ಗಳ ಬಲದಿಂದ 5–3ರಿಂದ ಮುನ್ನಡೆ ಗಳಿಸಿದರು. ಆದರೆ ಟೈಬ್ರೇಕ್‌ವರೆಗೆ ಸಾಗಿದ ಸೆಟ್‌ನಲ್ಲಿ ಸ್ಟೆಫಾನಿ–ರಫೆಲ್ ಜೋಡಿ ಬೋಪಣ್ಣ ಅವರ ಕಳಪೆ ಸರ್ವ್‌ಗಳ ಲಾಭ ಪಡೆದರು. ಸೆಟ್‌ ಗೆದ್ದು ಬೀಗಿದರು.

ಎರಡನೇ ಸೆಟ್‌ನಲ್ಲಿ ಬ್ರೆಜಿಲ್ ಜೋಡಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು.

ಮುಂದಿನ ತಿಂಗಳು ನಡೆಯುವ ದುಬೈ ಓಪನ್‌ ಟೆನಿಸ್‌ ಟೂರ್ನಿಯ ಬಳಿಕ ನಿವೃತ್ತಿಯಾಗುವುದಾಗಿ ಸಾನಿಯಾ ಅವರು ಈಗಾಗಲೇ ಪ್ರಕಟಿಸಿದ್ದಾರೆ.

ಸಿಟ್ಸಿಪಸ್‌–ಜೊಕೊವಿಚ್‌ ಫೈನಲ್‌ ಸೆಣಸು (ಎಎಫ್‌ಪಿ ವರದಿ): ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಗ್ರೀಸ್‌ನ ಸ್ಟೆಫಾನೊಸ್ ಸಿಟ್ಸಿಪಸ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್‌ ಮುಖಾಮುಖಿಯಾಗಲಿದ್ದಾರೆ.

ಶುಕ್ರವಾರ ನಡೆದ ಜಿದ್ದಾಜಿದ್ದಿ ಸೆಮಿಫೈನಲ್‌ನಲ್ಲಿ ಸಿಟ್ಸಿಪಸ್‌ 7-6 (7/2), 6-4, 6-7 (6/8), 6-3ರಿಂದ ರಷ್ಯಾದ ಕರೆನ್ ಕಚನೊವ್ ಅವರನ್ನು ಮಣಿಸಿದರು. ಇಲ್ಲಿ ಮೊದಲ ಬಾರಿ ಫೈನಲ್ ತಲುಪಿರುವ ಗ್ರೀಸ್‌ ಆಟಗಾರ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವತ್ತ ದಾಪುಗಾಲಿಟ್ಟರು.

ಭಾನುವಾರ ನಡೆಯುವ ಪುರುಷರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಜೊಕೊವಿಚ್ ಅವರನ್ನು ಮಣಿಸಿದರೆ ಸಿಟ್ಸಿಪಸ್‌ ಅಗ್ರ ಕ್ರಮಾಂಕದ ಆಟಗಾರ ಎನಿಸಿಕೊಳ್ಳುವರು.

24 ವರ್ಷದ ಸಿಟ್ಸಿಪಸ್‌ ಅವರು ಆಸ್ಟ್ರೇಲಿಯಾ ಓಪನ್ ಫೈನಲ್ ತಲು‍ಪಿದ ಎರಡನೇ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 2011ರಲ್ಲಿ 23 ವರ್ಷದ ಜೊಕೊವಿಚ್‌ ಪ್ರಶಸ್ತಿ ಸುತ್ತು ತಲುಪಿದ್ದರು.

ಇಲ್ಲಿ ಒಂಬತ್ತು ಬಾರಿ ಕಿರೀಟ ಧರಿಸಿರುವ ಜೊಕೊವಿಚ್‌ ಅವರು, ಇನ್ನೊಂದು ಸೆಮಿಫೈನಲ್‌ನಲ್ಲಿ 7-5, 6-1, 6-2ರಿಂದ ಅಮೆರಿಕದ ಟಾಮಿ ಪಾಲ್ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಅಲ್ಪ ಆತಂಕ ಎದುರಿಸಿದ ಜೊಕೊವಿಚ್‌ ಬಳಿಕ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.

ಧ್ವಜ ವಿವಾದ; ಪಂದ್ಯ ವೀಕ್ಷಿಸದ ಜೊಕೊವಿಚ್‌ ತಂದೆ: ರಷ್ಯಾದ ಧ್ವಜ ಹಿಡಿದವರೊಂದಿಗೆ ನಿಂತ ಕಾರಣಕ್ಕೆ ನೊವಾಕ್ ಜೊಕೊವಿಚ್ ಅವರ ತಂದೆ ಸರ್ಜಾನ್ ಜೊಕೊವಿಚ್ ಅವರು ತಮ್ಮ ಮಗನ ಸೆಮಿಫೈನಲ್ ಪಂದ್ಯದಿಂದ ದೂರಉಳಿಯಬೇಕಾಯಿತು.

ರಷ್ಯಾ ಆಟಗಾರ ಆ್ಯಂಡ್ರೆ ರುಬ್ಲೆವ್ ಎದುರಿನ ಪಂದ್ಯದಲ್ಲಿ ನೊವಾಕ್ ಜಯಿಸಿದ ಬಳಿಕ ಬುಧವಾರ ರಾಡ್‌ ಲೇವರ್ ಕ್ರೀಡಾಂಗಣದ ಹೊರಗೆ ಜನರ ಗುಂಪೊಂದು ಧ್ವಜ ಪ್ರದರ್ಶಿಸುತ್ತಿತ್ತು. ಅದನ್ನು ಚಿತ್ರೀಕರಿಸಲಾಗಿತ್ತು. ಅದರಲ್ಲಿ ಸರ್ಜಾನ್ ಕೂಡ ಇದ್ದರು. ಸರ್ಜಾನ್ ಅವರೇ ಸೆಮಿಫೈನಲ್‌ ಪಂದ್ಯದಿಂದ ದೂರವುಳಿಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಟೆನಿಸ್ ಆಸ್ಟ್ರೇಲಿಯಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.