ADVERTISEMENT

ಆಸ್ಟ್ರೇಲಿಯಾ ಓಪನ್‌: ಕ್ವಾರ್ಟರ್‌ ಫೈನಲ್‌ಗೆ ಸಿನ್ನರ್‌ ಲಗ್ಗೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 19:25 IST
Last Updated 26 ಜನವರಿ 2026, 19:25 IST
   

ಮೆಲ್ಬರ್ನ್‌: ಸತತ ಎರಡು ಬಾರಿಯ ಚಾಂಪಿಯನ್‌ ಯಾನಿಕ್‌ ಸಿನ್ನರ್‌ ಅವರು ಸೋಮವಾರ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನೇರ ಸೆಟ್‌ಗಳ ಗೆಲುವಿನೊಡನೆ ಕ್ವಾರ್ಟರ್‌ ಫೈನಲ್‌ ತಲುಪಿದರು. ಆದರೆ, ಮಹಿಳೆಯರ ಸಿಂಗಲ್ಸ್‌ ಹಾಲಿ ಚಾಂಪಿಯನ್‌ ಮ್ಯಾಡಿಸನ್‌ ಕೀಸ್‌ ಅವರ ಗೆಲುವಿನ ಓಟಕ್ಕೆ ತಡೆ ಬಿತ್ತು.

ಪುರುಷರ ಸಿಂಗಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಲೊರೆಂಝೊ ಮುಸೆಟ್ಟಿ, ಎಂಟನೇ ಶ್ರೇಯಾಂಕದ ಬೆನ್‌ ಶೆಲ್ಟನ್‌ ಅವರೂ ಎಂಟರ ಘಟ್ಟಕ್ಕೆ ಮುನ್ನಡೆದರು. ಪೊಲೇಂಡ್‌ನ ತಾರೆ ಇಗಾ ಶ್ವಾಂಟೆಕ್‌, ಅಮೆರಿಕದ ಅಮಂಡಾ ಅನಿಸಿಮೊವಾ, ಜೆಸ್ಸಿಕಾ ಪೆಗುಲಾ ಅವರು ನೇರ ಸೆಟ್‌ಗಳ ಜಯ ಸಾಧಿಸಿ ಮುನ್ನಡೆದರು.

ಮಾರ್ಗರೇಟ್ ಕೋರ್ಟ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ಎರಡನೇ ಕ್ರಮಾಂಕದ ಸಿನ್ನರ್‌ 6-1, 6-3, 7-6 (7/2)ರಿಂದ ಸ್ವದೇಶದ ಲುಸಿಯಾನೊ ದರ್ದೆರಿ ಅವರನ್ನು ಹಿಮ್ಮೆಟ್ಟಿಸಿದರು. ಅವರು ಮುಂದಿನ ಸುತ್ತಿನಲ್ಲಿ ಅಮೆರಿಕದ ಶೆಲ್ಟನ್‌ ಅವರನ್ನು ಎದುರಿಸುವರು. ಶೆಲ್ಟನ್‌ 12ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್‌ ಅವರನ್ನು ಸೋಲಿಸಿದರು. ಸಿನ್ನರ್‌ ಈ ಸವಾಲನ್ನು ಗೆದ್ದರೆ ಸರ್ಬಿಯಾ ದಿಗ್ಗಜ ನೊವಾಕ್‌ ಜೊಕೊವಿಚ್‌ ಅವರೊಂದಿಗೆ ಹೈವೋಲ್ಟೇಜ್‌ ಸೆಮಿಫೈನಲ್‌ ಪಂದ್ಯಕ್ಕೆ ವೇದಿಕೆ ಸಿದ್ಧವಾಗಲಿದೆ.

