ADVERTISEMENT

ವಿಂಬಲ್ಡನ್ ಟೆನಿಸ್: ಫೈನಲ್‌ಗೆ ಜೊಕೊವಿಚ್ ಲಗ್ಗೆ

ಯಿಫಾನ್‌–ಗಾಬ್ರಿಯೆಲಾ ಜೋಡಿಗೆ ಮಣಿದ ಝೆಕ್ ಆಟಗಾರ್ತಿಯರು

ಏಜೆನ್ಸೀಸ್
Published 12 ಜುಲೈ 2019, 20:00 IST
Last Updated 12 ಜುಲೈ 2019, 20:00 IST
ಚೆಂಡು ರಿಟರ್ನ್ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ ಜೊಕೊವಿಚ್ ಕೈಯಿಂದ ಜಾರಿದ ರ‍್ಯಾಕೆಟ್ –ರಾಯಿಟರ್ಸ್ ಚಿತ್ರ
ಚೆಂಡು ರಿಟರ್ನ್ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ ಜೊಕೊವಿಚ್ ಕೈಯಿಂದ ಜಾರಿದ ರ‍್ಯಾಕೆಟ್ –ರಾಯಿಟರ್ಸ್ ಚಿತ್ರ   

ಲಂಡನ್‌: ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್ ಅವರ ಸವಾಲನ್ನು ಮೀರಿ ನಿಂತ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದರು.

ಆಲ್‌ ಇಂಗ್ಲೆಂಡ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 6–2, 4–6, 6–3, 6–2ರಲ್ಲಿ ಗೆದ್ದರು. ವಿಂಬಲ್ಡನ್‌ನಲ್ಲಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಜೊಕೊವಿಚ್‌ ಈ ಮೂಲಕ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಲ್ಲಿ 25ನೇ ಫೈನಲ್ ಆಡುವ ಅವಕಾಶ ಗಿಟ್ಟಿಸಿಕೊಂಡರು. ಭಾನುವಾರ ನಡೆಲಿರುವ ಫೈನಲ್‌ನಲ್ಲಿ ಗೆದ್ದರೆ ಅವರು ಪ್ರಮುಖ ಟೂರ್ನಿಗಳಲ್ಲಿ 16ನೇ ಪ್ರಶಸ್ತಿ ಗೆದ್ದಂತಾಗಲಿದೆ.‌

ಜೊಕೊವಿಚ್ ಪಂದ್ಯ ವೀಕ್ಷಿಸಲು ಗಣ್ಯರು ಕುಳಿತುಕೊಳ್ಳುವ ಬಾಕ್ಸ್‌ನಲ್ಲಿ ಹಿರಿಯ ಆಟಗಾರರು ಮತ್ತು ಚಿತ್ರ ನಟರು ಕಿಕ್ಕಿರಿದು ತುಂಬಿದ್ದರು. ಅವರ ಸಮ್ಮುಖದಲ್ಲಿ ಅಮೋಘ ಆಟವಾಡಿದ ಜೊಕೊವಿಚ್‌ ಎರಡು ಮತ್ತು ಎಂಟನೇ ಗೇಮ್‌ಗಳಲ್ಲಿ ಬ್ರೇಕ್ ಪಾಯಿಂಟ್ ಕಲೆ ಹಾಕಿ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು. ಹೀಗಾಗಿ ಪಂದ್ಯ ಬೇಗ ಮುಗಿಯಬಹುದು ಎಂಬ ನಿರೀಕ್ಷೆ ಮೂಡಿತು. ಆದರೆ ಈ ವರ್ಷ ಎರಡು ಬಾರಿ ಜೊಕೊವಿಚ್ ವಿರುದ್ಧ ಗೆದ್ದಿರುವ ಬಾಟಿಸ್ಟಾ ಪಟ್ಟು ಬಿಡಲಿಲ್ಲ. ಎರಡನೇ ಸೆಟ್‌ನ ಆರಂಭದಲ್ಲಿ 2–1ರಿಂದ ಮುನ್ನಡೆದ ಅವರು ಪ್ರಬಲ ಪೈಪೋಟಿ ಒಡ್ಡಿದರು. ಐದನೇ ಗೇಮ್‌ನಲ್ಲಿ ಇಬ್ಬರೂ ಆಟಗಾರರು ಛಲದಿಂದ ಕಾದಾಡಿದರು. 23 ಶಾಟ್‌ಗಳನ್ನು ಕಂಡ ಈ ಗೇಮ್‌ನಲ್ಲಿ ಜೊಕೊವಿಚ್‌ ಎರಡು ಬ್ರೇಕ್ ಪಾಯಿಂಟ್ ಕಲೆ ಹಾಕಿದರು. ಆದರೆ ಕೊನೆಯಲ್ಲಿ ಬಾಟಿಸ್ಟಾ ಸೆಟ್ ಗೆದ್ದು ಸಮಬಲ ಸಾಧಿಸಿದರು.

