ADVERTISEMENT

Bengaluru Open | ಸುಮಿತ್‌ ನಗಾಲ್‌ ಶುಭಾರಂಭ

ಬೆಂಗಳೂರು ಓಪನ್‌ ಟೆನಿಸ್‌: ರಾಮಕುಮಾರ್‌ಗೆ ಇಂದು ನಾರ್ಡಿ ಸವಾಲು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 22:55 IST
Last Updated 13 ಫೆಬ್ರುವರಿ 2024, 22:55 IST
<div class="paragraphs"><p>ಸುಮಿತ್‌ ನಗಾಲ್‌</p></div>

ಸುಮಿತ್‌ ನಗಾಲ್‌

   

ಬೆಂಗಳೂರು: ಭಾರತದ ಅಗ್ರಗಣ್ಯ ಆಟಗಾರ ಸುಮಿತ್ ನಗಾಲ್‌ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಅವರು ಫ್ರಾನ್ಸ್‌ ಆಟಗಾರ ಜೆಫ್ರಿ ಬ್ಲಾಂಕಾನಿಯಾಕ್ಸ್ ವಿರುದ್ಧ ನಿರಾಯಾಸ ಗೆಲುವು ಸಾಧಿಸಿದರು.

ನಗರದ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿಶ್ವದ 98ನೇ ಕ್ರಮಾಂಕದ ನಗಾಲ್‌ ಅವರು 6–2, 6–2ರಿಂದ ಜೆಫ್ರಿ ಅವರನ್ನು ಹಿಮ್ಮೆಟ್ಟಿಸಿದರು. ಈ ಫ್ರಾನ್ಸ್‌ ಆಟಗಾರನ ವಿರುದ್ಧ ಭಾರತದ ಆಟಗಾರನಿಗೆ ಇದು ನಾಲ್ಕನೇ ಗೆಲುವಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯನ್ ಓಪನ್‌ನ ಕ್ವಾಲಿಫೈಯರ್ ಸುತ್ತಿನಲ್ಲೂ ಜೆಫ್ರಿ ಪರಾಭವಗೊಂಡಿದ್ದರು.

ADVERTISEMENT

ಚಾಲೆಂಜರ್‌ ಮಟ್ಟದ ಆರನೇ ಕಿರೀಟದ ಮೇಲೆ ಕಣ್ಣಿಟ್ಟಿರುವ ತವರಿನ ನೆಚ್ಚಿನ ಆಟಗಾರ ನಗಾಲ್, ಉತ್ತಮ ಸರ್ವ್‌ ಮತ್ತು ನಿಖರ ಹೊಡೆತಗಳ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದರು. ಒಂದು ಗಂಟೆ 28 ನಿಮಿಷ ನಡೆದ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ನಗಾಲ್‌, ಆರಂಭದಿಂದಲೇ ಮುನ್ನಡೆಯನ್ನು ಕಾಯ್ದುಕೊಂಡರು. ಎದುರಾಳಿ ಆಟಗಾರನಿಗೆ ಪುಟಿದೇಳಲು ಎಲ್ಲೂ ಅವಕಾಶ ನೀಡದೆ ನೇರ ಸೆಟ್‌ಗಳ ಜಯ ಸಂಪಾದಿಸಿದರು.

ಮುಂದಿನ ಸುತ್ತಿನಲ್ಲಿ ಅವರು ಹಾಂಗ್‌ಕಾಂಗ್‌ನ ಕೋಲ್ಮನ್ ವಾಂಗ್ ಅವರನ್ನು ಎದುರಿಸಲಿದ್ದಾರೆ. ವಾಂಗ್ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ರಫೆಲ್ ಕೊಲಿಗ್ನಾನ್ ಅವರನ್ನು 6-4, 7-6 (4) ರಿಂದ ಮಣಿಸಿದ್ದರು.

