ರೋಹನ್ ಬೋಪಣ್ಣ, ಶುವಾಯ್ ಜಾಂಗ್
(ಚಿತ್ರ ಕೃಪೆ: X/@AustralianOpen)
ಮೆಲ್ಬರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಚೀನಾದ ಶುವಾಯ್ ಜಾಂಗ್ ಜೋಡಿ, ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಕೂಟದಿಂದಲೇ ಹೊರಬಿದ್ದಿದೆ.
ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿನಿಂದ ಸಾಗಿದ ಪಂದ್ಯದಲ್ಲಿ ಬೋಪಣ್ಣ-ಜಾಂಗ್ ಜೋಡಿ ವೈಲ್ಡ್ ಕಾರ್ಡ್ ಪಡೆದಿರುವ ಸ್ಥಳೀಯ ಜೋಡಿ ಆಸ್ಟ್ರೇಲಿಯಾದ ಜಾನ್ ಪೀರ್ಸ್ ಮತ್ತು ಒಲಿವಿಯಾ ಗಡೆಕಿ ವಿರುದ್ಧ 6-2, 4-6, 9-11ರ ಕಠಿಣ ಅಂತರದಲ್ಲಿ ಸೋಲನುಭವಿಸಿತು.
ಮೊದಲ ಸೆಟ್ ಗೆದ್ದ ಬೋಪಣ್ಣ-ಜಾಂಗ್ ಜೋಡಿ ಮುನ್ನಡೆ ಗಳಿಸಿತು. ಆದರೆ ಎರಡನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿತು.
ಬಳಿಕ ಸೂಪರ್ ಟೈ-ಬ್ರೇಕ್‌ನಲ್ಲಿ ಮ್ಯಾಚ್ ಪಾಯಿಂಟ್ ಅವಕಾಶ ಗಿಟ್ಟಿಸಿಕೊಂಡರೂ ಭಾರತ-ಚೀನಾದ ಜೋಡಿಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೂ ಒಂದು ತಾಸು ಎಂಟು ನಿಮಿಷಗಳವರೆಗೆ ಸಾಗಿದ ಪಂದ್ಯದಲ್ಲಿ ತಲೆಬಾಗುವ ಮುನ್ನ ನಿಕಟ ಪೈಪೋಟಿಯನ್ನು ಒಡ್ಡಿತು.
ಇದರೊಂದಿಗೆ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ 44 ವರ್ಷದ ಬೋಪಣ್ಣ ಅವರ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಇದಕ್ಕೂ ಮೊದಲು ಪುರುಷರ ಡಬಲ್ಸ್ ವಿಭಾಗದಲ್ಲೂ ಬೋಪಣ್ಣ ಹೊರಬಿದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.