ADVERTISEMENT

ಮೆಲ್ಬರ್ನ್‌ ಪಾರ್ಕ್‌ನಲ್ಲಿ ಇಟಲಿಯ ಆಟಗಾರ ಹ್ಯಾಟ್ರಿಕ್‌ ಕಿರೀಟ ಜಯಿಸಿದಲ್ಲಿ ಓಪನ್‌ ಯುಗದಲ್ಲಿ (1968ರ ಬಳಿಕ) ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವರು. 10 ಬಾರಿಯ ಚಾಂಪಿಯನ್‌ ಜೊಕೊವಿಚ್‌ ಈ ಸಾಧನೆ ಮಾಡಿದ ಮೊದಲ ಆಟಗಾರನಾಗಿದ್ದಾರೆ.

23 ವರ್ಷದ ದರ್ದೆರಿ ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ನಾಲ್ಕನೇ ಸುತ್ತು ತಲುಪಿದರು. 22ನೇ ಶ್ರೇಯಾಂಕದ ಅವರು ಮೂರನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ನೀಡಿದರಾದರೂ, ಅವರ ಸ್ನೇಹಿತ 24 ವರ್ಷದ ಸಿನ್ನರ್‌
ಟೈಬ್ರೇಕರ್‌ನಲ್ಲಿ ಗೆದ್ದುಕೊಂಡರು.

ಸ್ವದೇಶಿ ಆಟಗಾರ್ತಿಯರ ಮತ್ತೊಂದು ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ಪೆಗುಲಾ 6-3, 6-4 ಸೆಟ್‌ಗಳಿಂದ ಒಂಬತ್ತನೇ ಶ್ರೇಯಾಂಕದ ಮ್ಯಾಡಿಸನ್‌ ಅವರನ್ನು ಮಣಿಸಿದರು. ಕಳೆದ ಆವೃತ್ತಿಯಲ್ಲಿ 30 ವರ್ಷದ ಮ್ಯಾಡಿಸನ್‌ ಅವರು ಬೆಲಾರೂಸ್‌ನ ಅರಿನಾ ಸಬಲೆಂಕಾ ಅವರಿಗೆ ಆಘಾತ ನೀಡಿ, ವೃತ್ತಿಜೀವನದ ಮೊದಲ ಗ್ರ್ಯಾನ್‌ಸ್ಲಾಮ್‌ ಕಿರೀಟ ಗೆದ್ದಿದ್ದರು.

31 ವರ್ಷದ ಪೆಗುಲಾ ನಾಲ್ಕನೇ ಬಾರಿ ಇಲ್ಲಿ ಎಂಟರ ಘಟ್ಟ ಪ್ರವೇಶಿಸಿದರು. ಆದರೆ, ಈತನಕ ಅವರಿಗೆ ಈ ಹಂತವನ್ನು ದಾಟಲು ಸಾಧ್ಯವಾಗಿಲ್ಲ. ಮುಂದಿನ ಸುತ್ತಿನಲ್ಲಿ ಅವರು ಸ್ವದೇಶದ ಮತ್ತೊಂದು ಆಟಗಾರ್ತಿ ಅನಿಸಿಮೊವಾ ಅವರನ್ನು ಎದುರಿಸುವರು. ನಾಲ್ಕನೇ ಶ್ರೇಯಾಂಕದ ಅನಿಸಿಮೊವಾ 7-6 (7/4), 6-4ರಿಂದ ಚೀನಾದ ವಾಂಗ್ ಕ್ಸಿನ್ಯು ಅವರನ್ನು ಸೋಲಿಸಿದರು.

ಐದನೇ ಶ್ರೇಯಾಂಕದ ಎಲೆನಾ ರಿಬಾಕಿನಾ 6-1, 6-3ರಿಂದ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಅವರನ್ನು ಮಣಿಸಿ, ಎರಡನೇ ಶ್ರೇಯಾಂಕದ ಶ್ವಾಂಟೆಕ್‌ ಅವರೊಂದಿಗೆ ಹಣಾಹಣಿಗೆ ವೇದಿಕೆಯನ್ನು ಸಜ್ಜುಗೊಳಿಸಿದರು.
ಶ್ವಾಂಟೆಕ್‌ 6-0, 6-3ರಿಂದ ಆಸ್ಟ್ರೇಲಿಯಾದ ಕ್ವಾಲಿಫೈಯರ್‌ ಆಟಗಾರ್ತಿ ಮ್ಯಾಡಿಷನ್‌ ಇಂಗ್ಲಿಸ್‌ ಅವರನ್ನು ಪರಾಭವಗೊಳಿಸಿದರು. 168ನೇ ರ‍್ಯಾಂಕ್‌ನ ಇಂಗ್ಲಿಸ್ ಪ್ರಮುಖ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಪ್ರಿ ಕ್ವಾರ್ಟರ್‌ ಫೈನಲ್‌ ತಲುಪಿದ್ದರು.

