ರೋಹನ್ ಬೋಪಣ್ಣ
(ಪಿಟಿಐ ಸಂಗ್ರಹ ಚಿತ್ರ)
ಪ್ಯಾರಿಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ ತಮ್ಮ ತಮ್ಮ ಜೊತೆಗಾರರೊಂದಿಗೆ ದ್ವಿತೀಯ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಜೆಕ್ ಗಣರಾಜ್ಯದ ಆ್ಯಡಂ ಪಾವ್ಲಾಸೆಕ್ ಅವರೊಂದಿಗೆ ಕಣಕ್ಕಿಳಿದಿರುವ ಬೋಪಣ್ಣ, ಅಮೆರಿಕದ ರಾಬರ್ಟ್ ಕ್ಯಾಶ್ ಮತ್ತು ಜೆಜೆ ಟ್ರಾಸಿ ವಿರುದ್ಧ 7-6(8), 5-7, 6-1ರ ಕಠಿಣ ಅಂತರದಲ್ಲಿ ಜಯಿಸಿದ್ದಾರೆ.
ಎರಡು ತಾಸು 11 ನಿಮಿಷಗಳವರೆಗೂ ಸಾಗಿದ ಜಿದ್ದಾಜಿದ್ದಿನ ಹೋರಾಟದ ಅಂತಿಮದಲ್ಲಿ ಬೋಪಣ್ಣ ಜೋಡಿ ಗೆಲುವಿನ ನಗೆ ಬೀರಿತು.
ಮತ್ತೊಂದೆಡೆ ಮೆಕ್ಸಿಕೊದ ಮಿಗುಯೆಲ್ ಏಂಜೆಲ್ ರೆಯೆಸ್–ವರೆಲಾ ಅವರೊಂದಿಗೆ ಸ್ಪರ್ಧೆಗಿಳಿದಿರುವ ಬಾಲಾಜಿ, ಚೀನಾದ ಯುನ್‌ಚಾವೊಕೆಟ್ ಬು ಹಾಗೂ ಅರ್ಜೆಂಟೀನಾದ ಕ್ಯಾಮಿಲೊ ಉಗೊ ಕ್ಯಾರಬೆಲ್ಲಿ ವಿರುದ್ಧ 6-2, 6-1ರ ವಿರುದ್ಧ ಸುಲಭ ಜಯ ದಾಖಲಿಸಿತು.
ಈ ಭಾರತೀಯ ಜೋಡಿ 51 ನಿಮಿಷಗಳಲ್ಲಿ ಪಂದ್ಯವನ್ನು ವಶಪಡಿಸಿಕೊಂಡಿತು.
ಇದರೊಂದಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮೂವರು ಆಟಗಾರರು ಅಂತಿಮ 32ರ ಹಂತವನ್ನು ತಲುಪಿದಂತಾಯಿತು.
ಅಮೆರಿಕದ ರಾಬರ್ಟ್ ಗ್ಯಾಲವೆ ಅವರೊಂದಿಗೆ ಸೇರಿ ಆಡುತ್ತಿರುವ ಭಾರತದ ಯೂಕಿ ಭಾಂಬ್ರಿ ಈಗಾಗಲೇ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.