ADVERTISEMENT

ಆಕರ್ಷಿಸುತ್ತಿದೆ ದೇವನಗರಿ ಟೆನಿಸ್‌ ಅಂಕಣ

ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿದ ನಗರ

ಚಂದ್ರಶೇಖರ ಆರ್‌.
Published 19 ಆಗಸ್ಟ್ 2022, 4:28 IST
Last Updated 19 ಆಗಸ್ಟ್ 2022, 4:28 IST
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿರುವ ಟೆನಿಸ್ ಕೋರ್ಟ್‌ – ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿರುವ ಟೆನಿಸ್ ಕೋರ್ಟ್‌ – ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರದಲ್ಲಿ ಸುಸಜ್ಜಿತ ಟೆನಿಸ್‌ ಕೋರ್ಟ್‌ಗಳಿದ್ದು, ದಾವಣಗೆರೆ ಈಗ ‘ಟೆನಿಸ್ ಹಬ್’ ಆಗಿ ಪರಿವರ್ತನೆಯಾಗುತ್ತಿದೆ.

ಇಲ್ಲಿ ನಾಲ್ಕು ಸಿಂಥೆಟಿಕ್ ಟೆನಿಸ್ ಕೋರ್ಟ್‍ಗಳಿವೆ. ಉತ್ತಮ ಕೋಚ್‌, ಕಡಿಮೆ ಶುಲ್ಕ ಇರುವುದರಿಂದ ಉದಯೋನ್ಮುಖ ಟೆನಿಸ್‌ ಆಟಗಾರರೆಲ್ಲರಿಗೂ ದಾವಣಗೆರೆ ಎಂದರೆ ಅಚ್ಚುಮೆಚ್ಚು.ಹೈಸ್ಕೂಲ್‌ ಮೈದಾನದ ಅಂಕಣದಲ್ಲಿ ಪ್ರತಿದಿನ 60ರಿಂದ 70ಕ್ಕೂ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಾರೆ. 300ಕ್ಕೂ ಹೆಚ್ಚು ಕ್ರೀಡಾಪಟುಗಳು ಇಲ್ಲಿ ತರಬೇತಿ ಪಡೆದಿದ್ದಾರೆ.

ಇಲ್ಲಿನ ಕ್ರೀಡಾ‍ಪಟುಗಳಿಗೆ ಉತ್ತೇಜನ ನೀಡಲು, ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಹಲವರ ಶ್ರಮದಿಂದ ನಗರದ ಹೈಸ್ಕೂಲ್‌ ಮೈದಾನದಲ್ಲಿ ಟೆನಿಸ್‌ ಅಂಕಣ ನಿರ್ಮಿಸಲಾಗಿದೆ.ಕ್ರೀಡಾಂಗಣದಲ್ಲಿ ಈಗಾಗಲೇ ಎರಡು ಐಟಿಎಫ್, ಒಂದು ಬಾರಿ ರಾಷ್ಟ್ರೀಯ, ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ADVERTISEMENT

ಇಲ್ಲಿನ ಹಲವು ಟೆನಿಸ್‌ ಪಟುಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆಲ್‌ ಇಂಡಿಯಾ ರ‍್ಯಾಂಕಿಂಗ್‌ ಕ್ರೀಡಾಪಟುಗಳಾದ ಅಲೋಕ್‌ ಆರಾಧ್ಯ, ರಿಭವ್‌ ರವಿಕಿರಣ್‌ ಇಲ್ಲಿಯೇ ತರಬೇತಿ ಪಡೆದವರು.ಮೈಸೂರು, ಕಲಬುರ್ಗಿ, ಧಾರವಾಡ, ಬೆಳಗಾವಿ ಸೇರಿ ಹಲವು ಜಿಲ್ಲೆಗಳ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಇಲ್ಲಿಗೆ ತರಬೇತಿಗಾಗಿ ಬರುತ್ತಾರೆ.

