ADVERTISEMENT

Wimbledon: ಮೊದಲ ಬಾರಿ ಸೆಮಿಗೆ ಶ್ವಾಂಟೆಕ್

ಏಜೆನ್ಸೀಸ್
Published 10 ಜುಲೈ 2025, 0:31 IST
Last Updated 10 ಜುಲೈ 2025, 0:31 IST
<div class="paragraphs"><p>ಸೆಮಿಫೈನಲ್ ತಲುಪಿದ ಸಂಭ್ರಮದಲ್ಲಿ ಇಗಾ ಶ್ವಾಂಟೆಕ್‌</p></div>

ಸೆಮಿಫೈನಲ್ ತಲುಪಿದ ಸಂಭ್ರಮದಲ್ಲಿ ಇಗಾ ಶ್ವಾಂಟೆಕ್‌

   

ಲಂಡನ್‌: ಪೋಲೆಂಡ್‌ನ ಇಗಾ ಶ್ವಾಂಟೆಕ್ ಮತ್ತು ಸ್ವಿಟ್ಜರ್ಲೆಂಡ್‌ನ ಬೆಲಿಂಡಾ ಬೆನ್ಸಿಕ್ ಅವರು ಬುಧವಾರ ತಮ್ಮ ಎದುರಾಳಿಗಳ ವಿರುದ್ಧ ನೇರ ಸೆಟ್‌ಗಳ ಗೆಲುವಿನೊಡನೆ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ ಮಹಿಳಾ ಸಿಂಗಲ್ಸ್‌ನಲ್ಲಿ ಇದೇ ಮೊದಲ ಬಾರಿ ಸೆಮಿಫೈನಲ್‌ ತಲುಪಿದರು. 

ಎಂಟನೇ ಶ್ರೇಯಾಂಕದ ಶ್ವಾಂಟೆಕ್ ಕ್ವಾರ್ಟರ್‌ಫೈನಲ್‌ನಲ್ಲಿ 6–2, 7–5 ರಿಂದ 19ನೇ ಶ್ರೇಯಾಂಕದ ಲುಡ್ಮಿಲಾ ಸ್ಯಾಮ್ಸನೋವಾ ಅವರನ್ನು ಸೋಲಿಸಿದರು. 

ADVERTISEMENT

‘ಗೆಲುವಿನಿಂದ ರೋಮಾಂಚನ ಗೊಂಡಿದ್ದೇನೆ. ಸಂತಸ ಮತ್ತು ಹೆಮ್ಮೆ ಯಾಗಿದೆ’ ಎಂದು ಐದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ 24 ವರ್ಷ ವಯಸ್ಸಿನ ಶ್ವಾಂಟೆಕ್ ಪ್ರತಿಕ್ರಿಯಿಸಿದರು.

ಗುರುವಾರ ನಡೆಯುವ ಸೆಮಿಫೈನಲ್‌ನಲ್ಲಿ ಅವರು ಶ್ರೇಯಾಂಕರಹಿತ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ ಅವರನ್ನು ಎದುರಿಸ ಲಿದ್ದಾರೆ. ಬೆನ್ಸಿಕ್ ಕೊನೆಯ ಕ್ವಾರ್ಟರ್‌ಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಮಿರಾ ಆಂಡ್ರೀವಾ ಅವರನ್ನು ಹಿಮ್ಮೆಟ್ಟಿಸಿದರು.

ಫ್ರೆಂಚ್‌ ಓಪನ್‌ನಲ್ಲಿ ನಾಲ್ಕು ಬಾರಿ ಮತ್ತು 2022ರಲ್ಲಿ ಅಮೆರಿಕ ಓಪನ್‌ನಲ್ಲಿ ಶ್ವಾಂಟೆಕ್‌ ಚಾಂಪಿಯನ್ ಆಗಿದ್ದರು. ಆದರೆ ಇಲ್ಲಿನ ಹುಲ್ಲಿನಂಕಣದಲ್ಲಿ ಅವರು ಪರದಾಡಿದ್ದೇ ಹೆಚ್ಚು.  ಅವರ ಈ ಹಿಂದಿನ ಉತ್ತಮ ಸಾಧನೆ ಎಂದರೆ 2023ರಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದು.

ಮೊದಲ ಸೆಟ್‌ನಲ್ಲಿ ರಷ್ಯಾ ಆಟಗಾರ್ತಿಯ ವಿರುದ್ಧ ಪ್ರಾಬಲ್ಯ ಸಾಧಿಸಿದ ಶ್ವಾಂಟೆಕ್‌ ಎರಡನೇ ಸೆಟ್‌ನಲ್ಲಿ ಬೆವರು ಹರಿಸಬೇಕಾಯಿತು. ಅಂತಿಮವಾಗಿ 1 ಗಂಟೆ 49 ನಿಮಿಷಗಳಲ್ಲಿ ಪಂದ್ಯ ಗೆದ್ದರು.

