ADVERTISEMENT

ಇಂದಿನಿಂದ ಫೆಡ್‌ ಕಪ್‌ ಟೆನಿಸ್‌ ಟೂರ್ನಿ: ಸಾನಿಯಾ, ಅಂಕಿತಾ ಆಕರ್ಷಣೆ

ಭಾರತಕ್ಕೆ ಚೀನಾ ಸವಾಲು

ಪಿಟಿಐ
Published 2 ಮಾರ್ಚ್ 2020, 16:43 IST
Last Updated 2 ಮಾರ್ಚ್ 2020, 16:43 IST
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ   

ದುಬೈ: ಅನುಭವಿ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಅವರು ಮಂಗಳವಾರದಿಂದ ಆರಂಭವಾಗುವ ಫೆಡ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಭಾರತಕ್ಕೆ ಗೆಲುವು ತಂದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

ಇಲ್ಲಿನ ಏವಿಯೇಷನ್‌ ಕ್ಲಬ್‌ ಅಂಗಳದಲ್ಲಿ ನಡೆಯುವ ಏಷ್ಯಾ ಒಸೀನಿಯಾ ವಲಯದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಚೀನಾ ವಿರುದ್ಧ ಸೆಣಸಲಿದೆ.

ನಂತರದ ಪಂದ್ಯಗಳಲ್ಲಿ ಭಾರತಕ್ಕೆ, ಉಜ್ಬೆಕಿಸ್ತಾನ (ಬುಧವಾರ), ದಕ್ಷಿಣ ಕೊರಿಯಾ (ಗುರುವಾರ), ಚೀನಾ ತೈಪೆ (ಶುಕ್ರವಾರ) ಹಾಗೂ ಇಂಡೊನೇಷ್ಯಾ (ಶನಿವಾರ) ತಂಡಗಳ ಸವಾಲು ಎದುರಾಗಲಿದೆ. ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಏಪ್ರಿಲ್‌ 17 ಮತ್ತು 18ರಂದು ನಡೆಯುವ ‘ಪ್ಲೇ ಆಫ್‌’ ಹಂತಕ್ಕೆ ಅರ್ಹತೆ ಗಳಿಸಲಿವೆ.

ADVERTISEMENT

ಟೂರ್ನಿಯಲ್ಲಿ ಅತಿ ಹೆಚ್ಚು ವರ್ಷ (10) ಭಾಗವಹಿಸಿದ ಭಾರತದ ಆಟಗಾರ್ತಿ ಎಂಬ ಹಿರಿಮೆ ಹೊಂದಿರುವ ಸಾನಿಯಾ, ಆಡಿರುವ 16 ಪಂದ್ಯಗಳ ಪೈಕಿ 11ರಲ್ಲಿ ಗೆದ್ದಿದ್ದಾರೆ. ನಾಲ್ಕು ವರ್ಷಗಳ ಬಿಡುವಿನ ಬಳಿಕ ಮತ್ತೊಮ್ಮೆ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಅವರು ಡಬಲ್ಸ್‌ನಲ್ಲಿ ಮಿಂಚುವ ನಿರೀಕ್ಷೆ ಇದೆ.

ಸಿಂಗಲ್ಸ್‌ ವಿಭಾಗದಲ್ಲಿ ಅಂಕಿತಾ, ಭಾರತದ ಬೆನ್ನೆಲುಬಾಗಿದ್ದಾರೆ. ಈ ಋತುವಿನಲ್ಲಿ ಎರಡು ಐಟಿಎಫ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿರುವ ಅವರು ಡಬಲ್ಸ್‌ನಲ್ಲೂ ಮೋಡಿ ಮಾಡಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 160ನೇ ಸ್ಥಾನದಲ್ಲಿರುವ ಅವರು ಅಮೋಘ ಲಯದಲ್ಲಿದ್ದು, ಚೀನಾದ ಆಟಗಾರ್ತಿಯರಿಗೆ ಆಘಾತ ನೀಡುವ ವಿಶ್ವಾಸ ಹೊಂದಿದ್ದಾರೆ.

ರಿಯಾ ಭಾಟಿಯಾ ಮತ್ತು ಕರ್ಮನ್‌ ಕೌರ್‌ ಥಾಂಡಿ ಅವರ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 50ರೊಳಗೆ ಸ್ಥಾನ ಪಡೆದಿರುವ ಮೂವರು ಆಟಗಾರ್ತಿಯರು ಚೀನಾ ತಂಡದಲ್ಲಿದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿರುವ ಕ್ವಿಯಾಂಗ್‌ ವಾಂಗ್‌ (29), ಸಾಯ್‌ಸಾಯ್‌ ಜೆಂಗ್‌ (34) ಮತ್ತು ಜಾಂಗ್‌ ಶೂಯಿ (35) ಅವರು ಭಾರತದ ಆಟಗಾರ್ತಿಯರ ವಿರುದ್ಧ ಪ್ರಾಬಲ್ಯ ಮೆರೆಯಲು ಕಾತರರಾಗಿದ್ದಾರೆ.

‘ಸಾನಿಯಾ ಮತ್ತು ಅಂಕಿತಾ ತಂಡದ ಶಕ್ತಿಯಾಗಿದ್ದಾರೆ. ಇವರು ಎಲ್ಲಾ ಪಂದ್ಯಗಳಲ್ಲೂ ಪರಿಣಾಮಕಾರಿಯಾಗಿ ಆಡುವ ವಿಶ್ವಾಸ ಇದೆ. ಈ ಬಾರಿ ‘ಪ್ಲೇ ಆಫ್‌’ ಪ್ರವೇಶಿಸುವುದು ನಮ್ಮ ಗುರಿ. ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ’ ಎಂದು ಭಾರತ ತಂಡದ ನಾಯಕ ವಿಶಾಲ್‌ ಉಪ್ಪಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.