ಇಲ್ಲಿನ ಕ್ರೀಡಾಪಟುಗಳು ದೂರದ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲು 2002ರಲ್ಲಿ ಹೈಸ್ಕೂಲ್‌ ಮೈದಾನದಲ್ಲಿ ಟೆನಿಸ್‌ ಕೋರ್ಟ್‌ ನಿರ್ಮಿಸಲಾಯಿತು. ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ ಉದ್ಘಾಟಿಸಿದ್ದರು. ಜಾಗ ಸರ್ಕಾರಿ ಪ್ರೌಢಶಾಲೆಯದ್ದಾಗಿದ್ದು, ಅಭಿವೃದ್ಧಿ ಮತ್ತು ನಿರ್ವಹಣೆ ಜವಾಬ್ದಾರಿ ಜಿಲ್ಲಾ ಟೆನಿಸ್‌ ಅಸೋಸಿಯೇಷನ್‌ಗೆ ಒಳಪಟ್ಟಿದೆ.ಅಂತರರಾಷ್ಟ್ರೀಯ ಟೂರ್ನಿ ನಡೆಸಲು ಬೇಕಾದ ಎಲ್ಲ ಸೌಲಭ್ಯ ಇಲ್ಲಿದೆ.

ಸ್ಮಾರ್ಟ್‌ ಸಿಟಿಯಿಂದ ₹ 1.50 ಕೋಟಿ ವೆಚ್ಚದಲ್ಲಿ ಪೆವಿಲಿಯನ್‌ ಹಾಗೂ ನೆಲ ಅಂತಸ್ತಿನ ಚಿಕ್ಕ ಕಟ್ಟಡ ನಿರ್ಮಿಸಲಾಗಿದೆ.

‘ಇಲ್ಲಿ ತರಬೇತಿ ಪಡೆದ 6 ಜನ ಆಟಗಾರರು ರಾಷ್ಟ್ರಮಟ್ಟದಲ್ಲಿ ಶ್ರೇಯಾಂಕ ಪಡೆದಿದ್ದಾರೆ.ಅಂಕಣದ ನಿರ್ವಹಣೆ, ಪಂದ್ಯ ಆಯೋಜನೆ, ತರಬೇತಿ ಕಾರ್ಯವನ್ನು ನಮ್ಮ ಅಸೋಸಿಯೇಷನ್ ನೋಡಿಕೊಳ್ಳುತ್ತಿದೆ. ಅಂಕಣ ನಿರ್ಮಾಣವಾದ ತಕ್ಷಣ ಅದನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿಲ್ಲ. ಇದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗುತ್ತಿಲ್ಲ’ ಎಂದರು ಜಿಲ್ಲಾ ಟೆನಿಸ್ ಅಸೋಸಿಯೇಷನ್ಕಾರ್ಯದರ್ಶಿ ಕೆ.ಪಿ. ಚಂದ್ರಪ್ಪ.

2012ರಲ್ಲಿ ₹ 35 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗಿತ್ತು. ಒಮ್ಮೆ ನವೀಕರಣ ಮಾಡಲು ₹ 10 ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಬೆಂಗಳೂರಿನ ಟೆನಿಸ್‌ ಅಂಗಣದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುವ ಕನಸಿದೆ ಎಂದರು ಅವರು.

‘ಸರ್ಕಾರಿ ಪ್ರೌಢಶಾಲೆಯಿಂದ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿಗಳು ಮತ್ತು ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಅಂಕಣವನ್ನು ಆಗಾಗ ನವೀಕರಿಸುತ್ತಿರಬೇಕು. ಇದಕ್ಕೆ ಅಧಿಕ ಖರ್ಚು ತಗಲುತ್ತದೆ. ಮೂವರು ತರಬೇತಿದಾರರು ಇದ್ದಾರೆ. ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನೂ ನೀಡುತ್ತಿದ್ದೇವೆ.2012ರಲ್ಲಿ ಇಲ್ಲಿಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್‌ನಿಂದ ಟೂರ್ನಿ ನಡೆಸಲಾಗಿತ್ತು. ಮತ್ತೆ ನಡೆದಿಲ್ಲ. ಐಟಿಎಫ್‌ ಟೂರ್ನಿ ನಡೆಸಿದರೆ ಹೆಚ್ಚಿನ ಸೌಲಭ್ಯ ಕಲ್ಪಿಸಬಹುದು‌’ ಎಂದರು ಜಿಲ್ಲಾ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಎಸ್‌.ಎಂ. ಬ್ಯಾಡಗಿ.

ಕೋಚಿಂಗ್‌ಗೆ ದಾವಣಗೆರೆಗೆ 2 ನೇ ಸ್ಥಾನ ಇದೆ. ಟೂರ್ನಿ ನಡೆಸಿದರೆ ಉಳಿಯುವ ಹಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು. ಐಟಿಎಫ್ ಟೂರ್ನಿ ನಡೆಸಲು ಪ್ರೋತ್ಸಾಹ ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು ಅವರು.