ಶ್ವಾಂಟೆಕ್‌ ಎರಡನೇ ಸೆಟ್‌ನಲ್ಲೂ 3–0 ಮುನ್ನಡೆ ಪಡೆದಿದ್ದರು. ಆದರೆ, ಮೊದಲ ಸಲ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಎಂಟರ ಘಟ್ಟ ತಲುಪಿದ್ದ ಸ್ಯಾಮ್ಸನೋವಾ ತಿರುಗಿ ಬಿದ್ದರು. ಸ್ಕೋರ್ ಕ್ರಮೇಣ 4–4 ರಲ್ಲಿ ಸಮನಾಯಿತು. ನಂತರ 6–5ರಲ್ಲಿ ಮುನ್ನಡೆ ಪಡೆದ ಪೋಲೆಂಡ್‌ ಆಟಗಾರ್ತಿ ಎದುರಾಳಿಯ ಸರ್ವ್‌ ಮುರಿದು ಪಂದ್ಯ ಮುಗಿಸಿದರು.

ಆಂಡ್ರೀವಾ ನಿರ್ಗಮನ: ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಕೊನೆಯ ಕ್ವಾರ್ಟರ್‌ಫೈನಲ್‌ನಲ್ಲಿ ಬೆಲಿಂಡಾ 7–6 (7–3), 7–6 (7–2) ರಿಂದ 18 ವರ್ಷದ ಮಿಯೆರಾ ಆಂಡ್ರೀವಾ ಅವರನ್ನು ಹಿಮ್ಮೆಟ್ಟಿಸಿದರು.

ಮಾಜಿ ಒಲಿಂಪಿಕ್ ಚಾಂಪಿಯನ್ ಬೆನ್ಸಿಕ್‌, 2024ರ ಏಪ್ರಿಲ್‌ನಲ್ಲಿ ಮಗುವಿಗೆ ಜನ್ಮನೀಡಿದ್ದರು. ಆದರೆ ಮಾತೃತ್ವ ರಜೆ ಮುಗಿಸಿ ಪುನರಾಗಮನ ಮಾಡಿದ ನಂತರ ಮತ್ತೆ ವಿಶ್ವದ ಅಗ್ರ 34ರೊಳಗೆ ಸ್ಥಾನ ಪಡೆದಿದ್ದಾರೆ. 

ಈ ಹಿಂದೆ 2019ರಲ್ಲಿ ಅಮೆರಿಕ ಓಪನ್ ಟೂರ್ನಿಯ ಸೆಮಿಫೈನಲ್ ತಲುಪಿದ್ದೇ ಗ್ರ್ಯಾನ್‌ಸ್ಲಾಮ್‌ನಲ್ಲಿ ಬೆನ್ಸಿಕ್ ಅವರ ಶ್ರೇಷ್ಠ ಸಾಧನೆ ಆಗಿತ್ತು. ನಂತರ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು.

27 ವರ್ಷಗಳ ಹಿಂದೆ ಮಾರ್ಟಿನಾ ಹಿಂಗಿಸ್‌ ಸೆಮಿಫೈನಲ್ ತಲುಪಿದ ನಂತರ ಈ ಹಂತ ತಲುಪಿದ ಸ್ವಿಜರ್ಲೆಂಡ್‌ನ ಮೊದಲ ಆಟಗಾರ್ತಿ ಎಂಬ ಗೌರವವೂ ಬೆನ್ಸಿಕ್ ಅವರದಾಯಿತು.

18 ವರ್ಷ ವಯಸ್ಸಿನ ಆಂಡ್ರೀವಾ ಮಹಿಳಾ ಟೆನಿಸ್‌ನ ಉದಯೋನ್ಮುಖ ತಾರೆ ಎನಿಸಿದ್ದಾರೆ. 2007ರಲ್ಲಿ ನಿಕೋಲ್ ವೈದಿಸೋವಾ ಬಳಿಕ ವಿಂಬಲ್ಡನ್ ಎಂಟರ ಘಟ್ಟ ತಲುಪಿದ ಅತಿ ಕಿರಿ ವಯಸ್ಸಿನ ಆಟಗಾರ್ತಿ ಕೂಡ. ಮಾಜಿ ಚಾಂಪಿಯನ್ ಕೊಂಚಿಟಾ ಮಾರ್ಟಿನೆಝ್ ಅವರ ಗರಡಿಯಲ್ಲಿರುವ
ಮಿರಾ ಆಂಡ್ರೀವಾ ಮೊದಲ ನಾಲ್ಕು ಸುತ್ತುಗಳಲ್ಲಿ ಒಂದೂ ಸೆಟ್‌
ಕಳೆದುಕೊಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.