ADVERTISEMENT

ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ಜೊಕೊವಿಚ್‌

ಎಟಿಪಿ ಫೈನಲ್ಸ್ ಟೆನಿಸ್‌ ಟೂರ್ನಿ: ಅಲೆಕ್ಸಾಂಡರ್‌ ಜ್ವೆರೆವ್‌ಗೆ ನಿರಾಸೆ

ಏಜೆನ್ಸೀಸ್
Published 21 ನವೆಂಬರ್ 2020, 12:51 IST
Last Updated 21 ನವೆಂಬರ್ 2020, 12:51 IST
ನೊವಾಕ್‌ ಜೊಕೊವಿಚ್‌ ಆಟದ ವೈಖರಿ–ರಾಯಿಟರ್ಸ್ ಚಿತ್ರ
ನೊವಾಕ್‌ ಜೊಕೊವಿಚ್‌ ಆಟದ ವೈಖರಿ–ರಾಯಿಟರ್ಸ್ ಚಿತ್ರ   

ಲಂಡನ್‌: ಅಲೆಕ್ಸಾಂಡರ್‌ ಜ್ವೆರೆವ್‌ ಅವರಿಗೆ ಸೋಲುಣಿಸಿದ ನೊವಾಕ್‌ ಜೊಕೊವಿಚ್‌ ಅವರು ಎಟಿಪಿ ಫೈನಲ್ಸ್ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಸರ್ಬಿಯಾ ಆಟಗಾರನಿಗೆ 6–3, 7–6ರಿಂದ ಜಯ ಒಲಿಯಿತು. ಇದರೊಂದಿಗೆ ವರ್ಷಾಂತ್ಯದಲ್ಲಿ ನಡೆಯುವ ಟೂರ್ನಿಯಲ್ಲಿ ಆರನೇ ಪ್ರಶಸ್ತಿ ಗೆದ್ದು ರೋಜರ್‌ ಫೆಡರರ್‌ ಅವರ ದಾಖಲೆ ಸರಿಗಟ್ಟುವತ್ತ ಜೊಕೊವಿಚ್‌ ದಿಟ್ಟ ಹೆಜ್ಜೆ ಇಟ್ಟರು.

ರೌಂಡ್‌ ರಾಬಿನ್‌ ಮಾದರಿಯ ಟೂರ್ನಿಯ ಎರಡನೇ ಪಂದ್ಯದಲ್ಲಿ ಡೇನಿಯಲ್‌ ಮೆಡ್ವೆಡೆವ್‌ ಅವರಿಗೆ ಮಣಿದಿದ್ದ ಜೊಕೊವಿಚ್‌, ಈ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಿದರು.

ಜರ್ಮನಿಯ ಜ್ವೆರೆವ್ ಎದುರು ಮೂರು ಬ್ರೇಕ್‌ ಪಾಯಿಂಟ್‌ಗಳನ್ನು ಜೊಕೊವಿಚ್‌ ಉಳಿಸಿಕೊಂಡರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅವರಿಗೆ ಡಾಮಿನಿಕ್‌ ಥೀಮ್ ಅವರ ಸವಾಲು ಎದುರಾಗಿದೆ.

ADVERTISEMENT

ಒ2 ಅರೆನಾದಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಡೇನಿಯಲ್‌ ಮೆಡ್ವೆಡೆವ್ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ರಫೆಲ್‌ ನಡಾಲ್‌ ಅವರನ್ನು ಎದುರಿಸಲಿದ್ದಾರೆ.

ಸೆಮಿಫೈನಲ್‌ ತಲುಪಿರುವ ನಾಲ್ವರೂ ರ‍್ಯಾಂಕಿಂಗ್‌ನಲ್ಲಿ ಅಗ್ರ ನಾಲ್ಕು ಸ್ಥಾನಗಳಲ್ಲಿ ಇರುವವರೇ ಆಗಿದ್ದಾರೆ.

‘ನಿರ್ಣಾಯಕ ಸಂದರ್ಭಗಳಲ್ಲಿ ಸೂಕ್ತ ಹೊಡೆತಗಳನ್ನು ಪ್ರಯೋಗಿಸಲು ಸಾಧ್ಯವಾಗಿದ್ದರಿಂದ ಯಶಸ್ಸು ಸಿಕ್ಕಿತು‘ ಎಂದು ಪಂದ್ಯದ ಬಳಿಕ ಜೊಕೊವಿಚ್‌ ಪ್ರತಿಕ್ರಿಯಿಸಿದರು.

ಈ ಬಾರಿಯ ಅಮೆರಿಕ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಡಾಮಿನಿಕ್‌ ಥೀಮ್‌ ಅವರು ಸೆಮಿಫೈನಲ್‌ನಲ್ಲಿ ತನಗೆ ಕಠಿಣ ಎದುರಾಳಿ ಎಂದು ಜೊಕೊವಿಚ್‌ ಹೇಳಿದ್ದಾರೆ.

ಅಷ್ಟೇನೂ ಮಹತ್ವ ಇಲ್ಲದ ಇನ್ನೊಂದು ಪಂದ್ಯದಲ್ಲಿ ಡೇನಿಯಲ್‌ ಮೆಡ್ವೆಡೆವ್ ಅವರು 6–3, 6–3ರಿಂದ ಡಿಗೊ ಸ್ವಾರ್ಟ್ಜ್‌ಮನ್ ಅವರನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.