ADVERTISEMENT

ಹೋಟೆಲ್ ಬದಲಿಗೆ ಮನೆ ಬಾಡಿಗೆಗೆ ಪಡೆದ ಜೊಕೊವಿಚ್

ಸತತ 25 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಸರ್ಬಿಯಾ ಆಟಗಾರ; ಕ್ವಿಟೋವಾ, ಕೆರ್ಬರ್‌ ಮೂರನೇ ಸುತ್ತಿಗೆ

ಏಜೆನ್ಸೀಸ್
Published 3 ಸೆಪ್ಟೆಂಬರ್ 2020, 14:51 IST
Last Updated 3 ಸೆಪ್ಟೆಂಬರ್ 2020, 14:51 IST
ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ
ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡಲು ಬಂದಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಹೋಟೆಲ್ ಕೊಠಡಿಯಲ್ಲಿ ಉಳಿದುಕೊಳ್ಳುವ ಬದಲು ಮನೆಯನ್ನೇ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇದಕ್ಕೆ ₹ 30 ಲಕ್ಷ ಮೊತ್ತವನ್ನೂ ಪಾವತಿಸುತ್ತಿದ್ದಾರೆ.

ಬುಧವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್ ಬ್ರಿಟನ್‌ನ ಕೈಲ್ ಎಡ್ಮಂಡ್ ವಿರುದ್ಧ 6–7(5), 6–3, 6–4, 6–2ರಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಈ ಬಾರಿ ಆಡಿದ ಎಲ್ಲ 25 ಪಂದ್ಯಗಳಲ್ಲೂ ಜಯ ಗಳಿಸಿದ ಸಾಧನೆ ಮಾಡಿದರು. 2011ರಲ್ಲಿ ಅವರು 40 ಪಂದ್ಯಗಳಲ್ಲಿ ಅಜೇಯರಾಗಿದ್ದರು.

ಪಂದ್ಯದ ನಂತರ ಮಾತನಾಡಿ ‘ನಿಗದಿತ ಹೋಟೆಲ್ ಕೊಠಡಿಯಲ್ಲೇ ಇರಬೇಕೆಂದೇನೂ ಇಲ್ಲ, ಮನೆಗಳಲ್ಲೂ ಇರಬಹುದು ಎಂಬ ಅವಕಾಶವನ್ನು ಕಲ್ಪಿಸಿದ್ದರಿಂದ ಖುಷಿಯಾಯಿತು. ಈ ವಿಷಯ ತಿಳಿದ ಕೂಡಲೇ ಮನೆ ಬಾಡಿಗೆ ಪಡೆದೆ. ಈ ಅವಕಾಶ ಎಲ್ಲರಿಗೂ ಇದೆ. ಆದರೆ ಕೆಲವರು ಮಾತ್ರ ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ADVERTISEMENT

‌ಮೊದಲ ಸೆಟ್‌ನಲ್ಲಿ ಇಬ್ಬರೂ ಆಟಗಾರರು ಜಿದ್ದಾಜಿದ್ದಿಯ ಹೋರಾಟ ನಡೆಸಿದರು. ಆದರೆ ಅಂತಿಮವಾಗಿ ಕೈಲ್ ಎಡ್ಮಂಡ್‌ಗೆ ಜಯ ಒಲಿಯಿತು. ಟೈ ಬ್ರೇಕರ್‌ನಲ್ಲಿ ಏಸ್ ಸಿಡಿಸಿ ಅವರು ನಗೆಸೂಸಿದರು. 18ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದಿರುವ ನೊವಾಕ್ ಎರಡನೇ ಸೆಟ್‌ನಲ್ಲಿ ಚೇತರಿಸಿಕೊಂಡು ತಿರುಗೇಟು ನೀಡಿದರು. ಮೂರನೇ ಸೆಟ್‌ನಲ್ಲಿ ಎಡ್ಮಂಡ್ ಕೊಂಚ ಪ್ರತಿರೋಧ ತೋರಿದರು. ಆದರೆ ಜೊಕಿವಿಚ್ ಸೆಟ್ ಗೆದ್ದು 2–1ರ ಮುನ್ನಡೆ ಸಾಧಿಸಿದರು. ನಿರ್ಣಾಯಕ ನಾಲ್ಕನೇ ಸೆಟ್‌ನಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ಎಡ್ಮಂಡ್‌ಗೆ ನಿರಾಸೆ ಮೂಡಿಸಿ ಜೊಕೊವಿಚ್ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಅಲೆಕ್ಸಾಂಡರ್ ಜ್ವೆರೆವ್‌ಗೆ ಗೆಲುವು

ಐದನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ಅಮೆರಿಕದ ಬ್ರೆಂಡನ್ ನಕಶಿಮಾ ಅವರ ಸವಾಲು ಮೆಟ್ಟಿನಿಂತು ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತು ಪ್ರವೇಶಿಸಿದರು. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಜ್ವೆರೆವ್ 7–5, 6–7(8), 6–3, 6–1ರಲ್ಲಿ ಜಯ ಗಳಿಸಿದರು. ಬ್ರೆಂಡನ್ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು.

ಕ್ವಿಟೋವಾ, ಕೆರ್ಬರ್‌ ಜಯಭೇರಿ

ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಮತ್ತು ಜರ್ಮನಿಯ ಏಂಜಲಿಕ್ ಕೆರ್ಬರ್ ಗೆಲುವು ಸಾಧಿಸಿದರು. ಪೆಟ್ರಾ ಅವರು ಉಕ್ರೇನ್‌ನ ಕ್ಯಾತೆರಿನಾ ಕೊಜಿಯೊವಾ ವಿರುದ್ಧ 7–6(7/3), 6–2ರಲ್ಲಿ ಜಯ ಗಳಿಸಿದರೆ, ಕೆರ್ಬರ್ ಜರ್ಮನಿಯ ಅನಾ ಲಿನಾ ಫ್ರೀಡ್ಸಂ ಅವರನ್ನು 6–3, 7–6 (8/6)ರಲ್ಲಿ ಮಣಿಸಿದರು.

ದಿವಿಜ್ ಶರಣ್ ಜೋಡಿಗೆ ಸೋಲು

ಭಾರತದ ದಿವಿಜ್ ಶರಣ್ ಮತ್ತು ಸರ್ಬಿಯಾದ ನಿಕೋಲಾ ಕಾಸಿಕ್ ಜೋಡಿ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ನಿಕೋಲಾ ಮೆಕ್ಟಿಕ್ ಮತ್ತು ವೆಸ್ಲಿ ಕೋಲಾಫ್ ಎದುರು ಸೋರು ಹೊರಬಿದ್ದರು. ಬುಧವಾರ ರಾತ್ರಿ ನಡೆದ 46 ನಿಮಿಷಗಳ ಹಣಾಹಣಿಯಲ್ಲಿ ದಿವಿಜ್–ನಿಕೋಲಾ ಅವರು 6–4, 3–6, 3–6ರಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.