ಇದಕ್ಕೂ ಮೊದಲು ಅಗ್ರ ಶ್ರೇಯಾಂಕದ ಇಟಲಿಯ ಲುಕಾ ನಾರ್ಡಿ ಅವರಿಗೆ ಶ್ರೇಯಾಂಕರಹಿತ ಆಟಗಾರ ಫ್ರಾನ್ಸ್‌ನ ಡಾನ್‌ ಆ್ಯಡೆಡ್‌ ಅವರಿಂದ ಪ್ರಬಲ ಸ್ಪರ್ಧೆ ಎದುರಾಯಿತು. ಎರಡು ಗಂಟೆ 20 ನಿಮಿಷ ನಡೆದ ಹೋರಾಟದಲ್ಲಿ 3-6, 6-3, 7-6 (0)ರಿಂದ ನಾರ್ಡಿ ಮೇಲುಗೈ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಅವರು ಭಾರತದ ರಾಮಕುಮಾರ್‌ ರಾಮನಾಥನ್‌ ವಿರುದ್ಧ ಸೆಣಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಕೆನಡಾದ ವಾಸೆಕ್ ಪೊಸ್ಪಿಸಿಲ್ 7-6(2), 3-6, 6-4ರಿಂದ ಉಕ್ರೇನ್‌ನ ಎರಿಕ್ ವಾನ್ಶೆಲ್ಬೋಯಿಮ್ ಅವರನ್ನು ಸೋಲಿಸಿದರು.ವಿಶ್ವದ ಮಾಜಿ 17ನೇ ಕ್ರಮಾಂಕದ ಆಟಗಾರ ಬರ್ನಾರ್ಡ್ ಟಾಮಿಕ್ (ಆಸ್ಟ್ರೇಲಿಯಾ) ಆರಂಭಿಕ ಸುತ್ತಿನಲ್ಲಿ ಆಘಾತ ಅನುಭವಿಸಿದರು. 31 ವರ್ಷದ ಅವರು 6–3, 3–6, 3–6 ರಲ್ಲಿ ಅಮೆರಿಕದ ಟ್ರಿಸ್ಟಾನ್ ಬೋಯರ್ ವಿರುದ್ಧ ಸೋತರು. ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಬೆಂಜಮಿನ್ ಬೊಂಜಿ 6-3, 6-2ರಿಂದ ಆಸ್ಟ್ರೇಲಿಯಾದ ಫಿಲೀಪ್ ಸೆಕುಲಿಕ್ ಅವರನ್ನು ಸೋಲಿಸಿದರು.

ಡಬಲ್ಸ್‌ ವಿಭಾಗದಲ್ಲಿ ಟೂರ್ನಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದ ಭಾರತದ ಸಾಯಿ ಕಾರ್ತಿಕ್ ರೆಡ್ಡಿ ಮತ್ತು ಮನೀಷ್‌ ಸುರೇಶ್‌ಕುಮಾರ್‌ ಜೋಡಿ 2-6, 6-7 (8) ಅಂತರದಲ್ಲಿ ಫ್ರಾನ್ಸ್‌ನ ಕಾನ್‌ಸ್ಟಾಂಟಿನ್ ಕೌಜ್ಮಿನ್ ಮತ್ತು ಮ್ಯಾಕ್ಸಿಂ ಜಾನ್ವಿಯರ್ ಅವರಿಗೆ ಮಣಿಯಿತು.

ಭಾರತದ ಇಂದಿನ ಪಂದ್ಯಗಳು

ರಾಮಕುಮಾರ್‌ ರಾಮನಾಥನ್‌– ಲುಕಾ ನಾರ್ಡಿ (ಇಟಲಿ) ಮಧ್ಯಾಹ್ನ 12.30. ಪ್ರಜ್ವಲ್‌ ದೇವ್‌– ‌ಆ್ಯಡಂ ವಾಲ್ಟನ್ (ಆಸ್ಟ್ರೇಲಿಯಾ) ಬೆಳಿಗ್ಗೆ 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.