
ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಮತ್ತು ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ ಮಾತುಕತೆ
–ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ಧನ್
ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಗುರುವಾರ ಸಂಜೆ ಸೇರಿದ್ದ ಕ್ರೀಡಾಪ್ರಿಯರಿಗೆ ದಿಗ್ಗಜ ಆಟಗಾರರ ಜೋಡಿಯು ರಸದೌತಣ ನೀಡಿತು. ಸ್ಥಳೀಯ ಹೀರೊ ರೋಹನ್ ಬೋಪಣ್ಣ ಅವರ ಆಟವನ್ನು ಕಣ್ತುಂಬಿ ಕೊಳ್ಳುವ ಅವಕಾಶ ಟೆನಿಸ್‌ಪ್ರಿಯರಿಗೆ ಲಭಿಸಿತು.
ಇಲ್ಲಿ ನಡೆಯುತ್ತಿರುವ ವಿಶ್ವ ಟೆನಿಸ್ ಲೀಗ್ (ಡಬ್ಲ್ಯುಟಿಎಲ್) ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಫಾಲ್ಕನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೋಹನ್ ಮತ್ತು ಡೇನಿಯಲ್ ಮೆಡ್ವೆಡೇವ್ ಅವರು 6–3ರಿಂದ ಡೆನಿಸ್ ಶಪೊವಲೋವ್ ಹಾಗೂ ಭಾರತದ ಯೂಕಿ ಭಾಂಬ್ರಿ ವಿರುದ್ಧ ಜಯಗಳಿಸಿದರು.
ಮಿಶ್ರ ಡಬಲ್ಸ್‌ನಲ್ಲಿಯೂ ಕೊಡಗಿನ ಆಟಗಾರ ರೋಹನ್ ಬೋಪಣ್ಣ ಅವರು ಮ್ಯಾಗ್ದಾ ಲಿನೆಟ್ ಅವರೊಂದಿಗೆ 6–3ರಿಂದ ಹಾಕ್ಸ್ ತಂಡದ ಯೂಕಿ ಬಾಂಭ್ರಿ ಹಾಗೂ ಮಾಯಾ ರೇವತಿ ಜೋಡಿಯನ್ನು ಸೋಲಿಸಿದರು.
ಮಹಿಳಾ ಸಿಂಗಲ್ಸ್‌ನಲ್ಲಿ ಹಾಕ್ಸ್ ತಂಡದ ಎಲಿನಾ ಸ್ವಿಟೋಲಿನಾ 6–2ರಿಂದ ಫಾಲ್ಕನ್ಸ್‌ನ ಮ್ಯಾಗ್ಡಾ ಲಿನೆಟ್ ವಿರುದ್ಧ ಜಯಭೇರಿ ಬಾರಿಸಿದರು. ಈಗಲ್ಸ್‌ನ ಪೌಲಾ ಬಡೋಸಾ 6–1ರಿಂದ ಕೈಟ್ಸ್ ತಂಡದ ಮಾರ್ತಾ ಕಾಸ್ತ್ಯೂಕ್ ವಿರುದ್ಧ ಜಯಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಈಗಲ್ಸ್ ತಂಡದ ಸುಮಿತ್ ನಗಾಲ್ 7–6ರಿಂದ ಕೈಟ್ಸ್ ತಂಡದ ದಕ್ಷಿಣೇಶ್ವರ ಸುರೇಶ್ ವಿರುದ್ಧ ಗೆದ್ದರು. ಡಬಲ್ಸ್‌ನಲ್ಲಿ ಸುಮಿತ್ ನಗಾಲ್–ಗೇಲ್ ಮಾನ್ಫಿಲ್ಸ್ ಜೋಡಿಯು ಕೈಟ್ಸ್‌ನ ನಿಕ್ ಕಿರ್ಗಿಯೋಸ್–ದಕ್ಷಿಣೇಶ್ವರ ಸುರೇಶ್ ವಿರುದ್ಧ ಜಯಿಸಿತು.
ಪಂದ್ಯಗಳನ್ನು ವೀಕ್ಷಿಸಲು ಆಗಮಿಸಿದ್ದ ಕ್ರಿಕೆಟ್ ತಾರೆ ಶ್ರೇಯಸ್ ಅಯ್ಯರ್ ಅವರು ರೋಹನ್ ಬೋಪಣ್ಣ, ಮೆಡ್ವೆಡೇವ್ ಅವರೊಂದಿಗೆ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.