
ಬೆಂಗಳೂರು: ಕರ್ನಾಟಕದ ಧನುಷ್ ಎಸ್.ಎಂ. ಮತ್ತು ರೂಹಿ ಸಿಂಗ್ ಅವರು ಎಐಟಿಎ 12 ವರ್ಷದೊಳಗಿನವರ ರಾಷ್ಟ್ರೀಯ ಸರಣಿಯ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ನಗರದ ಜಕ್ಕೂರಿನ ಇನ್‌ಫಿನಿಟಿ ಟೆನಿಸ್ ಅಕಾಡೆಮಿಯಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಧನುಷ್ 6-4, 6-1ರಲ್ಲಿ ನೇರ ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ಆದಿಶ್ ಪಿ.ಎಂ. (ತಮಿಳುನಾಡು) ಅವರನ್ನು ಮಣಿಸಿದರು.
ಬಾಲಕಿಯರ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ರೂಹಿ 2-6, 6-4, 6-3 ರಿಂದ ಎರಡನೇ ಶ್ರೇಯಾಂಕದ ಅನೀಕ್ಷಾ ಜಿ. (ತೆಲಂಗಾಣ) ಅವರಿಗೆ ಆಘಾತ ನೀಡಿದರು.
ಧನುಷ್ ಅವರು ಗುಜರಾತ್‌ನ ರಿಯಾನ್ ನಂದಕುಮಾರ್ ಅವರ ಜೊತೆಗೂಡಿ ಬಾಲಕರ ಡಬಲ್ಸ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. ಈ ಜೋಡಿಯು ಫೈನಲ್‌ನಲ್ಲಿ 7-6(4), 7-5 ರಿಂದ ಬಿ.ಸಿ. ತನುಷ್ ಶೇಖರ್ ಮತ್ತು ಆದಿಶ್ (ಕರ್ನಾಟಕ–ತಮಿಳುನಾಡು) ಅವರನ್ನು ಮಣಿಸಿತು.
ಬಾಲಕಿಯರ ಡಬಲ್ಸ್ ಪ್ರಶಸ್ತಿ ಸುತ್ತಿನಲ್ಲಿ ಅನೀಷಾ ಮರಿಯನ್ ಕಾರ್ನೆಲಿಯೊ ಮತ್ತು ಅನೀಕ್ಷಾ (ಕರ್ನಾಟಕ–ತೆಲಂಗಾಣ) ಜೋಡಿಯು 6-4, 5-7, 10-4 ರಿಂದ ಕಾಶ್ವಿ ವೆಂಕಟ್ ಮತ್ತು ರೂಹಿ ಸಿಂಗ್ (ಕರ್ನಾಟಕ) ಅವರನ್ನು ಮಣಿಸಿ ಚಾಂಪಿಯನ್ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.