ADVERTISEMENT

ಪ್ರಬಲ ತಿರುಗೇಟು ನೀಡಿದ ಜೊಕೊವಿಚ್‌: ಮುಂದಿನ ಎರಡು ಸೆಟ್‌ಗಳಲ್ಲಿ ಜೊಕೊವಿಚ್ ಪ್ರಬಲ ತಿರುಗೇಟು ನೀಡಿದರು. ಮೂರನೇ ಸೆಟ್‌ನಲ್ಲಿ 4–2ರ ಮುನ್ನಡೆ ಗಳಿಸಿದ ಅವರಿಗೆ ನಂತರ ಭಾರಿ ಪೈಪೋಟಿ ಎದುರಾಯಿತು.

ಆದರೆ 45 ಶಾಟ್‌ಗಳಿಗೆ ಸಾಕ್ಷಿಯಾದ ಏಳನೇ ಗೇಮ್‌ನಲ್ಲಿ ಗೆದ್ದು ಮುನ್ನಡೆಯತ್ತ ಹೆಜ್ಜೆ ಹಾಕಿದರು. ಸ್ವಯಂ ತಪ್ಪುಗಳನ್ನು ಎಸಗಿದ ಬಾಟಿಸ್ಟಾ ಸೆಟ್‌ನಲ್ಲಿ ಹಿನ್ನಡೆಗೆ ಒಳಗಾದರು.

ನಿರ್ಣಾಯಕ ಸೆಟ್‌ನಲ್ಲಿ ಮೊದಲ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್‌ಗಳನ್ನು ಗಳಿಸಲು ಪ್ರಯತ್ನಿಸಿದ ಬಾಟಿಸ್ಟಾ ನಂತರ ಜೊಕೊವಿಚ್ ಸಾಮರ್ಥ್ಯದ ಎದುರು ಮಂಕಾದರು. ಎರಡನೇ ಗೇಮ್‌ನಿಂದ ಹಿಡಿತ ಬಿಗಿ ಮಾಡಿದ ಜೊಕೊವಿಚ್ 4–1ರ ಮುನ್ನಡೆ ಸಾಧಿಸಿದರು. ನಂತರ ಸುಲಭವಾಗಿ ಸೆಟ್ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಕ್ಸು ಯಿಫಾನ್‌, ಗಾಬ್ರಿಯೆಲಾ ಜೋಡಿಗೆ ಜಯ: ಮಹಿಳೆಯರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್‌, ಝೆಕ್ ಗಣರಾಜ್ಯದ ಬಾರ್ಬೋರಾ ಕ್ರೆಜಿಕೋವ ಮತ್ತು ಕ್ಯಾಥರಿನಾ ಸಿನಿಯಾಕೋವ ಜೋಡಿ ನಿರಾಸೆ ಅನುಭವಿಸಿತು. ಶುಕ್ರವಾರ ನಡೆದ ನಾಲ್ಕರ ಘಟ್ಟದ ಮೊದಲ ‍ಪಂದ್ಯದಲ್ಲಿ ಈ ಜೋಡಿಯನ್ನು ಚೀನಾದ ಕ್ಸು ಯಿಫಾನ್ ಮತ್ತು ಕೆನಡಾದ ಗಾಬ್ರಿಯೆಲಾ ದಬ್ರೊವ್‌ಸ್ಕಿ 6–1, 3–6, 6–3ರಿಂದ ಮಣಿಸಿದರು. ಯಿಫಾನ್‌ ಮತ್ತು ದಬ್ರೊವ್‌ಸ್ಕಿ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯೊಂದರಲ್ಲಿ
ಫೈನಲ್‌ ಪ್ರವೇಶಿಸುತ್ತಿರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.