ADVERTISEMENT

ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್‌ ಟೂರ್ನಿ: ದಿಟ್ಟ ಆಟವಾಡಿ ಸೋತ ಧಾಮನೆ

ಪಿಟಿಐ
Published 2 ಜನವರಿ 2023, 12:25 IST
Last Updated 2 ಜನವರಿ 2023, 12:25 IST
ಮಾನಸ್‌ ಧಾಮನೆ
ಮಾನಸ್‌ ಧಾಮನೆ   

ಪುಣೆ: ಉದಯೋನ್ಮುಖ ಆಟಗಾರ, ಭಾರತದ ಮಾನಸ್‌ ಧಾಮನೆ ಅವರು ಇಲ್ಲಿ ನಡೆಯುತ್ತಿರುವ ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತರು. ಆದರೆ 15 ವರ್ಷದ ಆಟಗಾರ ತೋರಿದ ದಿಟ್ಟ ಆಟ ಗಮನಸೆಳೆಯಿತು.

ಸೋಮವಾರ ಆರಂಭವಾದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಪ್ರತಿಭೆ ಮಾನಸ್‌ 2-6 4-6ರಿಂದ ಅಮೆರಿಕದ ಮೈಕೆಲ್‌ ಮೊಹ್ ಎದುರು ಸೋಲನುಭವಿಸಿದರು.

ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿರುವ ಮಾನಸ್‌, ವಿಶ್ವ ಕ್ರಮಾಂಕದಲ್ಲಿ 115ನೇ ಸ್ಥಾನದಲ್ಲಿರುವ, ತನಗಿಂತ ದೈಹಿಕವಾಗಿ ಬಲಿಷ್ಠವಾಗಿರುವ ಆಟಗಾರನ ಎದುರು ಪ್ರಬುದ್ಧತೆಯ ಆಟ ತೋರಿದರು.

ADVERTISEMENT

ರ‍್ಯಾಲಿಗಳಲ್ಲಿ ಸ್ವಲ್ಪ ಮಂಕಾದರೂ ಮಾನಸ್‌ ಅವರ ಕೆಲವು ಬ್ಯಾಕ್‌ಹ್ಯಾಂಡ್‌ ಮತ್ತು ಫೋರ್‌ಹ್ಯಾಂಡ್‌ ಹೊಡೆತಗಳು ಆಕರ್ಷಕವಾಗಿದ್ದವು.

‘ಇಂತಹ ಪೈಪೋಟಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಮಾನಸ್‌ ಆಟ ಅಚ್ಚರಿ ತಂದಿತು. ಆತನಿಗೆ ಉತ್ತಮ ಭವಿಷ್ಯವಿದೆ‘ ಎಂದು ಪಂದ್ಯದ ನಂತರ 24 ವರ್ಷದ ಮೊಹ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.