ವಿಂಬಲ್ಡನ್ ಎರಡನೇ ಸುತ್ತಿನಲ್ಲಿ ಫೋರ್‌ಹ್ಯಾಂಡ್ ಹೊಡೆತದಲ್ಲಿ ಚೆಂಡನ್ನು ಹಿಂತಿರುಗಿಸಿದ ಕಾರ್ಲೊಸ್ ಅಲ್ಕರಾಜ್
ಪಿಟಿಐ ಚಿತ್ರ
ಲಂಡನ್: ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಜ್ ಅವರು ಆರಂಭದಲ್ಲಿ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಕ್ ಎದುರು ಪರದಾಡಿದರೂ, ಚೇತರಿಸಿಕೊಂಡ ಮೇಲೆ ‘ಟಾಪ್ ಗೇರ್’ನಲ್ಲಿ ಸಾಗಿದರು. ಮೂರನೇ ಶ್ರೇಯಾಕದ ಅಲ್ಕರಾಜ್ ಅಂತಿಮವಾಗಿ 7–6 (7–5), 6–2, 6–2 ರಿಂದ ಜಯಗಳಿಸಿ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್ಸ್‌ನ ಮೂರನೇ ಸುತ್ತಿಗೆ ಮುನ್ನಡೆದರು.
ಸ್ಪೇನ್‌ನ ಆಟಗಾರ ಮೊದಲ ಸೆಟ್‌ನಲ್ಲಿ 5–2 ರಿಂದ ಮುಂದಿದ್ದರು. ಆದರೆ ಚೇತರಿಸಿಕೊಂಡ ಶ್ರೇಯಾಂಕರಹಿತ ವುಕಿಕ್ ಎರಡು ಬಾರಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿದರಲ್ಲದೇ, ವುಕಿಕ್ 6–5ರಲ್ಲಿ ಸೆಟ್‌ಗಾಗಿ ಸರ್ವ್ ಮಾಡುವ ಹಂತಕ್ಕೆ ತಲುಪಿದರು. ಛಲಬಿಡದ ಅಲ್ಕರಾಜ್ ಸಕಾಲದಲ್ಲಿ ಪುಟಿದೆದ್ದು ಟೈಬ್ರೇಕರ್‌ನಲ್ಲಿ ಸೆಟ್ ಗೆದ್ದರು.
ಆದರೆ ಎರಡು ಮತ್ತು ಮೂರನೇ ಸೆಟ್‌ನಲ್ಲಿ ಲಯಕ್ಕೆ ಮರಳಿದ ಅಲ್ಕರಾಜ್ ಎದುರಾಳಿಗೆ ಕೇವಲ ನಾಲ್ಕು ಗೇಮ್‌ಗಳನ್ನು ಬಿಟ್ಟುಕೊಟ್ಟು ಒಂದು ಗಂಟೆ 48 ನಿಮಿಷಗಳವರೆ ನಡೆದ ಪಂದ್ಯ ಗೆದ್ದುಕೊಂಡರು. ಪ್ರಸ್ತುತ ವಿಶ್ವಕ್ರಮಾಂಕದಲ್ಲಿ 69ನೇ ಸ್ಥಾನದಲ್ಲಿರುವ ವುಕಿಕ್, ಕೆಲ ವರ್ಷಗಳ ಹಿಂದೆ ಫ್ರೆಂಚ್ ಓಪನ್ ಅರ್ಹತಾ ಸುತ್ತಿನಲ್ಲಿ, ಆಗ 17 ವರ್ಷ ವಯಸ್ಸಿನವರಾಗಿದ್ದ ಅಲ್ಕರಾಜ್ ಅವರನ್ನು ಮಣಿಸಿದ್ದರು.
ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಪ್ರಶಸ್ತಿಗಳನ್ನು ಸತತ ಎರಡು ಬಾರಿ ಗೆದ್ದುಕೊಂಡ ಆರನೇ ಆಟಗಾರನಾಗುವ ಪ್ರಯತ್ನದಲ್ಲಿ ಅಲ್ಕರಾಜ್ ಇದ್ದಾರೆ. ಈ ಹಿಂದೆ ರಾಡ್ ಲೇವರ್, ಬ್ಯೋನ್ ಬೋರ್ಗ್, ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಚ್ ಈ ಸಾಧನೆಗೆ ಪಾತ್ರರಾಗಿದ್ದರು.
