ಇಟಲಿಯ ಯಾನಿಕ್ ಸಿನ್ನರ್ ಅವರು ಮೆಲ್ಬರ್ನ್‌ನಲ್ಲಿ ಶನಿವಾರ ಅಭ್ಯಾಸ ನಡೆಸಿದರು
ಮೆಲ್ಬರ್ನ್: ಇಟಲಿಯ ಟೆನಿಸ್ ತಾರೆ ಯಾನಿಕ್ ಸಿನ್ನರ್ ಅವರು ಭಾನುವಾರ ಆರಂಭವಾಗುವ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿಯ ವಿಶ್ವಾಸದಲ್ಲಿದ್ದಾರೆ. ವಿಶ್ವದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರು ಇಲ್ಲಿ ಮೊದಲ ಕಿರೀಟದ ನಿರೀಕ್ಷೆಯಲ್ಲಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಅರಿನಾ ಸಬಲೆಂಕಾ ಅವರು ಫ್ರಾನ್ಸ್‌ನ ಚಾನ್ಸುವಾ ಕುತುಮಾಂಗ ಆಜೋನಾ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. 27 ವರ್ಷ ವಯಸ್ಸಿನ ಬೆಲಾರೂಸ್‌ನ ಆಟಗಾರ್ತಿ ಇತ್ತೀಚಿನ ಪ್ರಮುಖ ಆರು ಟೂರ್ನಿಗಳಲ್ಲಿ ಫೈನಲ್ ತಲುಪಿದ್ದು, ನಾಲ್ಕು ಟ್ರೋಫಿಗಳಿಗೆ ಮುತ್ತಿಕ್ಕಿದ್ದಾರೆ.
ಸರ್ಬಿಯಾದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಚ್ ಅವರು 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ‘ನಾನು ಯಾರನ್ನು ಬೇಕಾದರೂ ಸೋಲಿಸಬಲ್ಲೆ’ ಎಂದು ಪರೋಕ್ಷವಾಗಿ ಸಿನ್ನರ್ ಮತ್ತು ಅಲ್ಕರಾಜ್ ಅವರನ್ನು ಮಣಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಳ್ಳುವುದಕ್ಕಿಂತಲೂ ಆಸ್ಟ್ರೇಲಿಯಾ ಓಪನ್ ಕಿರೀಟ ಗೆಲ್ಲುವುದು ತಮ್ಮ ಮುಂದಿನ ಗುರಿ ಎಂದು ಸ್ಪೇನ್‌ನ 22 ವರ್ಷ ವಯಸ್ಸಿನ ಅಲ್ಕರಾಜ್ ಕಳೆದ ನವೆಂಬರ್‌ನಲ್ಲಿ ಹೇಳಿದ್ದರು. ಅದರಂತೆ, ಅತಿ ಕಿರಿಯ ವಯಸ್ಸಿನಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್ ಗೆದ್ದ ದಾಖಲೆಯನ್ನು ನಿರ್ಮಿಸುವ ತವಕದಲ್ಲಿದ್ದಾರೆ. ಅಮೆರಿಕದ ಡಾನ್ ಬಜ್ ಅವರು 1938ರಲ್ಲಿ ಈ ಸಾಧನೆ ಮಾಡಿದ್ದರು. ಆಗ ಅವರಿಗೆ 23 ವರ್ಷ ವಯಸ್ಸಾಗಿತ್ತು.
ಅಲ್ಕರಾಜ್ ಮೊದಲ ಸುತ್ತಿನಲ್ಲಿ ಆತಿಥೇಯ ರಾಷ್ಟ್ರದ ಆ್ಯಡಂ ವಾಲ್ಟನ್ ಅವರನ್ನು ಎದುರಿಸಲಿ
ದ್ದಾರೆ. ಮೂರನೇ ಶ್ರೇಯಾಂಕದ ಆಟಗಾರ, ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಅವರು ಕೆನಡಾದ ಗ್ಯಾಬ್ರಿಯಲ್ ಡಿಯಾಲ್ಲೊ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.
ಅಮೆರಿಕದ ದಿಗ್ಗಜ ಆಟಗಾರ್ತಿ, 45 ವರ್ಷ ವಯಸ್ಸಿನ ವೀನಸ್ ವಿಲಿಯಮ್ಸ್ ಅವರು ಐದು ವರ್ಷಗಳ ನಂತರ ಟೂರ್ನಿಗೆ ಮರಳುತ್ತಿದ್ದಾರೆ. ಅದರೊಂದಿಗೆ ಟೂರ್ನಿಯ ಮುಖ್ಯ ಸುತ್ತಿನಲ್ಲಿ ಆಡಲಿರುವ ‘ಅತಿ ಹಿರಿಯ ವಯಸ್ಸಿನ ಆಟಗಾರ್ತಿ’ ಎಂಬ ವಿಶಿಷ್ಟ ದಾಖಲೆಗೂ ಅವರು ಪಾತ್ರರಾಗಿದ್ದಾರೆ.
ಭಾರತದ ನಿಕಿ ಪೂಣಚ್ಚ– ಥಾಯ್ಲೆಂಡ್‌ನ ಪ್ರುಚ್ಯಾ ಇಸಾರೊ ಜೋಡಿ ಪುರುಷರ ಡಬಲ್ಸ್ ಮುಖ್ಯ
ಸುತ್ತಿನಲ್ಲಿ ಆಡಲು ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.