‘ಇಲ್ಲಿ ತರಬೇತಿ ಪಡೆದ ನಾಲ್ವರು ರಾಷ್ಟ್ರಮಟ್ಟದ ಪಂದ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಅಂತರರಾಷ್ಟ್ರೀಯ ಪಂದ್ಯವನ್ನೂ ಆಡಿದ್ದಾರೆ. ದಾವಣಗೆರೆಯಲ್ಲೇ ಟೆನಿಸ್‌ ಆಡುವುದನ್ನು ಕಲಿತು ಬಂದಿದ್ದೇವೆ ಎಂದು ರಾಜ್ಯದ ಹಲವು ಹಿರಿಯ ಅಧಿಕಾರಿಗಳು ಮೆಚ್ಚುಗೆಯಿಂದ ಹೇಳುವಷ್ಟರ ಮಟ್ಟಿಗೆ ನಗರಕ್ಕೆ ಹೆಸರಿದೆ. ಆದರೆ, ಅನುದಾನದಿಂದ ವಂಚಿತವಾಗಿದೆ. ಹೆಚ್ಚು ಅನುದಾನ ಸಿಕ್ಕರೆ ಅಭಿವೃದ್ಧಿಯಿಂದ ಗಮನ ಸೆಳೆಯಲಿದೆ’ ಎಂದು ತರಬೇತುದಾರ ಮಹಾಂತೇಶ್‌ ಹೇಳಿದರು.

‘ಬೆಂಗಳೂರಿನಲ್ಲಿ ಒಂದು ಗಂಟೆ ಆಟವಾಡಲು ಅಧಿಕ ಶುಲ್ಕ ಇದೆ. ಇಲ್ಲಿ ಶುಲ್ಕ ಅತ್ಯಂತ ಕಡಿಮೆ. ಹೀಗಾಗಿ ಹಲವರು ಇಲ್ಲಿಗೆ ಬರುತ್ತಾರೆ.ಈ ರೀತಿಯಟೆನಿಸ್ಕೋರ್ಟ್‌ ಬೆಂಗಳೂರು ಹೊರತುಪಡಿಸಿದರೆ ದಾವಣಗೆರೆಯಲ್ಲಿ ಮಾತ್ರ ಇದೆ’ ಎಂದು ಕ್ರೀಡಾಪಟುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಟೂರ್ನಿ ನಡೆಯಲಿ

‘ಇಲ್ಲಿ ಅಂತರರಾಷ್ಟ್ರೀಯ ಟೂರ್ನಿ ನಡೆಸಿದರೆ ಅನುಕೂಲ. 2021ರಲ್ಲಿಭೇಟಿ ನೀಡಿದ್ದ ಕ್ರೀಡಾ ಸಚಿವ ನಾರಾಯಣಗೌಡ ಹಾಗೂ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಆರ್. ಅಶೋಕ್ ಈ ವರ್ಷದ ಜನವರಿಯಲ್ಲಿ ಪಂದ್ಯ ನಡೆಸುವುದಾಗಿ ತಿಳಿಸಿದ್ದರು. ಆದರೆ, ಸರ್ಕಾರದಿಂದ ಅನುದಾನ ಸಿಗಲಿಲ್ಲ. ಟೂರ್ನಿ ನಡೆಯಬಹುದೆಂದು ಅಂಕಣದ ನವೀಕರಣ ಸೇರಿ ಕೆಲ ಅಭಿವೃದ್ಧಿ ಕಾರ್ಯಗಳಿಗೆ ದಾನಿಗಳಿಂದ ಸಂಗ್ರಹಿಸಿದ್ದ ಹಣದಲ್ಲಿ ಅಪೂರ್ಣಗೊಂಡಿದ್ದ ಮೇಲಂತಸ್ತಿನ ಕಟ್ಟಡ ಪೂರ್ಣಗೊಳಿಸಿದೆವು. ಆದರೆ, ಪಂದ್ಯ ನಡೆಯಲೇ ಇಲ್ಲ’ ಎಂದು ಕೆ.ಪಿ. ಚಂದ್ರಪ್ಪ ಹೇಳಿದರು.

ಇಲ್ಲಿನ ಟೆನಿಸ್ ಅಂಗಣಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು ನಂತರದ ಎರಡನೇ ಸ್ಥಾನ ದಾವಣಗೆರೆಗೆ ಇದೆ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದಾರೆ.

–ಮಹಾಂತೇಶ್‌, ಟೆನಿಸ್‌ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.