ಸ್ಪೇನ್ ಆಟಗಾರನ ಮುಂದಿನ ಎದುರಾಳಿ ಅಮೆರಿಕದ ಫ್ರಾನ್ಸಿಸ್ ಟಿಯಾಫೊ. 2022ರಲ್ಲಿ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾದ ಅಮೆರಿಕ ಓಪನ್ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಅಲ್ಕರಾಜ್, ಟಿಯಾಫೊ ಅವರನ್ನು ಸೆಮಿಫೈನಲ್‌ನಲ್ಲಿ ಐದುಸೆಟ್‌ಗಳ ಕಠಿಣ ಹೋರಾಟದಲ್ಲಿ ಮಣಿಸಿದ್ದರು.
ಗಾಫ್ ಮುನ್ನಡೆ: ಅಮೆರಿಕದ ಕೊಕೊ ಗಾಫ್ ಒಂದನೇ ನಂಬರ್ ಕೋರ್ಟ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ, ಅರ್ಹತಾ ಸುತ್ತಿನಿಂದ ಬಂದ ಆಟಗಾರ್ತಿ ಅಂಕಾ ತೊಡೊನಿ (ರೊಮೇನಿಯಾ) ಅವರನ್ನು 6–2, 6–1ರಿಂದ ಹಿಮ್ಮೆಟ್ಟಿಸಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು.
ಗಾಫ್, ಐದು ವರ್ಷಗಳ ಹಿಂದೆ ವಿಂಬಲ್ಡನ್ ಮೂಲಕ ಗ್ರ್ಯಾನ್‌ಸ್ಲಾಮ್ ಟೂರ್ನಿಗೆ ಪದಾರ್ಪಣೆ ಮಾಡಿದಾಗ ಐದು ಬಾರಿಯ ವಿಂಬಲ್ಡನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅವರನ್ನು ಮೊದಲ ಸುತ್ತಿನಲ್ಲೇ ನೇರ ಸೆಟ್‌ಗಳಿಂದ ಸೋಲಿಸಿದ್ದರು. ಆದರೆ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿದ್ದರು.
ಎರಡನೇ ಶ್ರೇಯಾಂಕ ಪಡೆದಿರುವ ಗಾಫ್ ಮೂರನೇ ಸುತ್ತಿನಲ್ಲಿ ಕ್ವಾಲಿಫೈಯರ್ ಸೋನೆ ಕರ್ತಾಲ್ ಅವರನ್ನು ಎದುರಿಸಲಿದ್ದಾರೆ. ಇಂಗ್ಲೆಂಡ್‌ನ ಆಟಗಾರ್ತಿ ಕರ್ತಾಲ್ 6–3, 5–7, 6–3 ರಿಂದ ಫ್ರಾನ್ಸ್‌ನ ಕ್ಲಾರಾ ಬುರೆಲ್ ಅವರನ್ನು ಪರಾಭವಗೊಳಿಸಿದರು.
ಕರ್ತಾಲ್ ಮೊದಲ ಸುತ್ತಿನಲ್ಲಿ 29ನೇ ಶ್ರೇಯಾಂಕದ ಸೊರಾನ ಸಿರ್ಸ್ಟಿಯಾ ಅವರನ್ನು ಸೋಲಿಸಿದ್ದರು.
ಸುಮಿತ್ ನಗಾಲ್‌ಗೆ ಡಬಲ್ಸ್‌ನಲ್ಲೂ ಸೋಲು
ಲಂಡನ್: ಭಾರತದ ಸುಮಿತ್ ನಗಾಲ್ ಅವರು ವಿಂಬಲ್ಡನ್ ಪುರುಷರ ಡಬಲ್ಸ್‌ನಲ್ಲೂ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು. ಸರ್ಬಿಯಾದ ದುಸಾನ್ ಲಾಯೊವಿಚ್ ಜೊತೆಗೂಡಿ ಆಡಿದ ಅವರು ಸ್ಪೇನ್‌ನ ಎದುರಾಳಿಗಳಿಗೆ ನೇರ ಸೆಟ್‌ಗಳಿಂದ ಸೋತರು.
ಜಾಮೆ ಮುನರ್ ಮತ್ತು ಪೆಡ್ರೊ ಮಾರ್ಟಿನೆಝ್ ಜೋಡಿ ಬುಧವಾರ 6–2, 6–2 ರಿಂದ ನಗಾಲ್– ಲಾಯೊವಿಚ್ ಜೋಡಿಯನ್ನು ಮಣಿಸಿತು. ಪಂದ್ಯ 67 ನಿಮಿಷ ನಡೆಯಿತು. ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರರಾದ ನಗಾಲ್ ಮಂಗಳವಾರ ನಡೆದ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಮಿಯೊಮಿರ್ ಕೆಕ್ಮಾನೊವಿಕ್ (ಸರ್ಬಿಯಾ) ಅವರಿಗೆ ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಮಣಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.