ADVERTISEMENT

ಸೆಮಿಗೆ ಜೊಹಾನ್ನಾ ಕೊಂತಾ

ಫ್ರೆಂಚ್‌ ಓಪನ್‌: ನಿಶಿಕೋರಿ, ಸಿಮೋನಾ ಕ್ವಾರ್ಟರ್‌ಗೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:15 IST
Last Updated 4 ಜೂನ್ 2019, 20:15 IST
ಚೆಂಡು ಹಿಂದಿರುಗಿಸಿದ ಕೊಂತಾ– ರಾಯಿಟರ್ಸ್‌ ಚಿತ್ರ
ಚೆಂಡು ಹಿಂದಿರುಗಿಸಿದ ಕೊಂತಾ– ರಾಯಿಟರ್ಸ್‌ ಚಿತ್ರ   

ಪ್ಯಾರಿಸ್‌ (ರಾಯಿಟರ್ಸ್‌): ಅಮೆರಿಕದ ಸ್ಲೋವಾನೆ ಸ್ಟೀಫನ್ಸ್‌ ಸವಾಲು ಮೀರಿದ ಜೊಹಾನ್ನಾ ಕೊಂಟಾ ಮಂಗಳವಾರ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. 6–1, 6–4 ಸೆಟ್‌ಗಳಿಂದ ಗೆದ್ದ ಕೊಂಟಾ ಅವರು 1983ರ ನಂತರ ಫ್ರೆಂಚ್ ಓಪನ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ ಮೊದಲ ಬ್ರಿಟಿಷ್‌ ಮಹಿಳೆ ಎನಿಸಿಕೊಂಡರು.

ಒಂದು ತಾಸಿಗೂ ಅಧಿಕ ಕಾಲ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 28 ವರ್ಷದ ಕೊಂಟಾ ಅವರಿಗೆ ಸ್ಲೋವಾನೆ ಸುಲಭವಾಗಿ ಮಣಿದರು. ಫೈನಲ್‌ನಲ್ಲಿ ಸ್ಥಾನ ಪಡೆಯಲು ಅವರು ಪೆಟ್ರಾ ಮಾರ್ಟಿಕ್‌ ಅಥವಾ ಮರ್ಕೆಟಾ ವೊಂಡ್ರೊಸೊವಾ ಅವರನ್ನು ಎದುರಿಸುವರು.

ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ 3–6, 6–2, 6–2, 7–6 (7/5) ಸೆಟ್‌ಗಳಿಂದ ಜಯಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ADVERTISEMENT

ಅಂತಿಮ ಸೆಟ್‌ನಲ್ಲಿ ಹಿನ್ನಡೆಯಿಂದ ಪುಟಿದೆದ್ದ ಜಪಾನ್‌ನ ಕೀ ನಿಶಿಕೋರಿ, ಫ್ರಾನ್ಸ್‌ನ ಬೆನೋಯಿಟ್‌ ಪೇರ್‌ ವಿರುದ್ಧ 6–2, 6–7 (8/10), 7–5 ಸೆಟ್‌ಗಳ ಜಯ ಸಾಧಿಸಿದರು. ಈ ಪಂದ್ಯ ನಾಲ್ಕು ತಾಸು ನಡೆದದ್ದು ವಿಶೇಷ. ಆಸ್ಟ್ರೇಲಿಯಾದ ಡೊಮಿನಿಕ್‌ ಥೀಮ್‌, ರಷ್ಯಾದ ಕರೆನ್‌ ಕಚನೊವ್‌ ಕೂಡ ಸೋಮವಾರ ರಾತ್ರಿ ತಮ್ಮ ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟರು.

ಮಹಿಳಾ ಸಿಂಗಲ್ಸ್‌ನಲ್ಲಿ ಸೋಮವಾರ ಸಿಮೊನಾ ಹಲೆಪ್‌ ಹಾಗೂ ಅಮಂಡಾ ಅನಿಸಿಮೊವಾ ಕೂಡ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.