ಮುಸೆಟ್ಟಿ ಮುನ್ನಡೆ:

ಇಟಲಿಯ ಆಟಗಾರ ಮುಸೆಟ್ಟಿ 6-2, 7-5, 6-4ರಿಂದ ಅಮೆರಿಕದ ಟೇಲರ್‌ ಫ್ರಿಟ್ಜ್‌ ಅವರನ್ನು ಸೋಲಿಸಿದರು. 23 ವರ್ಷದ ಮುಸೆಟ್ಟಿ ಇಲ್ಲಿ ಪ್ರಥಮ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಅವರು ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಜೊಕೊವಿಚ್‌ ಅವರನ್ನು ಎದುರಿಸುವರು. ಈ ಹಿಂದಿನ ಹತ್ತು ಮುಖಾಮುಖಿಯಲ್ಲಿ ಜೊಕೊವಿಚ್‌ ಒಂಬತ್ತರಲ್ಲಿ ಗೆದ್ದಿದ್ದಾರೆ.

ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್‌ ತಲುಪಿದ್ದ 23 ವರ್ಷದ ಶೆಲ್ಟನ್‌ 3-6, 6-4, 6-3, 6-4ರಿಂದ ನಾರ್ವೆಯ ರೂಡ್‌ ಅವರನ್ನು ಹಿಮ್ಮೆಟ್ಟಿಸಿ, ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸುವತ್ತ ದಾಪುಗಾಲಿಟ್ಟರು.

ಭಾಂಬ್ರಿ–ಆ್ಯಂಡ್ರೆ ಜೋಡಿಗೆ ನಿರಾಸೆ

ಮೆಲ್ಬರ್ನ್‌ (ಪಿಟಿಐ): ಭಾರತದ ಯೂಕಿ ಭಾಂಬ್ರಿ ಮತ್ತು ಅವರ ಸ್ವೀಡನ್‌ನ ಜೊತೆಗಾರ ಆ್ಯಂಡ್ರೆ ಗೊರಾನ್ಸನ್ ಅವರು ಆಸ್ಟ್ರೇಲಿಯಾ ಓಪನ್‌ನ ಪುರುಷರ ಡಬಲ್ಸ್‌ನ ಮೂರನೇ ಸುತ್ತಿನಲ್ಲಿ ಹೊರಬಿದ್ದರು.

ಬ್ರೆಜಿಲ್‌ನ ಶ್ರೇಯಾಂಕರಹಿತ ಜೋಡಿಯು ಒರ್ನಾಡೊ ಲುಜ್ ಮತ್ತು ರಫೆಲ್ ಮ್ಯಾಟೋಸ್ 6-7(7), 3-6ರಿಂದ 10ನೇ ಶ್ರೇಯಾಂಕದ ಭಾಂಬ್ರಿ– ಆ್ಯಂಡ್ರೆ ಅವರಿಗೆ ಆಘಾತ ನೀಡಿತು.

ಭಾಂಬ್ರಿ ನಿರ್ಗಮನದೊಂದಿಗೆ ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಭಾಂಬ್ರಿ ಅವರು ಮಿಶ್ರ ಡಬಲ್ಸ್‌ನಿಂದ ಮೊದಲೇ ನಿರ್ಗಮಿಸಿದ್ದರೆ, ಶ್ರೀರಾಮ್ ಬಾಲಾಜಿ ಪುರುಷರ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.